ಹೆಚ್ಚುತ್ತಿರುವ ಕಳ್ಳತನ ಪ್ರಕರಣ-ಸುರಕ್ಷೆಯ ಹೊಣೆಗಾರಿಕೆ ಯಾರದ್ದು..?

ಶಿರಸಿ: ನಗರದಲ್ಲಿ ಹಾಗು ಸುತ್ತಮುತ್ತಲಿನ ಭಾಗದಲ್ಲಿ ಮೇಲಿಂದ ಮೇಲೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಜನತೆ ಪೋಲೀಸ್ ಇಲಾಖೆಯ ಕಾರ್ಯವೈಖರಿಯನ್ನು ಪ್ರಶ್ನಿಸುವಂತಾಗಿದೆ. ಅದರ ಜೊತೆಗೆ ತಮ್ಮ ಸಮಾಜದ ಸುರಕ್ಷೆಯ ದೃಷ್ಟಿಯಿಂದ ಸಾರ್ವಜನಿಕರೆಷ್ಟು ಎಚ್ಚರಗೊಂಡಿದ್ದಾರೆ ಅಥವಾ ಪೋಲೀಸರಿಗೆ ಸಹಕಾರಿಯಾಗಿದ್ದಾರೆ ಎನ್ನುವ ವಿಷಯವೂ ಸಹ ವಿಮರ್ಷಿಸುವ ಅಗತ್ಯತೆ ಎದ್ದು ಕಾಣುತ್ತಿದೆ.

ಕಳ್ಳತನ ಅಥವಾ ಅಪರಾಧ ಪ್ರಕರಣಗಳು ನಡೆದಾಗ ಸಾಮಾನ್ಯವಾಗಿ ಇದು ಪೋಲೀಸರ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಹೇಳಿಕೆಗಳು ಸರಾಗವಾಗಿ ಬಾಯಿಂದ ಬರುತ್ತವೆ. ಇದು ಒಂದು ಹಂತದ ಇಲಾಖಾ ಅಧಿಕಾರಿಗಳ ಮನೋಬಲವನ್ನು ಕುಗ್ಗಿಸುವ ಸಾಧ್ಯತೆಯೂ ಇರುತ್ತದೆ. ಈ ನಿಟ್ಟಿನಲ್ಲಿ ಸಮಾಜದ ಒಂದು ಭಾಗವಾಗಿ ನಮ್ಮ ಸುತ್ತಮುತ್ತಲಿನ ಸುರಕ್ಷೆಗಾಗಿ ಸಾರ್ವಜನಿಕರಾಗಿ ನಾವೇನು ಮಾಡಿದ್ದೇವೆ ಅಥವಾ ಮಾಡುವ ಪ್ರಯತ್ನ ನಡೆಸಿದ್ದೇವೆ ಎಂದು ಆತ್ಮವಿಮರ್ಷೆಗೊಳಪಡಿಸಿಕೊಳ್ಳುವ ಸಮಯ ಎದುರಾಗಿದೆ.
ಅನುಮಾನಾಸ್ಪದ ವ್ಯಕ್ತಿಗಳು ಅಥವಾ ವಿಷಯಗಳು ನಮ್ಮೆದುರಿಗೆ ಕಂಡಾಗ ತಕ್ಷಣ ಅದನ್ನು ಸಂಬಂಧಪಟ್ಟ ಅಧಿಕಾರಿಗೆ ಅಥವಾ ಇಲಾಖೆಗೆ ನಿಗದಿತ ಸಮಯದ ಮಿತಿಯೊಳಗೆ ತಲುಪಿಸುವ ಪ್ರಯತ್ನವನ್ನು ಸಾರ್ವಜನಿಕರೂ ಮಾಡಬೇಕಿದೆ. ಮತ್ತು ಸುರಕ್ಷೆಯ ದೃಷ್ಟಿಯಿಂದ ಸಮರ್ಪಕ ಪೂರ್ವಯೋಜಿತ ಕ್ರಮಗಳನ್ನು ಕೈಗೊಂಡರೆ ಕಳ್ಳತನ ಸೇರಿದಂತೆ ಅಪರಾಧ ಪ್ರಕರಣಗಳ ಸಂಖ್ಯೆ ಕಡಿಮೆಯಾಗುವ ಸಂಭವ ಇರಬಹುದು.
ಜೊತೆಯಲ್ಲಿ ಆರಕ್ಷಕ ಇಲಾಖೆಯೂ ಸಹ ನೆಪಗಳನೊಡ್ಡದೇ ತಮ್ಮ ಕಾರ್ಯದ ಕ್ಷಮತೆಯನ್ನು ಹೆಚ್ಚಿಸಿಕೊಳ್ಳಬೇಕು. ಕಳ್ಳರನ್ನು ಹಿಡಿಯುವ ಮೂಲಕ ಜನತೆಯ ವಿಶ್ವಾಸವನ್ನು ಗಳಿಸಬೇಕು ಎಂಬುದು ಎಲ್ಲರ ಅಪೇಕ್ಷೆಯಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.