ವ್ಯಕ್ತಿ-ವಿಶೇಷ: ತಮ್ಮ 15ನೇ ವಯಸ್ಸಿನಲ್ಲಿ ನಾಗರಿಕ ಶಾಸನಭಂಗ ಆರೋಪಕ್ಕೆ ಗುರಿಯಾಗಿ ಶಿಕ್ಷೆಗೆ ಒಳಪಟ್ಟಾಗ ಮ್ಯಾಜಿಸ್ಟ್ರೇಟರು ನಿನ್ನ ಹೆಸರೇನು ಕೇಳಿದ್ದಕ್ಕೆ, ‘ಆಜಾದ್’ ಎಂದು ನಿರ್ಭೀತನಾಗಿ ಹೇಳಿದ್ದರ ಪ್ರತಿಫಲವಾಗಿ 15 ಛಡಿ ಏಟಿನ ಶಿಕ್ಷೆಯನ್ನು ವಿಧಿಸಿದಾಗ ಪ್ರತಿ ಛಡಿ ಏಟಿನ ಹೊಡೆತಕ್ಕೂ ‘ಭಾರತ್ ಮಾತಾ ಕೀ ಜೈ’ ಎಂದಿದ್ದು ಸ್ವಾತಂತ್ರ್ಯ ಕ್ರಾಂತಿಯ ಕಿಡಿ ಚಂದ್ರಶೇಖರ್ ಆಜಾದ್.
ಮಧ್ಯಪ್ರದೇಶದ ಭಾವ್ರಾ ಹಳ್ಳಿಯಲ್ಲಿ ಪಂಡಿತ ಸೀತಾರಾಮ್ ತಿವಾರಿ ಮತ್ತು ಜಗರಾಣಿ ದೇವಿಯವರ ಎರಡನೆಯ ಮಗನಾಗಿ ಜುಲೈ 23,1906 ರಂದು ಜನಿಸಿದ ಇವರು, ಭಾರತೀಯ ಸ್ವಾತಂತ್ರ್ಯ ಹೋರಾಟದ ಇತಿಹಾಸ ಪುಟಗಳಲ್ಲಿ ದೇಶಭಕ್ತಿಯ ಕಿಡಿ ಪ್ರಕಾಶಿಸುವಂತೆ ಮಾಡುವ ಮತ್ತು ಮೈನವಿರೇಳಿಸುವ ಚರಿತ್ರೆ ಆಜಾದರದ್ದಾಗಿದೆ ಎಂದರೆ ತಪ್ಪಾಗಲಾರದು.
ರಾಮ್ ಪ್ರಸಾದ್ ಬಿಸ್ಮಿಲ್ಲಾರನ್ನು ಗುರುವಾಗಿ ಸ್ವೀಕರಿಸಿ, ಸ್ವಾತಂತ್ರ್ಯ ಹೋರಾಟದಲ್ಲಿ ತಮ್ಮದೇ ಕ್ರಾಂತಿಕಾರಿ ಧೋರಣೆಗಳಿಂದ ಧುಮುಕಿದ ಆಜಾದರು ಮುಂದೆ ಈ ದೇಶ ಕಂಡ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್ ಮತ್ತು ಆತನ ಸ್ನೇಹಿತರಿಗೆ ‘ಗುರು’ ಎನಿಸಿದ್ದು ಇತಿಹಾಸ.
ಮೈ ಆಜಾದ್ ಹೂಂ… ಆಜಾದ್ ಹೀ ರಹೂಂಗಾ ಎಂದು ಕೇವಲ ಬಾಯ್ಮಾತಲ್ಲಿ ಹೇಳದೇ, ಜೀವನದ ಪೂರ್ತಿ ಅದನ್ನು ಅಕ್ಷರಶಃ ಪಾಲಿಸಿ ಸಾಧಿಸುವಲ್ಲಿ ಯಶಸ್ವಿಯಾಗಿ, ‘ಇನ್ನೆಂದೂ ಪೋಲಿಸರ ಕೈ ಗೆ ಸಿಕ್ಕಿಹಾಕಿಕೊಳ್ಳಲಾರೆ’ ಎಂದು ತಮ್ಮ 15ನೇ ವಯಸ್ಸಿನಲ್ಲಿ ಮಾಡಿದ್ದ ಶಪಥದಂತೆಯೇ ಬದುಕಿ ತಾಯಿ ಭಾರತಿಯ ಮಡಿಲಲ್ಲಿ ವೀರ ಮರಣವನ್ನಪ್ಪಿದರೂ, ಇಂದಿಗೂ ದೇಶಭಕ್ತರ ಹೃದಯಾಂತರಾಳದಲ್ಲಿ ಆರದ ಜ್ಯೋತಿಯಾಗಿ ಪ್ರಜ್ವಲಿಸುತ್ತಿರುವುದು ಇದೇ ಆಜಾದ್ ಎಂಬುದು ಸಾರ್ವಕಾಲಿಕ ಸತ್ಯ. ಮಧ್ಯಪ್ರದೇಶದ ಅರಛಾದಿಂದ 4 ಕಿ.ಮೀ ದೂರದಲ್ಲಿ ನಿರ್ಮಿಸಲಾಗಿರುವ ಆಜಾದರ ಕಂಚಿನ ಪ್ರತಿಮೆ ಹಾಗು ವರ್ಷದಿಂದ ವರ್ಷಕ್ಕೆ ಅಲ್ಲಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಉಲ್ಲೇಖನೀಯ.
ಅಂತಹ ಮಹಾನ್ ಕ್ರಾಂತಿಕಾರಿ, ದೃಢ ಮನಸ್ಸಿನ ಹುಟ್ಟು ಹೋರಾಟಗಾರನನ್ನು ಪ್ರತಿನಿತ್ಯವೂ ಪ್ರತಿಯೊಬ್ಬ ಭಾರತೀಯನೂ ಸ್ಮರಿಸಿ, ಮುಂದಿನ ಪೀಳಿಗೆಗೆ ಆದರ್ಶ ಮಾರ್ಗವನ್ನು ಹಾಕಿಕೊಡುವ ಜವಾಬ್ದಾರಿ ಎಲ್ಲರ ಮೇಲಿದೆ.
– ಗುರುಪ್ರಸಾದ ಶಾಸ್ತ್ರಿ