‘ಕಾಡಿನ ಕತೆಗಳು ‘ ಪರಿಸರ ಪತ್ರಿಕೋದ್ಯಮ ಶಿಬಿರ

ಶಿರಸಿ: ರಾಜ್ಯದ ಯುವ ಪತ್ರಕರ್ತರಿಗಾಗಿ `ಕಾಡಿನ ಕತೆಗಳು’ ಪರಿಸರ ಪತ್ರಿಕೋದ್ಯಮ ಶಿಬಿರವನ್ನು ಮಾಧ್ಯಮ ಸಂಸ್ಕೃತಿ ಅಭಿವೃದ್ಧಿ ಕೇಂದ್ರ ಏರ್ಪಡಿಸಿದೆ. 
ತಾಲೂಕಿನ ಕಳವೆಯ ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರದಲ್ಲಿ ಅ. 12ರಿಂದ 14ರವರೆಗೆ ಶಿಬಿರ ನಡೆಯಲಿದೆ. ಬರಹಗಾರ ಹಾಗೂ ಕರ್ನಾಟಕ ರಾಜ್ಯ ಡಾ|ಗಂಗೂಬಾಯಿ ಹಾನಗಲ್ ಸಂಗೀತ ಹಾಗೂ ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಕುಲಸಚಿವ ಡಾ.ನಿರಂಜನ ವಾನಳ್ಳಿ, ಕತೆಗಾರ ಜೋಗಿ, ಪತ್ರಕರ್ತ ಜಗದೀಶ ಕೊಪ್ಪ, ಅಂಕಣಕಾರ ಪೂರ್ಣಪ್ರಜ್ಞ ಬೇಳೂರು, ಬರಹಗಾರ ಶಿವಾನಂದ ಕಳವೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು.
ಪರಿಸರ ಪತ್ರಿಕೋದ್ಯಮದಲ್ಲಿ ಕ್ಷೇತ್ರಕಾರ್ಯ, ಮಾಹಿತಿ ಸಂಗ್ರಹ, ಸಂದರ್ಶನ, ಛಾಯಾಗ್ರಹಣ, ಲೇಖನ, ನುಡಿಚಿತ್ರ ಬರವಣಿಗೆಯ ವಿಶೇಷ ತರಬೇತಿ ಇದಾಗಿದೆ.  ಯುವ ಪತ್ರಕರ್ತರಲ್ಲಿ ಸಾಹಿತ್ಯ ಅಭಿರುಚಿ ಹೆಚ್ಚಬೇಕು. ಓದು, ಮಾತುಕತೆ, ಪ್ರವಾಸ ಮೂಲಕ ಭಾಷೆಯ ಪರಿಣಾಮಕಾರಿ ಕಲಿಕೆ ಸಾಧ್ಯವಿದೆ. ಸಂಗೀತ, ಯಕ್ಷಗಾನ, ಸಿನೆಮಾ,  ಪ್ರವಾಸ, ಸಾಹಿತ್ಯ ಕೃತಿಗಳ ಓದಿನ ಹವ್ಯಾಸಗಳಿಲ್ಲ.  ಯಾಂತ್ರಿಕ ಬದುಕು ಯುವ ಪತ್ರಕರ್ತರನ್ನು ಆವರಿಸುತ್ತಿದೆ. ಕುವೆಂಪು, ಶಿವರಾಮ ಕಾರಂತ, ಪೂರ್ಣಚಂದ್ರ ತೇಜಸ್ವಿಯವರ ಕೃತಿಗಳು ಇಂದಿಗೂ ಓದಿಗೆ ಸೆಳೆಯುತ್ತವೆ.  ಪರಿಸರದಲ್ಲಿ ಮುಳುಗೆದ್ದ ಸಾಧಕರ ದಟ್ಟ ಅನುಭವಗಳು ಭಾಷೆಯಲ್ಲಿ ಹೇಗೆ ಕೆಲಸ ಮಾಡಿದೆಯೆಂದು ಯುವ ಪತ್ರಕರ್ತರು ಈ ಮೂಲಕ ಅರಿಯಬೇಕು. ಸುತ್ತಲಿನ ಸಮಾಜದ ಒಡನಾಟದಲ್ಲಿ ಕಲಿಕೆಯ ಸಾಧ್ಯತೆ ಅರ್ಥಮಾಡಿಕೊಳ್ಳಬೇಕು.  ರಚನಾತ್ಮಕ ಬದಲಾವಣೆ, ಸಕಾರಾತ್ಮಕ ಚಿಂತನೆ ಮೂಡಿಸಲು ಶಿಬಿರ ನಡೆಯಲಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.