ಮಹಾರಥೋತ್ಸವದಲ್ಲಿ ಮಾದರಿಯಾದ ಆರ್ ಎಸ್ ಎಸ್ ಸ್ವಚ್ಛತೆಯ ಪರಿಕಲ್ಪನೆ

ಶಿರಸಿ: ಬುಧವಾರ ಬೆಳಗಿನ ಜಾವ ಶ್ರೀದೇವರ ರಥ ಎಳೆಯುವುದರ ಮೂಲಕ ಸಂಪನ್ನಗೊಂಡ ರಾಜ್ಯಪ್ರಸಿದ್ಧ ಮಂಜುಗುಣಿಯ ತೇರಿನ ರಥಬೀದಿಗಳಲ್ಲಿ ಓಡಾಡಿದವರಿಗೆ ಕಸವನ್ನು ಎಸೆಯಲು ಮಾರಿಗೊಂದರಂತೆ ಇಟ್ಟಿರುವ ಕಸದ ಬುಟ್ಟಿಗಳು ಕಣ್ಣಿಗೆ ಕಾಣಿಸದೇ ಇರಲಾರದು. ದೇವಾಲಯದ ಪ್ರಾಂಗಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿರುವ ದೇವಾಲಯದ ಆಡಳಿತ ಮಂಡಳಿಗೆ ಪ್ರಮುಖವಾಗಿ ನೆರವಾದವರು ಮಂಜುಗುಣಿ ಭಾಗದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರುಗಳಾಗಿದ್ದಾರೆ.

ಮಹಾರಥೋತ್ಸವ ಅಂಗವಾಗಿ ಇನ್ನೂರಕ್ಕು ಹೆಚ್ಚು ಅಂಗಡಿ ಮುಂಗಟ್ಟುಗಳು ಮಂಜುಗುಣಿ ರಥಬೀದಿಯಲ್ಲಿ ಕಳೆದ 2ದಿನಗಳಿಂದ ನೆಲೆ ನಿಂತಿದೆ. ರಾಜ್ಯದ ಪ್ರಮುಖ ದೇಗುಲಗಳಲ್ಲಿ ಒಂದಾದ ಮಂಜುಗುಣಿ ರಥೋತ್ಸವದ ದಿನಗಳಲ್ಲಿ ಆಗಮಿಸುವ ಪ್ರವಾಸಿಗರ ಸಂಖ್ಯೆಯೂ ಸಹ ಹೆಚ್ಚಿರುತ್ತದೆ. ಈ ನಿಟ್ಟಿನಲ್ಲಿ ಇಲ್ಲಿಯ ಆರ್‍ಎಸ್‍ಎಸ್ ಪ್ರಮುಖರಾದ ಕೇಶವ ಮರಾಠೆ ಹಾಗೂ ಅನೇಕ ಸ್ವಯಂಸೇವಕರಿಂದ ಮಂಜುಗುಣಿ ಮಹಾರಥೋತ್ಸವವು ಇತರರಿಗೆ ಮಾದರಿಯಾಗಬೇಕೆಂಬ ಉದ್ಧೇಶದಿಂದ ಹಾಗೂ ಪುಣ್ಯ ಕ್ಷೇತ್ರದ ಸ್ವಚ್ಛತೆಗೆ ಆದ್ಯತೆ ನೀಡುವ ದೃಷ್ಟಿಯಲ್ಲಿ ಐಸ್‍ಕ್ರೀಮ್ ಅಂಗಡಿಗಳು ಹಾಗೂ ರಥಬೀದಿಯ ಅಲ್ಲಲ್ಲಿ ಕಸದಬುಟ್ಟಿಗಳನ್ನಿಟ್ಟು ನೆಲಕ್ಕೆ ಕಸ ಚೆಲ್ಲದಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ಕೆಲ ಯುವಕರು ಪಾಲ್ಗೊಂಡು ಗಮನಸೆಳೆದರು. ಜೊತೆಯಲ್ಲಿ ದೇವಸ್ಥಾನದ ವತಿಯಿಂದ ಅಂಗಡಿಗಳಿಗೆ ಸ್ಥಳಾವಕಾಶ ನೀಡುವ ವೇಳೆಯೇ ಕಡ್ಡಾಯವಾಗಿ ಕಸದಬುಟ್ಟಿಗಳನ್ನಿಡುವಂತೆ ಸೂಚನೆ ನೀಡಲಾಗಿತ್ತು.
ನಮ್ಮೂರಿನ ದೇವಸ್ಥಾನದ ಆವರಣ ಸ್ವಚ್ಛವಾಗಿ, ಇತರರಿಗೆ ಮಾದರಿಯಾಗಬೇಕು ಎಂಬ ಹಂಬಲದ ಜೊತೆಯಲ್ಲಿ ಪ್ರಧಾನಮಂತ್ರಿಯವರ ಸ್ವಚ್ಚಭಾರತ ಪರಿಕಲ್ಪನೆಗೆ ಒತ್ತು ಕೊಟ್ಟಿರುವ ಅವರು, ಪ್ರತಿಯೊಂದು ಅಂಗಡಿಗಳ ಎದುರು ಕಸದ ಬುಟ್ಟಿಯನ್ನು ವ್ಯವಸ್ಥಿತವಾಗಿ ಇಟ್ಟಿದ್ದರ ಜೊತೆಗೆ ಓಡಾಡುವ ರಥಬೀದಿಯಲ್ಲೂ ಸಾರ್ವಜನಿಕರಿಗೆ ಕಾಣಿಸುವಂತೆ ಬುಟ್ಟಿಯನ್ನು ಜೋಡಿಸಿ, ಸ್ವಚ್ಚ ಮತ್ತು ನಿರ್ಮಲ ವಾತಾವರಣ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಿಸಿಲಲ್ಲಿ ಬಳಿದವರಿಗೆ ಪಾನಕ,ಮಜ್ಜಿಗೆ ಸೇರಿದಂತೆ ತಂಪು ಸೇವೆ:
ಮಂಗಳವಾರ ಮುಂಜಾನೆಯಿಂದಲೇ ಶ್ರೀ ದೇವರ ದರ್ಶನಕ್ಕೆ ಉರಿಬಿಸಿಲಿನಲ್ಲಿ ಕಾದು ನಿಂತಿದ್ದ ಭಕ್ತರಿಗೆ ಆರ್ ಎಸ್ ಎಸ್ ಮತ್ತು ಹಿಂದು ಜಾಗರಣಾ ವೇದಿಕೆ ಕಾರ್ಯಕರ್ತರಿಂದ ಪಾನಕ, ಮಜ್ಜಿಗೆ ಸೇರಿದಂತೆ ತಂಪು ಪಾನೀಯಗಳ ಸೇವೆಯನ್ನು ಬೆಳಗ್ಗಿನಿಂದ ಮಧ್ಯರಾತ್ರಿಯವರೆಗೂ ನೀಡುವುದರ ಮೂಲಕ ಭಕ್ತವೃಂದದ ದಣಿವಾರಿಸಿದ್ದಾರೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.