ಚಿಂತೆಯನ್ನು ದಾಟಬೇಕೆಂದರೆ ಸತ್ವಗುಣವನ್ನು ಹಿಡಿದುಕೊಳ್ಳಬೇಕು: ಸ್ವರ್ಣವಲ್ಲೀ ಶ್ರೀ

ಶಿರಸಿ: ಭಗವಂತನ ಧ್ಯಾನ ಮಾಡಿದಷ್ಟೂ ಚಿಂತೆ ದೂರವಾಗುತ್ತದೆ. ಹೊರಗೆ ಲೋಕಾಸಕ್ತಿ ಇದ್ದರೂ ಅಂತರ್ಯದಲ್ಲಿ ಭಗವಚ್ಚಿಂತನೆ ಇರಬೇಕು. ಹೊರಗೆ ಸಂಸ್ಕೃತಿ ಭಾರ ಇದ್ದರೂ ಒಳಗೆ ನಿರಾಸಕ್ತಿ ಇರಬೇಕು. ಇವುಗಳನ್ನು ಹತೋಟಿಯಲ್ಲಿಡಲು ಮನಸ್ಸೇ ನಿಜವಾದ ಶಕ್ತಿಯಾಗಿದೆ. ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.
ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ನಡೆಯುತ್ತಿರುವ ಚಾತುರ್ಮಾಸ್ಯದ ನಿಮಿತ್ತ ತೋಟದ ಸೀಮಾ ಭಾಗದ ಶಿಷ್ಯ ಭಕ್ತರು ಸಮರ್ಪಿಸಿದ ಸೇವೆಯನ್ನು ಸ್ವೀಕರಿಸಿ ಶುಕ್ರವಾರ ಆಶೀರ್ವಚನ ನೀಡಿದರು.
ಸಾಮಾನ್ಯವಾಗಿ ಎಲ್ಲರಿಗೂ ಇರುವ ಚಿಂತೆ ಏನೆಂದರೆ ನಿಶ್ಚಿಂತೆಯಾಗಿ ಹೇಗೆ ಇರುವುದು ಎನ್ನುವುದೇ ಒಂದು ಚಿಂತೆಯಾಗಿದೆ. ಪರಮಾತ್ಮನ ಧ್ಯಾನದ ಕಡೆಗೆ ಮನಸ್ಸನ್ನು ಒಯ್ಯಬೇಕು ಎಂದರು.
ರಜೋಗುಣ ಮತ್ತು ತಮೋಗುಣಗಳ ಮಿಶ್ರಣವೇ ಚಿಂತೆ. ರಜೋಗುಣವೆಂದರೆ ಚಂಚಲತೆ. ತಮೋಗುಣವೆಂದರೆ ಮಂಕಾಗುವುದು. ಚಿಂತೆಯನ್ನು ದಾಟಬೇಕೆಂದರೆ ಸತ್ವಗುಣವನ್ನು ಹಿಡಿದುಕೊಳ್ಳಬೇಕು ಎಂದ ಶ್ರೀಗಳು, ಇಂದಿನ ವ್ಯಾವಹಾರಿಕ ಜೀವನದಲ್ಲಿ ಒಂದಾದಮೇಲೆ ಒಂದರಂತೆ ಸಮಸ್ಯೆಗಳು ಬರುತ್ತಲೇ ಇರುತ್ತದೆ. ವ್ಯಾವಹಾರಿಕ, ಆರೋಗ್ಯ, ಕುಟುಂಬ, ಸಾಲ ಇತ್ಯಾದಿ ಸಮಸ್ಯೆಗಳಿಂದ ಚಿಂತೆಗೆ ಒಳಗಾಗುತ್ತೇವೆ. ಚಿಂತೆಗೆ ಒಳಗಾಗಬಾರದು ಎಂದು ಹಂಬಲಿಸಿದರೂ ಅದು ಸಾಧ್ಯವಾಗುವುದಿಲ್ಲ. ಇಂದಿನ ದಿನಮಾನದಲ್ಲಿ ನೂರಕ್ಕೆ 75ರಷ್ಟು ಜನರು ಸುಖವಾಗಿ ನಿದ್ರೆಯನ್ನೂ ಮಾಡುತ್ತಿಲ್ಲ. ಚಿಂತೆಯಿಂದ ಮನಸ್ಥಿತಿ ಹಾಳಾಗುವುದಲ್ಲದೇ ಮಾನಸಿಕ ರೋಗಕ್ಕೆ ಕಾರಣವಾಗುತ್ತದೆ ಎಂದರು.
ಭಗವದ್ಗೀತೆಯ ಆರನೇ ಅಧ್ಯಾಯದಲ್ಲೂ ಆತ್ಮ ಸಂಯಮಯೋಗ, ಧ್ಯಾನಯೋಗದಲ್ಲಿ ಮನಸ್ಸನ್ನು ಭಗವಂತನಲ್ಲಿ ನೆಲೆಗೊಳಿಸಿದರೆ ಅಥವಾ ಭಗವಂತನ ಧ್ಯಾನವನ್ನು ಮಾಡಿದಷ್ಟೂ ಚಿಂತೆ ದೂರವಾಗುತ್ತದೆ. ಸ್ವಪ್ನವಿಲ್ಲದ ಗಾಢನಿದ್ರೆಯೇ ಸುಖವಾದ ನಿದ್ರೆ. ಶುಚಿಯಾದ ಪ್ರದೇಶದಲ್ಲಿ ಶುದ್ಧಾಸನದಲ್ಲಿ ಧ್ಯಾನಸಕ್ತನಾಗಿರಬೇಕು. ರಾತ್ರಿ ಮಲಗುವ ಮುನ್ನ 15 ನಿಮಿಷ ದೇವರ ಧ್ಯಾನವನ್ನು ಮಾಡಬೇಕು. ಮನಸ್ಸು ವಿಕ್ಷೇಪಗೊಳಿಸುವ ಸಾಧನ ದೂರದರ್ಶನ, ಇವುಗಳಿಂದ ಹೆಚ್ಚು ಹೆಚ್ಚು ದೂರವಿರಬೇಕು ಎಂದು ತಿಳಿಸಿದರು.
ಚಾತುರ್ಮಾಸ್ಯ ನಿಮಿತ್ತ ತೋಟದ ಸೀಮೆ ಭಾಗಿಯ ಮಾತೆಯರು ಹಾಗೂ ಭಕ್ತ ಮಹನೀಯರು ಬೆಳಗ್ಗೆ ಕುಂಕುಮಾರ್ಚನೆ, ಭಗವದ್ಗೀತಾ ಪಠನ, ಗಾಯತ್ರಿ ಜಪ, ಭಿಕ್ಷಾಸೇವೆ, ಪಾದುಕಾಪೂಜೆ ನೆರವೇರಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.