ಆರೋಗ್ಯ ಇಲಾಖೆಯ ಅನುಮತಿಗು ಮೊದಲೇ ಕೈಗಾದಲ್ಲಿ ಮತ್ತೆರಡು ರಿಯಾಕ್ಟರ್ ಗೆ ಕೇಂದ್ರ ಸರ್ಕಾರದಿಂದ ಅಸ್ತು


ಶಿರಸಿ: ಪರಿಸರವಾದಿಗಳು ಹಾಗೂ ಸಾರ್ವಜನಿಕರ ವಿರೋಧದ ನಡುವೆ 2000ನೇ ಇಸ್ವಿಯಲ್ಲಿ ಆರಂಭಗೊಂಡ ಉತ್ತರ ಕನ್ನಡ ಜಿಲ್ಲೆಯ ಕೈಗಾ ಅಣು ಸ್ಥಾವರದಲ್ಲಿ ಮತ್ತೆರಡು ಅಣು ರಿಯಾಕ್ಟರ್ ನಿರ್ಮಿಸಲು ಕೇಂದ್ರ ಸಚಿವ ಸಂಪುಟ ಅಸ್ತು ನೀಡಿದೆ. ಆದರೆ ಆರೋಗ್ಯ ಸಮೀಕ್ಷೆ ವರದಿ ಬರುವ ಮೊದಲೇ ಒಪ್ಪಿಗೆ ಸೂಚಿಸಿದ್ದು ಪರಿಸರವಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ. 

ಪ್ರಸಕ್ತ ನಾಲ್ಕು ರಿಯಾಕ್ಟರ್‍ಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ತಲಾ 700 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯದ ಮತ್ತೆರಡು ಅಣು ರಿಯಾಕ್ಟರ್ ಸ್ಥಾಪನೆಗೆ ಅನುಮತಿ ನೀಡಲಾಗಿದೆ.
ದೇಶದ ವಿವಿಧ ಭಾಗಗಳಲ್ಲಿ ಒಟ್ಟೂ 10 ಅಣು ರಿಯಾಕ್ಟರ್‍ಗಳನ್ನು ಸ್ಥಾಪಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು ಅದರಲ್ಲಿ ಕೈಗಾದಲ್ಲಿ 2 ಹೊಸ ಅಣು ರಿಯಾಕ್ಟರ್ ಸ್ಥಾಪನೆಯೂ ಒಳಗೊಂಡಿದೆ. ಈ ಬೆಳವಣಿಗೆಯು ಸ್ಥಳಿಕರ ಹಾಗೂ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಈಗಾಗಲೇ ಕೈಗಾದಲ್ಲಿ ನಾಲ್ಕು ರಿಯಾಕ್ಟರ್ ಘಟಕ ನಿರ್ಮಾಣವಾಗಿದೆ. ಕೈಗಾದ ಈ ಘಟಕಗಳಿಂದ ಸೋರಿಕೆಯಾಗುವ ರೇಡಿಯೇಷನ್‍ನಿಂದಾಗಿ ಕ್ಯಾನ್ಸರ್, ಪಾರ್ಶ್ವವಾಯು  ಮುಂತಾದ ರೋಗಗಳು ಬರುತ್ತಿವೆ. ಜನರು ಮಾರಣಾಂತಿಕ ಖಾಯಿಲೆಗೆ ತುತ್ತಾಗುತ್ತಿದ್ದಾರೆ. ಹೀಗಾಗಿ
ಆರೋಗ್ಯ ಸಮೀಕ್ಷೆ ಆಗಬೇಕು ಮತ್ತು ಈ ಭಾಗದಲ್ಲಿಯೇ ಸುಸಜ್ಜಿತ ಕ್ಯಾನ್ಸರ್  ಹಾಸ್ಪಿಟಲ್ ಕಟ್ಟಬೇಕು. ಆನಂತರವೇ ಮುಂದಿನ ಘಟಕ ಆರಂಭವಾಗಲಿ ಎಂದು ಪರಿಸರವಾಗಿಗಳು ಸರಕಾರಕ್ಕೆ ಮನವಿ ಮಾಡಿದ್ದವು. ಇದು ಐದು ಮತ್ತು ಆರನೇ ಘಟಕ ಸ್ಥಾಪನೆಯ ಕಾರ್ಯಕ್ಕೆ ಅಡ್ಡಿಯಾಗಿತ್ತು. ಪರಿಸರವಾದಿಗಳ ಹಾಗೂ ಜನಾಂದೋಲನದ ಕಾರಣಕ್ಕಾಗಿ, ಸುತ್ತಮುತ್ತಲ ಪ್ರದೇಶದ ಜನರ ಆರೋಗ್ಯ ಸಮೀಕ್ಷೆಯೇನೋ ನಡೆದವು. ಆದರೆ ಅದರ ವರದಿ ಬರುವ ಮೊದಲೇ ಕೇಂದ್ರ ಸರಕಾರ ಐದು ಮತ್ತು ಆರನೇ ಘಟಕ ನಿರ್ಮಾಣಕ್ಕೆ ಅಸ್ತು ಎಂದಿದೆ. ಕೈಗಾದ ಸುತ್ತ ಮುತ್ತಲ ಊರಾದ ಮಲವಳ್ಳಿ, ಬಾರೆ, ಕಳಚೆ, ವಜ್ರಳ್ಳಿ, ಭಾಗಿನಕಟ್ಟಾ, ತಾರಗಾರ, ಬೀಗಾರ, ಹೇರೂರ ಭಾಗಗಳ್ಲಿನ ಕಾಣಿಸಿಕೊಂಡ ಮಾರಕ ರೋಗ ಕ್ಯಾನ್ಸ್‍ರ್‍ನಿಂದಾಗಿ ಸರಿ ಸುಮಾರು 20 ಜನರು ಮೃತಪಟ್ಟಿದ್ದು, ಇನ್ನೂ ಅನೇಕ ಜನ ಥೈರಾಯ್ಡ ರೋಗದಿಂದ ಸಾವನ್ನಪ್ಪಿದ್ದಾರೆ. ಅನೇಕರು ಪಾಶ್ರ್ವವಾಯುವಿಗೆ ತುತ್ತಾದರೆ ಮಕ್ಕಳಾಗದೇ ಮರುಗಿದವರು, ಕಾಯಿಲೆಯಿಂದ ಮರುಗುತ್ತಿರುವವರ ಸಂಖ್ಯೆ ಇನ್ನೂ ಆ ಭಾಗದಲ್ಲಿ ಕಾಡುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಆರೋಗ್ಯ ಸಮಿಕ್ಷೆ ವರದಿ ಬರುವ ಮುನ್ನ ಮತ್ತೆರಡು ಘಟಕ ಸ್ಥಾಪನೆಗೆ ಒಪ್ಪಿಗೆ ನೀಡಲಾಗಿದೆ.
ಈಗಾಗಲೇ ಎಲ್ಲರ ವಿರೋಧದ ನಡುವೆ ಮೂರು ಮತ್ತು ನಾಲ್ಕನೇ ಘಟಕ ಸ್ಥಾಪಿಸಲಾಗಿದೆ. ಈಗಾಗಲೇ ಅದಕ್ಕೇ ಇಂಧನದ ಕೊರತೆ ಇದೆ. ಅದನ್ನೇ ಸರಿಯಾಗಿ ನಿಭಾಯಿಸುವುದನ್ನು ಬಿಟ್ಟು, ಐದು ಮತ್ತು ಆರನೇ ಘಟಕ ನಿರ್ಮಾಣಕ್ಕೆ ಕೇಂದ್ರ ಸರಕಾರ ಈಗಾಗಲೇ ಒಪ್ಪಿಗೆ ನೀಡಿದ್ದು ಸರಿಯಲ್ಲ. ಅದರಲ್ಲೂ ಪರಿಸರವಾದಿಗಳ, ಜನಾಂದೋಲನದ ಒತ್ತಡದ ಮೇರೆಗೆ ಆರೋಗ್ಯ ಸಮೀಕ್ಷೆ ಮಾಡಲಾಗಿದ್ದು, ಅದರ ವದರಿ ಬರುವ ಮೊದಲೇ ಘಟಕ ನಿರ್ಮಾಣಕ್ಕೆ ಆದೇಶ ನೀಡಿದ್ದು ಸರಿಯಲ್ಲ ಪಶ್ಚಿಮ ಘಟ್ಟ ಕಾರ್ಯ ಪಡೆಯ ಮಾಜಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.