ರಾಷ್ಟ್ರೀಯ ವಾದದ ಪಿತಾಮಹ ಲೋಕಮಾನ್ಯ ಬಾಲಗಂಗಾಧರ ತಿಲಕ್

ವ್ಯಕ್ತಿ-ವಿಶೇಷ: ‘ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ನಾನು ಅದನ್ನು ಪಡೆದೇ ತೀರುತ್ತೇನೆ’ ಎಂದು ಮೊದಲ ಬಾರಿಗೆ ಗುಡುಗಿ ಪರಕೀಯರ ಸದ್ದನ್ನು ಅಡಗಿಸಿದ ಕೀರ್ತಿ ಭಾರತೀಯ ರಾಷ್ಟ್ರೀಯವಾದ ಪಿತಾಮಹ, ಸ್ವಾತಂತ್ರ್ಯ ಹೋರಾಟದ ಪ್ರಥಮ ಜನಪ್ರಿಯ ನಾಯಕನೆನಿಸಿದ ಲೋಕಮಾನ್ಯ ಬಾಲ ಗಂಗಾಧರ ತಿಲಕರಿಗೆ ಸಲ್ಲಬೇಕು.

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ 1856, ಜುಲೈ 23 ರಂದು ಜನಿಸಿದ ಮಹನೀಯರು, ತಮ್ಮ ಪದವಿ ಶಿಕ್ಷಣ ನಂತರ ಗಣಿತದ ಉಪನ್ಯಾಸಕರಾಗಿ ಕಾರ್ಯ ಆರಂಭಿಸಿದರು. ಪಶ್ಚಿಮದ ಶಿಕ್ಷಣ ನೀತಿಯು ಭಾರತದ ಶಿಕ್ಷಣ ವಿಧಾನವನ್ನು ಅವಹೇಳನ ಮಾಡುವಂತದ್ದು ಎಂದು ಮನಗಂಡು, ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಭಾರತೀಯ ಶಿಕ್ಷಣ ದೊರೆಯಬೇಕು ಎಂಬ ನಿಟ್ಟಿನಲ್ಲಿ ಪುಣೆಯಲ್ಲಿ ಡೆಕ್ಕನ್ ಎಜುಕೇಶನ್ ಸೊಸೈಟಿ ಯನ್ನು ಸ್ಥಾಪಿಸಿದ್ದು ಸ್ಮರಣೀಯವಾದುದು.

ಕೇಸರಿ ಎಂಬ ಮರಾಠಾ ಪತ್ರಿಕೆಯ ಮೂಲಕ ಬಂಗಾಳದ ವಿಭಜನೆ, ಭಾರತೀಯರ ಹಾಗು ಭಾರತೀಯ ಸಂಸ್ಕೃತಿ-ಪರಂಪರೆಯ ಮೇಲೆ ಬ್ರಿಟಿಷರಿಂದಾಗುತ್ತಿರುವ ದಬ್ಬಾಳಿಕೆಯನ್ನು ಯಾವುದೇ ಮುಲಾಜಿಲ್ಲದೇ ತೀವ್ರವಾಗಿ ಟೀಕಿಸುವುದರ ಜೊತೆಗೆ ಸ್ವಾತಂತ್ರ್ಯ ಹೋರಾಟದ ಪರಿಕಲ್ಪನೆಯನ್ನು ಜನತೆಯ ಮನದಲ್ಲಿ ತೆರೆಯುವ ಪ್ರಯತ್ನ ಮಾಡಿ, ಯಶಸ್ಸನ್ನು ಪಡೆದರು.

ದೇಶದ ಇತಿಹಾಸದಲ್ಲೇ ಸಾರ್ವಜನಿಕ ಗಣೇಶೋತ್ಸವ ಆಚರಣಾ ಜಾರಿಗೆ ತರುವುದರ ಮೂಲಕ ರಾಷ್ಟ್ರೀಯತೆಯನ್ನು ಆ ಮೂಲಕ ಪ್ರತಿಪಾದಿಸಿದ ಮೊದಲ ಜನಪ್ರಿಯ ನಾಯಕನೆನಿಸಿಕೊಳ್ಳುವುದರ ಜೊತೆಗೆ ಮದ್ಯಪಾನ ನಿಷೇಧ, ವಿವಾಹಕ್ಕೆ ಕನಿಷ್ಟ ವಯೋಮಿತಿಯ ನಿಗಧಿ ಮೊದಲಾದ ಸಾಮಾಜಿಕ ಸುಧಾರಣೆಯಲ್ಲಿ ಮೊದಲೆನಿಸಿದರು.

ಸ್ವರಾಜ್ಯ ಹಾಗು ರಾಜಕೀಯ ಸ್ವಾತಂತ್ರ್ಯದ ವಿಚಾರವನ್ನು ಜನಸಾಮಾನ್ಯರೆದುರು ಪ್ರಚುರಪಡಿಸುವುದರ ಜೊತೆಗೆ ಜನರನ್ನು ಬಡಿದೆಬ್ಬಿಸಿ ಭಾರತೀಯ ಸ್ವಾತಂತ್ರ್ಯ ಚಳುವಳಿಯ ಜನಕರೆನ್ನುವ ಖ್ಯಾತಿ ತಿಲಕರಿಗೆ ಅಲಂಕೃತವಾಗಿತ್ತು. 1920ರಲ್ಲಿ ತಿಲಕರು ನಿಧನರಾದಾಗ ಅಂತ್ಯಕ್ರಿಯೆಯಲ್ಲಿ 2,00,000 ಕ್ಕೂ ಅಧಿಕ ಜನರು ಭಾಗವಹಿಸಿದ್ದು ಅವರು ದೇಶಕ್ಕಾಗಿ ಬದುಕಿದ್ದರ ಪ್ರತಿಬಿಂಬವಾಗಿ ತೋರುವುದರ ಜೊತಗೆ ಆ ಸಮಯದಲ್ಲಿ ಮಹಾತ್ಮಾ ಗಾಂಧಿಯವರು ‘ಆಧುನಿಕ ಭಾರತದ ಜನಕ’ ಎಂದು ತಿಲಕರನ್ನು ವರ್ಣನೆ ಮಾಡಿದ್ದು ತಿಲಕರ ಜೀವನಾದರ್ಶಕ್ಕೆ ಹಿಡಿದ ಕೈಗನ್ನಡಿಯಾಗಿದೆ.
– ಗುರುಪ್ರಸಾದ ಶಾಸ್ತ್ರಿ

Categories: ವ್ಯಕ್ತಿ-ವಿಶೇಷ

Leave A Reply

Your email address will not be published.