ಎಐಸಿಸಿ ಕಾರ್ಯದರ್ಶಿ  ಮಾಣಿಕಂ ಟಾಗೋರ್ ಶಿರಸಿಗೆ ಭೇಟಿ

​ಶಿರಸಿ: ಎಐಸಿಸಿ ಕಾರ್ಯದರ್ಶಿ ಹಾಗೂ ಕರ್ನಾಟಕದ ಉಸ್ತುವಾರಿಯಾದ ಮಾಣಿಕಂ ಟಾಗೋರ್ ಶಿರಸಿಯ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯಕ್ಕೆ ಭೇಟಿ ನೀಡಿ ಜಿಲ್ಲೆಯ ಹಾಲಿ ಹಾಗೂ ಮಾಜಿ ಶಾಸಕರು, ಕೆಪಿಸಿಸಿ ಸದಸ್ಯರು, ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಸೆಲ್ ಅಧ್ಯಕ್ಷರು, ಬ್ಲಾಕ್ ಅಧ್ಯಕ್ಷರು ಮತ್ತು ಹಿರಿಯ ಧುರೀಣರ ಸಭೆ ನಡೆಸಿ ಪ್ರತ್ಯೇಕ ಸಮಾಲೋಚನೆ ನಡೆಸಿದರು.  
ಈ ವೇಳೆ ಸಭೆಯನ್ನುದ್ದೇಶಿಸಿ ಅವರು ಮಾತನಾಡಿ, ರಾಹುಲ್ ಗಾಂಧಿಯವರು ಮಾಜಿ ಕೇಂದ್ರ ಸಚಿವ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಅವರನ್ನು ಕರ್ನಾಟಕ ರಾಜ್ಯ ಉಸ್ತುವಾರಿಯಾಗಿ ನೇಮಿಸಿ ಅವರೊಂದಿಗೆ ನನ್ನನ್ನು ಮತ್ತು ಉಳಿದ ಮೂವರು ಎಐಸಿಸಿ ಕಾರ್ಯದರ್ಶಿಗಳನ್ನು ಉಸ್ತುವಾರಿಗಳಾಗಿ ನೇಮಿಸಿದ್ದಾರೆ. ಇತ್ತೀಚಿಗೆ ಬೆಂಗಳೂರಿನಲ್ಲಿ ಪಕ್ಷದ ಪ್ರಮುಖರು, ಮುಖ್ಯಮಂತ್ರಿಗಳು, ಸಚಿವರು, ಶಾಸಕರು, ಲೋಕಸಭಾ ಸದಸ್ಯರು, ಜಿಲ್ಲಾಧ್ಯಕ್ಷರೊಂದಿಗೆ ಸಮಾಲೋಚಿಸಿದ ನಂತರ ರಾಜ್ಯದ ನಾಲ್ಕು ವಿಭಾಗಗಳಿಗೆ ನಾಲ್ಕು ಕಾರ್ಯದರ್ಶಿಗಳನ್ನು ಪ್ರತ್ಯೇಕವಾಗಿ ಹಂಚಿಕೆ ಮಾಡಿ ನನಗೆ ಬೆಳಗಾವಿ ವಿಭಾಗದ ಉಸ್ತುವಾರಿಯನ್ನು ನೀಡಿದ್ದು, ಎಂಟು ಜಿಲ್ಲೆಗಳ ಪ್ರವಾಸ ಮಾಡಿ ಜಿಲ್ಲೆಯ ಹಿರಿಯ ಧುರೀಣರೊಂದಿಗೆ ಸಮಾಲೋಚಿಸಿ ವರದಿಯನ್ನು ನೀಡಬೇಕಾಗಿದೆ. ಜಿಲ್ಲೆಯಲ್ಲಿ ಪಕ್ಷದ ಸಂಘಟನೆ, ಚಟುವಟಿಕೆಗಳು, ಬೂತ್ ಮತ್ತು ವಾರ್ಡ ಮಟ್ಟದಲ್ಲಿ ಪಕ್ಷದ ಸ್ಥಿತಿ ಅಧ್ಯಯನ ಮತ್ತು ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಕಾರ್ಯಕ್ರಮ ರೂಪಿಸಿ ಜಿಲ್ಲಾ ಕಾಂಗ್ರೆಸ್ಸಿಗೆ ಸಲಹೆ ನೀಡುವುದು ನನ್ನ ಆದ್ಯತೆಯಾಗಿದೆ. ಮುಂದಿನ ದಿನಗಳಲ್ಲಿ ವಿಧಾನಸಭಾ ಕ್ಷೇತ್ರವಾರು ಪಕ್ಷದ ಸ್ಥಳೀಯ ಮುಖಂಡರೊಂದಿಗೆ ಸಮಾಲೋಚಿಸುತ್ತೇನೆ. ಮತ್ತೆ ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತ ತರುವಲ್ಲಿ ಎಲ್ಲರೂ ಒಂದಾಗಿ ಶ್ರಮಿಸೋಣ ಎಂದು ಕರೆ ನೀಡಿದರು.
ಕಾರ್ಯಾಲಯಕ್ಕೆ ಆಗಮಿಸಿದ ಮಾಣಿಕಂ ಠಾಗೋರರನ್ನು ಪಕ್ಷದ ಪರವಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಸನ್ಮಾನಿಸಿ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಕಾರ್ಯ ಚಟುವಟಿಕೆಗಳು ಹಾಗೂ ಚುನಾವಣೆಗಳಲ್ಲಿ ಪಕ್ಷದ ಸಾಧನೆ ಕುರಿತುವಿವರ ನೀಡಿದರು.
ಈ ವೇಳೆ ಕೆಪಿಸಿಸಿ ಉಸ್ತುವಾರಿ ಕಾರ್ಯದರ್ಶಿ ಶ್ಯಾಮಲಾ ಭಂಡಾರಿ, ಜಿಲ್ಲೆಯ ಶಾಸಕರು, ನಿಗಮಗಳ ಅಧ್ಯಕ್ಷರು, ಕೆಪಿಸಿಸಿ ಸದಸ್ಯರು, ಹಿರಿಯ ಧುರೀಣರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಡಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಭಾಗವತ ವಂದಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.