ನಗದು ಪೂರೈಕೆಗೆ ಅಡಚಣೆಯಾಗುತ್ತಿರುವ ಕ್ಯಾಶ್ ಲೆಸ್ ವ್ಯವಸ್ಥೆ

ಶಿರಸಿ: ಕ್ಯಾಶ್‍ಲೆಸ್ ವ್ಯವಸ್ಥೆಯಿಂದ ಉದ್ಭವಿಸಿದ ಹಣದ ಕೊರತೆ ಜೊತೆಗೆ ರಾನ್ಸಂವೇರ್ ವೈರಸ್ ಸಮಸ್ಯೆಯು ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಅಡಕೆ ವಹಿವಾಟು ಸಂಸ್ಥೆಗಳು ಹಾಗೂ ಸಹಕಾರಿ ಸಂಘಗಳು ತನ್ನ ಸದಸ್ಯ ರೈತರಿಗೆ ಸಮರ್ಪಕ ಹಣ ನೀಡಲಾಗದೇ ಪೇಚಿಗೆ ಸಿಲುಕಿದರೆ, ರೈತರು ಹಾಗೂ ಕೃಷಿ ಕಾರ್ಮಿಕರು ಆರ್ಥಿಕ ಸಂಸ್ಥೆಗಳು ನೀಡಿದಷ್ಟು ಹಣಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿನ ಶೇಕಡಾ 90ರಷ್ಟು ಬೆಳೆಸಾಲವನ್ನು ಜಿಲ್ಲಾ ಮಧ್ಯವರ್ತಿ ಕೆಡಿಸಿಸಿ ಬ್ಯಾಂಕ್ ವಿತರಿಸುತ್ತಿದೆ. ಈ ವರ್ಷ ಜಿಲ್ಲೆಗೆ 614 ಕೋಟಿ ರೂ. ಬೆಳೆಸಾಲ ಮಂಜೂರಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 170 ಸಹಕಾರ ಸಂಘಗಳಿದ್ದು, 89 ಸಾವಿರಕ್ಕೂ ಹೆಚ್ಚು ರೈತರು ಬೆಳೆಸಾಲಕ್ಕೆ ಅರ್ಜಿಸಲ್ಲಿಸಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಹಣ ನಗದಾಗಿ ಪರಿವರ್ತನೆಯಾಗಬೇಕಿದೆ. ಮೆ, ಜೂನ್ ತಿಂಗಳಲ್ಲೇ ಶೇ.80 ರಷ್ಟು ಸಾಲ ಮಂಜೂರಾಗಬೇಕು. ಇದರಿಂದ ಎಲ್ಲ ರೈತರಿಗೂ ಹಣ ಪೂರೈಸುವುದು ಬ್ಯಾಂಕ್ ಮತ್ತು ಸಹಕಾರಿ ಸಂಘಗಳಿಗೆ ಕಷ್ಟವಾಗಿ ಪರಿಣಮಿಸಿದೆ.
ಶೀಘ್ರದಲ್ಲಿ ಮುಂಗಾರು ಆರಂಭವಾಗುತ್ತಿದ್ದು, ರೈತರು ಹೊಲಗಳಲ್ಲಿ ಬೀಜ ಬಿತ್ತಲು ಸಿದ್ಧರಾಗುತ್ತಿದ್ದಾರೆ. ಗೊಬ್ಬರ ಖರೀದಿ, ಕೆಲಸಗಾರರಿಗೆ ಕೂಲಿ, ಬಿತ್ತನೆ ಬೀಜ ಸೇರಿದಂತೆ ಖಾಸಗಿ ಕಾರ್ಯಕ್ರಮಗಳಿಗೂ ಹಣ ಸಿಗದೇ ಪರದಾಡುವಂತಾಗಿದೆ. ಯಾವುದೇ ಬ್ಯಾಂಕ್ ಅಥವಾ ಸಹಕಾರ ಸಂಘಗಳಲ್ಲಿ ಹಣ ಕೇಳಿದರೂ ಇಲ್ಲ ಎನ್ನುವ ಉತ್ತರ ಬರುತ್ತಿರುವುದರಿಂದ ರೈತ ಎನು ಮಾಡಬೇಕೆನ್ನುವ ಸಮಸ್ಯೆಗೆ ಸಿಲುಕಿದ್ದಾನೆ. ಸರ್ಕಾರವೇನೋ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಅನುಕೂಲವಾಗಲೆಂದು ಮುಂಗಾರು ಆರಂಭದ ಮೊದಲೇ ಶೂನ್ಯ ಬಡ್ಡಿಯಲ್ಲಿ ಬೆಳೆಸಾಲ ನೀಡುತ್ತಿದೆ. ಆದರೆ ಹಣವೇ ಇಲ್ಲದೇ ಕೃಷಿಚಟುವಟಿಕೆ ಕೈಗೊಳ್ಳುವುದು ಹೇಗೆ? ಎಂಬ ಪ್ರಶ್ನೆಗಳು ರೈತಾಪಿ ವಲಯದಲ್ಲಿ ಕೇಳಿ ಬರುತ್ತಿವೆ.
ಈ ವರ್ಷ ಆರ್‍ಬಿಐ ನೀತಿಯನ್ವಯ ಬೆಳೆಸಾಲವನ್ನು ನೇರವಾಗಿ ರೈತರಿಗೆ ನೀಡದೆ, ರಾಷ್ಟ್ರೀಕೃತ ಬ್ಯಾಂಕ್‍ಗಳ ಖಾತೆ ಜಾಮಾ ಮಾಡಬೇಕು. ಆ ಮೂಲಕ ರೈತರು ಹಣ ಪಡೆದುಕೊಳ್ಳಬೇಕೆನ್ನುವ ನೀತಿ ರೂಪಿಸಿದೆ. ಇದರಿಂದ ರೈತರು ಹಣಕ್ಕಾಗಿ ಬ್ಯಾಂಕ್‍ಗಳತ್ತ ಮುಖಮಾಡಿದ್ದಾರೆ. ದುರದೃಷ್ಟ ಎನ್ನುವಂತೆ ಇದೇ ವೇಳೆ ರ್ಯಾನ್ಸಂವೇರ್ ವೈರಸ್ಸ್ ಸಹಾ ಒಕ್ಕರಿಸಿ ಕೊಂಡಿದ್ದರಿಂದ ಎಲ್ಲಾ ಎಟಿಎಂಗಳು ಬಾಗಿಲು ಮುಚ್ಚಿವೆ. ಎಲ್ಲಕಡೆ ನೋ ಕ್ಯಾಶ್ ಬೋರ್ಡ್ ಹಾಕಿರುವುದರಿಂದ ರೈತರು ಮತ್ತಷ್ಟು ಕಷ್ಟ ಎದುರಿಸುವಂತಾಗಿದೆ. ಇಲ್ಲಿನ ಬ್ಯಾಂಕ್ ಹಾಗೂ ಸಹಕಾರ ಸಂಘಗಳಲ್ಲಿ ರೈತ ಕೇಳಿದಷ್ಟು ಹಣ ನೀಡದೆ ಅರ್ಧದಷ್ಟು ಹಣ ನೀಡಿ ಕಳುಹಿಸುತ್ತಿದ್ದಾರೆ. ಸಮಸ್ಯೆಯ ಅರಿವಿಲ್ಲದ ರೈತರು ನಮ್ಮ ಹಣ ಕೋಡಲು ನಿಮಗೇನು ಕಷ್ಟ ಎಂದು ಪ್ರಶ್ನಿಸುತ್ತಿದ್ದಾರೆ. ಇದರಿಂದ ಬ್ಯಾಂಕ್ ಅಧಿಕಾರಿಗಳಿಗೆ ರೈತರಿಗೆ ಸರಿಯಾದ ಉತ್ತರಿಸುವುದು ಕಷ್ಟವಾಗಿದೆ. ಕೆಡಿಸಿಸಿ ಬ್ಯಾಂಕ್ ಸೇರಿದಂತೆ ಬೆಳೆಸಾಲ ವಿತರಿಸುವ ಸಹಕಾರ ಸಂಘಗಳು ಹಣ ಹೊಂದಿಸಿಕೊಳ್ಳಲು ಪರದಾಡುತ್ತಿವೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.