ಮೀನುಗಾರಿಕಾ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ: ನಾಡ ದೋಣಿಗಳ ಮರು ಪರಿಶೀಲನೆಗೆ ಆಗ್ರಹ

ಭಟ್ಕಳ: ನಾಡ ದೋಣಿ ಪರೀಶೀಲನೆಗೆಂದು ಬಂದು ಮೀನುಗಾರರೊಡನೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ನೂರಾರು ಮೀನುಗಾರರು ಭಟ್ಕಳದ ಮೀನುಗಾರಿಕೆ ಕಚೇರಿಗೆ ಮುತ್ತಿಗೆ ಹಾಕಿ, ಬೀಗ ಜಡಿದು ಪ್ರತಿಬಟನೆ ನಡೆಸಿದ ಘಟನೆ ಗುರುವಾರ ನಡೆದಿದೆ.
 ನಾಡ ದೋಣಿ ತಪಾಸಣೆಗೆ ಬಂದ ಕಾರವಾರ ಮೀನುಗಾರಿಕೆ ಸಹಾಯಕ ಉಪನಿರ್ದೇಶಕ ವೆಂಕಟ್ರಮಣ ಹೆಗಡೆ ಭಟ್ಕಳಕ್ಕೆ ಬಂದಿದ್ದರು. ಈ ಸಂಧರ್ಭದಲ್ಲಿ ಮುಂಡಳ್ಳಿ ಮತ್ತು ಬೆಳಕೆಯಲ್ಲಿ ನೀರಿಗಿಳಿದ ನಾಡದೋಣಿಗಳನ್ನಷ್ಟೆ ಪರಿಶೀಲನೆ ನಡೆಸಿದ್ದರು. ಈ ಮಳೆಗಾಲದಲ್ಲೂ ದೋಣಿಗಳು ನೀರಲ್ಲಿ ಇರಬೇಕಾಗುತ್ತದೆ ನೀರಲ್ಲಿ ಇದ್ದಂತ ದೋಣಿಗಳನ್ನು ಮಾತ್ರ ನೋಂದಣೆ ಮಾಡಿಕೊಳ್ಳಲಾಗುತ್ತದೆ ಎಂದು ಬೇಜವಾಬ್ದಾರಿ ಉತ್ತರ ನೀಡಿದ್ದರು.
ಸುಸ್ಥಿತಿಯಲ್ಲಿ ದಡದಲ್ಲಿರುವ ದೋಣಿಯನ್ನು ಪರಿಶೀಲಸಬೇಕು. ದೋಣಿಯ ದಾಖಲೆ ಪತ್ರವನ್ನು ನಾವು ತೋರಿಸಲು ಸಿದ್ದರಿದ್ದೇವೆ ಎಂದು ಮೀನುಗಾರರು ಪಟ್ಟು ಹಿಡಿದರು ವೆಂಕಟ್ರಮಣ ಹೆಗಡೆ ಸ್ಪಂದಿಸಿಲ್ಲ. ಮೀನುಗಾರರೊಡನೆ ಮಾತಿಗೆ ಮಾತು ಬೆಳೆದು ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಗಿ, ಸಮಯದ ಮೊದಲೆ ಅವರು ಅಲ್ಲಿಂದ ತೆರಳಿದ್ದಾರೆ. ಇದರಿಂದ ಆಕ್ರೋಶಗೊಂಡ ಮೀನುಗಾರರು ಗುರುವಾರ ಮೀನುಗಾರಿಕೆ ಕಚೇರಿಗೆ ತೆರಳಿ ಬೀಗ ಜಡಿದು ಪ್ರತಿಭಟನೆ ನಡೆಸಿದ್ದಾರೆ.
ಈ ಸಂದರ್ಬದಲ್ಲಿ  ಪರಿಶಿಷ್ಟ ಜಾತಿ ಮೀನುಗಾರರ ಸಂಘ ಬೆಳಕೆಯ ಸ್ಥಾಪಕ ಅಧ್ಯಕ್ಷ ಬಾಸ್ಕರ ಮೊಗೇರ  ಮಾತನಾಡಿ ಭಟ್ಕಳ ತಾಲೂಕ ನಾಡ ದೋಣಿಗಳ ತಪಾಸಣೆಗಾಗಿ ಎ.ಡಿ ಒನ್ ಅಧಿಕಾರಿಯನ್ನು ನೇಮಿಸಲಾಗಿದ್ದು, ಆದರೆ ಈ ಅಧಿಕಾರಿಯು ಭಟ್ಕಳ ತಾಲೂಕಿಗೆ ತುಂಬ ಅನ್ಯಾಯ ಮಾಡಿದ್ದಾರೆ. ದೋಣಿಗಳ ಸರ್ವೆಯನ್ನು ನಡೆಸಲು ದೋಣಿಗಳು ನೀರಲ್ಲೆ ಇರಬೇಕು ಇಲ್ಲದಿದ್ದಲ್ಲಿ ಸರ್ವೇ ನಡೆಸಲಾಗುದಿಲ್ಲಾ ಎಂದಿದ್ದು, ಸಮಂಜಸವಲ್ಲ. ಅಲ್ಲದೇ ಭಟ್ಕಳದ ಜನರು ಸುಸಂಸ್ಕೃತರಲ್ಲ, ಇಲ್ಲಿಯ ಜನಗಳು ಸರಿಯಿಲ್ಲಾ ಎಂದು ಭಟ್ಕಳದ ಜನತೆಗೆ ಅವಮಾನ ಮಾಡಿದ್ದಾರೆ. ಆದ್ದರಿಂದ ನಮಗೆ ಈ ಅಧಿಕಾರಿಯನ್ನು ವರ್ಗಾವಣೆಗೊಳಿಸಿ ಹಾಗು ನಮಗೆ ನ್ಯಾಯ ಒದಗಿಸಿಕೊಡಬೇಕು. ನಾವು ತೋರಿಸುವ ದೋಣಿಗಳನ್ನು ನೊಂದಣಿ ಮಾಡಿಕೊಡಬೇಕು. ನಮ್ಮ ಎಲ್ಲಾ ದೋಣಿಗಳಿಗೆ ದಾಖಲೆಗಳಿವೆ. ಯಾವುದು ಕಾನೂನು ಬಾಹಿರವಾಗಿರುದಿಲ್ಲಾ. ಈ ಮಳೆಗಾಲದ ಸಂಧರ್ಭದಲ್ಲಿ ಸಮುದ್ರದಲ್ಲಿ ತೂಪಾನ್ ಭಯ ಇರುದರಿಂದ ದೋಣಿಗಳನ್ನು ಸಮುದ್ರಕ್ಕೆ ಇಳಿಸಲು ಭಯವಾಗುತ್ತದೆ. ಆದ್ದರಿಂದ ನಮ್ಮ ದೋಣಿಗಳನ್ನು ಇರುವಲ್ಲಿಯೇ ಪರಿಶಿಲಿಸಬೇಕು. ಮತ್ತು ನಮ್ಮನ್ನು ಅವಮಾನ ಗೊಳಿಸಿದ ಅಧಿಕಾರಿಯನ್ನು ವರ್ಗಾವಣೆಗೊಳಿಸಬೇಕು. ಜಿಲ್ಲಾಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ನಮಗೆ ನ್ಯಾಯ ಒದಗಿಸದಿದ್ದ ಪಕ್ಷದಲ್ಲಿ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ನಡೆಸುತ್ತೇವೆ ಎಂದರು.
ನಾಡದೋಣಿ ಮೀನುಗಾರರ ಸಂಘದ ಕಾರ್ಯದರ್ಶಿ ಸೋಮನಾಥ ಮೋಗೇರ ಮಾತನಾಡಿ ಜಿಲ್ಲಾಧಿಕಾರಿಗಳ  ಆದೇಶದಂತೆ ಭಟ್ಕಳ ತಾಲೂಕ ನಾಡದೋಣಿ ಪರಿಶೀಲನೆಯ ಸಂಧರ್ಭದಲ್ಲಿ ಕಾರವಾರದ ಮೀನುಗಾರಿಕೆಯ ಸಹಾಯಕ ಉಪನಿರ್ದೇಶಕ ವೆಂಕಟ್ರಮಣ ಹೆಗಡೆ ಸರಿಯಾಗಿ ಪರಿಶೀಲನೆಯನ್ನು ನಡೆಸಿಲ್ಲ. ಅಲ್ಲದೇ ಪರಿಶೀಲನಾ ಸಮಯದ ಮೊದಲೇ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೇ ವಾಪಾಸ್ ಆಗಿದ್ದಾರೆ. ನಮ್ಮ ಎಲ್ಲಾ ದೋಣಿಗಳು ಸುಸ್ಥಿತಿಯಲ್ಲಿವೆ. ಇನ್ನು ಈಗ ಮಳೆಗಾಲದ ಸಮಯವಾಗಿರುವುದರಿಂದ ದೋಣಿಗಳು ಮೀನುಗಾರಿಕೆಗೆ ತೆರಳುವುದು ಸೆಪ್ಟೆಂಬರ್ ಒಂದನೇ ತಾರೀಕಿಗೆ ಆದ್ದರಿಂದ ಈಗ ಕೇವಲ 10% ದೋಣಿಗಳು ನೀರಿಗಿಳಿದಿದೆ. ಇನ್ನು 90% ದೋಣಿಗಳು ಇನ್ನು ನೀರಿಗಿಳಿದಿಲ್ಲ. ಈ ಕಾರಣಕ್ಕೆ ಪುನಃ ಎಲ್ಲಾ ದೋಣಿಗಳನ್ನು ಪರಿಶೀಲನೆ ಮಾಡಿ ನಮಗೆ ನ್ಯಾಯ ಒದಗಿಸಿಕೊಡಬೇಕು. ಬೇಜವಾಬ್ದಾರಿ ತೋರಿದ ವೆಂಕಟರಮಣ ಹೆಗಡೆಯಂತ ಅಧಿಕಾರಿಗಳು ನಮ್ಮ ಜಿಲ್ಲೆಗೆ ಬೇಡ ಯಾಕೆಂದರೆ ಅವರು ನಮ್ಮ ಇಡಿ ತಾಲೂಕಿಗೆ ಅವಮಾನ ಮಾಡಿ ಹೋಗಿದ್ದಾರೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.
 ಪ್ರತಿಕ್ರಿಯಿಸಿದ  ಮೀನುಗಾರಿಕೆ ಉಪನಿರ್ದೇಶಕ ಎಮ್.ಎಲ್. ದೊಡ್ಡಮನಿ “  ನಾಡದೋಣಿ ಮೀನುಗಾರರ ದೋಣಿಯ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಯಾವುದೇ ಮೀನುಗಾರರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲಾಗುವದು. ಬುಧವಾರದಂದು ತಪಾಸಣೆಗೆ ಬಂದ ತಂಡ ಕೆಲವೊಂದು ಕಡೆಗಳಲ್ಲಿ ಪರಿಶೀಲನೆ ಮಾಡದೇ ತೆರಳಿರುವುದು ಎಂದು ಮೀನುಗಾರರ ಆಪಾದನೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ತಪಾಸಣೆಯಲ್ಲಿ ಬಿಟ್ಟು ಹೋದ ದೋಣಿಗಳ ಪರಿಶೀಲನೆ ಮತ್ತೆ ಮಾಡಿ ಯೋಗ್ಯವಿದ್ದರೆ ಸೀಮೆಎಣ್ಣೆ ನೀಡುವುದಾಗಿ ತಿಳಿಸಿದ್ದಾರೆ. ಅದೇ ರೀತಿ ಬಂದಂತಹ ಅಧಿಕಾರಿ ಭಟ್ಕಳದ ಬಗ್ಗೆ ಅವಹೇಳನಕಾರಿ ಮಾತನಾಡಿದ್ದು ನನ್ನ ಗಮನಕ್ಕೆ ಬಂದಿಲ್ಲ. ಒಂದು ವೇಳೆ ಮಾತನಾಡಿದ್ದರೆ ಈ ಬಗ್ಗೆ ತಿಳುವಳಿಕೆ ಹೇಳಲಾಗುವುದು ಎಂದರು.
ಬಳಿಕ ಮೀನುಗಾರಿಕೆ ಉಪನಿರ್ದೇಶಕ ಎಮ್.ಎಲ್. ದೊಡ್ಡಮನಿ ಅವರು ಸ್ವತಃ ಮೀನುಗಾರರೊಂದಿಗೆ ತೆರಳಿ ಮುಂಡಳ್ಳಿ, ಬೆಳಕೆ, ಬೆಳ್ನಿ ತೆರಳಿ ಪರಿಶೀಲನೆ ನಡೆಸಿದ್ದಾರೆ. 

Categories: ಜಿಲ್ಲಾ ಸುದ್ದಿ

Leave A Reply

Your email address will not be published.