ಸಾಂಗವಾಗಿ ಜರುಗಿದ ಮಂಜುಗುಣಿಯ ಮಹಾರಥೋತ್ಸವ

ಶಿರಸಿ: ಕರ್ನಾಟಕದ ತಿರುಪತಿ ಖ್ಯಾತಿಯ ತಾಲೂಕಿನ ಪುಣ್ಯ ಕ್ಷೇತ್ರ ಮಂಜುಗುಣಿ ವೆಂಕಟರಮಣ ದೇವರ ವಾರ್ಷಿಕ ರಥೋತ್ಸವವು ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಂಗಳವಾರ ವಿಜೃಂಭಣೆಯಿಂದ ಜರುಗಿತು. 

ಪದ್ಮಾವತಿ ಹಾಗೂ ಲಕ್ಷ್ಮಿಯ ಸಮೇತ ವೆಂಕಟರಮಣ ದೇವರ ಉತ್ಸವ ಮೂರ್ತಿಗಳನ್ನು ಮುಂಜಾನೆ 6ಗಂಟೆಗೆ ಬ್ರಹ್ಮರಥದ ಬೆಳ್ಳಿಮಂಟಪದಲ್ಲಿ ಧಾರ್ಮಿಕ ಕೈಂಕರ್ಯಗಳೊಂದಿಗೆ ಸ್ಥಾಪಿಸಿ ಮಹಾಮಂಗಳರಾತಿ ಮಾಡಿ, ರಥದ ಗಾಲಿಗಳಿಗೆ ಕಾಯಿಗಳನ್ನು ಒಡೆದು ಹಣ್ಣು ಕಾಯಿ ಸಮರ್ಪಣೆ ಹಾಗೂ ದರ್ಶನಕ್ಕೆ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ಟ ಅವಕಾಶ ಮಾಡಿಕೊಟ್ಟರು. ಬ್ರಹ್ಮರಥದಲ್ಲಿ ವಿರಾಜಮಾನರಾಗಿ ಕುಳಿತ ಅಲಂಕಾರಿಕ ಉತ್ಸವ ಮೂರ್ತಿಗಳ ದರ್ಶನ ಪಡೆದ ಸಾವಿರಾರು ಭಕ್ತಾಧಿಗಳು ಭಕ್ತಿ ಸಾಗರದಲ್ಲಿ ಮಿಂದು ಪುಳಕಿತರಾದರು.

ವಾರ್ಷಿಕ ಮಹಾರಥೋತ್ಸವ ಅಂಗವಾಗಿ ಒಂದು ವಾರ ಮುಂಚಿತವಾಗಿ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿದೆ. ಸೋಮವಾರ ರಾತ್ರಿ ಉತ್ಸವ ಮೂರ್ತಿಯನ್ನು ಹೊತ್ತ ಬೆಳ್ಳಿಯ ಅಶ್ವರಥವು ದೇವಾಲಯದ ಸಮೀಪದ ಹನುಮಂತ ದೇಗುಲದ ಬಳಿ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಇದೇ ವೇಳೆಯಲ್ಲಿ ಹೂವಿನ ತೇರು, ತಟ್ಟಿ ತೇರುಗಳ ಜೊತೆ ಪಲ್ಲಕ್ಕಿ ಉತ್ಸವಗಳು ನಡೆದವು.
ತಂಪು ಪಾನೀಯ ವಿತರಣೆ…
ರಾಜ್ಯದ ಪ್ರಮುಖ ರಥೋತ್ಸವಗಳಲ್ಲಿ ಒಂದಾದ ಇಲ್ಲಿಯ ಮಂಜುಗುಣಿ ಮಹಾರಥೋತ್ಸವಕ್ಕೆ ರಾಜ್ಯದ ನಾನಾ ಭಾಗಗಳಿಂದ ಭಕ್ತಾಧಿಗಳು ಆಗಮಿಸುತ್ತಾರೆ. ವೆಂಕಟರಮಣ ದೇವರ ದರ್ಶನಕ್ಕಾಗಿ ಆಗಮಿಸುವ ಭಕ್ತಾಧಿಗಳ ಅನುಕೂಲಕ್ಕಾಗಿ ವಿಶಾಲವಾದ ರಥಬೀಧಿಯಲ್ಲಿ ಹತ್ತಾರು ತಂಪು ಪಾನೀಯ ವಿತರಣೆ ಮಾಡುತ್ತಿರುವ ದೃಶ್ಯಗಳು ಮಂಗಳವಾರ ಕಂಡುಬಂತು. ದೇವಸ್ಥಾನದ ವತಿಯಿಂದ ಪಾನಕ ಹಾಗೂ ಸರತಿ ಸಾಲಿನಲ್ಲಿ ನಿಂತ ಭಕ್ತಾಧಿಗಳಿಗೆ ಕುಡಿಯುವ ನೀರು ವಿತರಣೆ ಮಾಡಲಾಗಿತ್ತು. ಸರತಿ ಸಾಲಿನಲ್ಲಿ ಗಂಟೆಗಳ ಕಾಲ ನಿಲ್ಲುವ ಭಕ್ತಾಧಿಗಳಿಗೆಂದು 100ಮೀ ಉದ್ದದ ಪೆಂಡಾಲ್ ಕಟ್ಟಿ ಬಿಸಿಲ ಬೇಗೆಯನ್ನು ತಪ್ಪಿಸಲಾಗಿತ್ತು.
300ಕ್ಕೂ ಹೆಚ್ಚು ಕಾರ್ಯಕರ್ತರು…
ಜಿಲ್ಲೆಯ ಅತಿ ದೊಡ್ಡ ರಥೋತ್ಸವವಾದ ಮಂಜುಗುಣಿ ವೆಂಕಟರಮಣ ದೇವರ ಮಹಾರಥೋತ್ಸವದಲ್ಲಿ ಸ್ಥಳಿಯ ಗ್ರಾಮಗಳ 300ಕ್ಕೂ ಹೆಚ್ಚು ಕಾರ್ಯಕರ್ತರು ಕಲೆದೊಂದು ವಾರದಿಂದ ಸೇವಾಕಾರ್ಯದಲ್ಲಿ ನಿರತರಾಗಿದ್ದಾರೆ. ರಥೋತ್ಸವ ಅಂಗವಾಗಿ ಸಾರ್ವಜನಿಕರಿಗೆ ಊಟೋಪಚಾರ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಮೊದಲೆ 20ಸಮೀತಗಳನ್ನು ರಚನೆ ಮಾಡಿಕೊಂಡು ಪ್ರಸಾದ ಪ್ಯಾಕಿಂಗ್, ವಾಹನ ನಿಲುಗಡೆ, ಕಾರ್ಯಾಲಯ, ಗೋ ಕಾಣಿಕೆ ಸೇರಿದಂತೆ ಇನ್ನಿತರ ಸಮೀತಿಗಳಲ್ಲಿ ಸ್ಥಳಿಯ ಜನತೆ ಸೇವೆಯಲ್ಲಿ ತೊಡಗಿಕೊಂಡು ರಥೋತ್ಸವದ ಯಶಸ್ವಿಗೆ ಕಾರಣೀಕರ್ತರಾಗಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.