ಜಿಎಸ್‍ಟಿ ಭ್ರಷ್ಟತೆಯನ್ನು ಕಡಿಮೆ ಮಾಡಿ ಪಾರದರ್ಶಕ ಆಡಳಿತ ನಡೆಸಲು ಅನುಕೂಲವಾಗಿದೆ: ಸುಬ್ರಾಯ ಹೆಗಡೆ


ಶಿರಸಿ: ಕೇಂದ್ರ ಸರ್ಕಾರವು ಸರಕು ಮತ್ತು ಸೇವಾ ತೆರಿಗೆ ಅನುಷ್ಠಾನಗೊಳಿಸಿದ ನಂತರ ವ್ಯಾಪಾರಸ್ಥರು ಮೊದಲ ರಿಟರ್ನ್ಸ್ ಸಲ್ಲಿಸಲು ಆಗಸ್ಟ್ 20 ಕೊನೆಯ ದಿನವಾಗಿದ್ದು, ಈ ಹೊಸ ತೆರಿಗೆ ಅನುಸರಿಸುವುದರಿಂದ ನಮ್ಮ ಜೀವನವನ್ನು ಸಂಕೀರ್ಣದಿಂದ ಸರಳತೆಗೆ ತರಬಹುದು ಎಂದು ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಜಂಟಿ ಆಯುಕ್ತ ಸುಬ್ರಾಯ ಹೆಗಡೆ ಹೇಳಿದರು.
ಇಲ್ಲಿನ ಟಿ.ಎಂ.ಎಸ್. ಸಭಾಂಗಣದಲ್ಲಿ ಶುಕ್ರವಾರ ನಡೆದ ಸರಕು ಮತ್ತು ಸೇವಾ ತೆರಿಗೆ ಮಾಹಿತಿ ಶಿಬಿರದಲ್ಲಿ ಪಾಲ್ಗೊಂಡು ವ್ಯಾಪಾರಸ್ಥರಿಗೆ ಮಾಹಿತಿ ನೀಡಿದರು.
ಅಲ್ಲದೆ ಉತ್ಪಾದನೆ, ಮಾರಾಟ, ಬಳಕೆ ವಸ್ತುಗಳು ಮತ್ತು ಸೇವೆಗಳ ಮೇಲೆ ರಾಷ್ಟ್ರೀಯ ಮಟ್ಟದಲ್ಲಿ ಹೇರಲಾಗುವ ಸಮಗ್ರ ತೆರಿಗೆಗೆ ಸರಕು ಮತ್ತು ಸೇವಾ ತೆರಿಗೆಯಾಗಿದೆ. ಇದು ಭಾರತದ ಅತಿ ದೊಡ್ಡ ಸೇವಾ ತೆರಿಗೆಗಳಲ್ಲೊಂದು ಎಂದು ಹೇಳಲಾಗುತ್ತದೆ. ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಅಥವಾ ಸೇವೆಗಳನ್ನು ಪಡೆದುಕೊಳ್ಳುವಾಗ ಪ್ರತಿ ಹಂತದಲ್ಲಿಯೂ ವಿಧಿಸುವ ತೆರಿಗೆಯಾಗಿರುತ್ತದೆ. ಈ ತೆರಿಗೆ ವಿಧಾನ ಈಗಾಗಲೇ ವಿಶ್ವದ 150 ದೇಶಗಳಲ್ಲಿ ಜಾರಿಯಲ್ಲಿದೆ. ಇದು ಇಡೀ ದೇಶವನ್ನು ಸಮಾನ ಮಾರುಕಟ್ಟೆಯಡಿ ತರಲಿದ್ದು, ಎಲ್ಲಾ ಪರೋಕ್ಷ ತೆರಿಗೆಗಳನ್ನು ಬದಲಾಯಿಸಿ ಒಂದೇ ತೆರಿಗೆ ವ್ಯವಸ್ಥೆಯಡಿ ತರಲಿದೆ ಎಂದರು.
ಜಿಎಸ್‍ಟಿ ಜಾರಿಯಿಂದ ದೇಶಾದ್ಯಂತ ಯಾವುದೇ ಅಡೆತಡೆಯಿಲ್ಲದೆ ವಹಿವಾಟು ನಡೆಸಬಹುದು. ವಹಿವಾಟು ವೆಚ್ಚ ಕೂಡ ಕಡಿಮೆಯಾಗುತ್ತದೆ. ಭಾರತದ ಆರ್ಥಿಕ ಮಟ್ಟ ಸುಧಾರಣೆಯಾಗುತ್ತಿರುವ ಇಂದಿನ ದಿನಗಳಲ್ಲಿ ಈ ತೆರಿಗೆ ಪದ್ದತಿ ಪ್ರಸ್ತುತವಾಗಿದೆ. ಇದು ಭ್ರಷ್ಟತೆಯನ್ನು ಕಡಿಮೆ ಮಾಡಿ ಹೆಚ್ಚು ಪಾರದರ್ಶಕವಾಗಿ ಆಡಳಿತ ನಡೆಸಲು ಅನುಕೂಲವಾಗುತ್ತದೆ ಎಂದ ಅವರು, ಜಿಎಸ್‍ಟಿ ತೆರಿಗೆ ವಿಧಾನಗಳನ್ನು ಸರಳಗೊಳಿಸಿ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ. ಇದರಿಂದ ಅಂತಿಮವಾಗಿ ಗ್ರಾಹಕರಿಗೆ ಅನುಕೂಲವಾಗುತ್ತದೆ. ಅಲ್ಲದೆ ಭಾರತದ ಜಿಡಿಪಿ ಮತ್ತು ಆದಾಯ ಹೆಚ್ಚಾಗಲಿದ್ದು, ಗ್ರಾಹಕರಿಗೆ ಈ ತೆರಿಗೆಯಿಂದ ಪರೋಕ್ಷ ಲಾಭ ಹೆಚ್ಚಲಿದೆ ಎಂದು ಹೇಳಿದರು.
ವ್ಯಕ್ತಿಯೊಬ್ಬ ಉತ್ಪಾದನ ಘಟಕವನ್ನು ತೆರೆದಿದ್ದರೆ ಅದಕ್ಕೆ ಆತ ಕೇಂದ್ರ ಸರ್ಕಾರಕ್ಕೆ ತೆರಿಗೆ ಕಟ್ಟಬೇಕು ಜೊತೆಗೆ ಪ್ರತ್ಯೇಕ ರಿಟರ್ನ್ ಫೈಲ್ ಮಾಡಬೇಕು. ಆದರೆ ಆತ ಬೇರೆ ಚಿಲ್ಲರೆ ಗ್ರಾಹಕರಿಗೆ ನಿಮ್ಮ ಉತ್ಪನ್ನಗಳನ್ನು ಪೂರೈಸುವಾಗ ತೆರಿಗೆ ಕಟ್ಟಬೇಕಾಗಿಲ್ಲ ಹಾಗೂ ರಿಟರ್ನ್ ಫೈಲ್ ಮಾಡಬೇಕಾಗಿಲ್ಲ. ಜಿಎಸ್‍ಟಿ ಇಡೀ ದೇಶಕ್ಕೆ ಏಕರೂಪ ತೆರಿಗೆ ವಿಧಾನವಾಗಿರುವುದರಿಂದ ಬೇರೆ ರಾಜ್ಯಗಳಲ್ಲಿ ಕಂಪೆನಿ ಆರಂಭಿಸಬೇಕೆಂದಿದ್ದರೆ ಅಲ್ಲಿ ತೆರಿಗೆ ಕಟ್ಟಬೇಕಾಗಿಲ್ಲ. ಹಾಗಾಗಿ ಇದು ಸರಳವೆನಿಸುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಾಣಿಜ್ಯ ತೆರಿಗೆ ಜಂಟಿ ಆಯುಕ್ತ ಎಸ್.ಉದಯ ಶಂಕರ ಮಾತನಾಡಿ, ವಿಭಾಗದ 4 ಜಿಲ್ಲೆಗಳಲ್ಲಿ ಕಾರ್ಯಾಗಾರ ನಡೆದಲಾಗಿದೆ. ಈಗ ಮೈಗ್ರೇಶನ್ ಆಗದವರು ಮಾಡಬೇಕಿದ್ದು, ನಂತರ 3ಬಿ ಮಾಡಿಸಿ ಜಿಎಸ್‍ಟಿ ಜೊತೆ ಸಾಗಬೇಕು. ಬಗೆಹರಿಯದ ಸಮಸ್ಯೆಗಳನ್ನು ಇಲಾಖೆ ಗಮನಕ್ಕೆ ತಂದರೆ ಪರಿಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಈ ವೇಳೆ ಮಾತನಾಡಿದ ವಾಣಿಜ್ಯ ತೆರಿಗೆ (ಜಾರಿ) ಜಂಟಿ ಆಯುಕ್ತ ಎಸ್. ಪ್ರತಾಪಕುಮಾರ, ಜಿಎಸ್‍ಟಿ ಬಗ್ಗೆ ಸಾಕಷ್ಟು ಜಾಗೃತಿ ಮೂಡಿಸಲಾಗಿದೆ. ವ್ಯಾಪಾರಿಗಳ ಸಹಕಾರದಲ್ಲಿ ನಿಧಾನವಾಗಿ ಮುನ್ನುಗ್ಗಲಾಗುತ್ತಿದೆ. ಹೀಗಾಗಿ ವ್ಯಾಪಾರಿಗಳ ಬೆಂಬಲ ಜಿಎಸ್‍ಟಿ ಜಾರಿಯಲ್ಲಿ ಇರಬೇಕು ಎಂದರು.
ತೆರಿಗೆ ಅಧಿಕಾರಿ ಪರ್ವತಿ ಗೌಡ, ವ್ಯಾಪಾರೋದ್ಯಮ ಸಂಘದ ಅಧ್ಯಕ್ಷ ಜಿ.ಜಿ.ಹೆಗಡೆ, ಹಿರಿಯ ತೆರಿಗೆ ಸಲಹೆಗಾರ ಸುಧೀರ ಭಟ್ಟ ಹಾಗೂ ಇತರರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.