ಬೆಳೆಸಾಲ ಮನ್ನಾ ಮಾಡುವಂತೆ ಭಾಜಪಾದಿಂದ ಮುಖ್ಯಮಂತ್ರಿಗೆ ಮನವಿ

ಶಿರಸಿ: ತಾಲೂಕಿನ ಪೂರ್ವಭಾಗದಲ್ಲಿ ಬರಗಾಲದ ಸನ್ನಿವೇಶ ಉಂಟಾಗಿದ್ದು, ರಾಜ್ಯ ಸರಕಾರ ತಕ್ಷಣವೇ ರೈತರ ಬೆಳೆಸಾಲ ಮನ್ನಾ ಮಾಡಬೇಕು ಮತ್ತು ಸಾಲ ಮರುಪಾವತಿಯ ಅವಧಿ ವಿಸ್ತರಿಸಬೇಕು ಎಂದು ಆಗ್ರಹಿಸಿ ಇಂದು ಭಾರತೀಯ ಜನತಾ ಪಾರ್ಟಿಯ ವತಿಯಿಂದ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.

ಜಿ ಪಂ ಸದಸ್ಯ ಆರ್ ಡಿ ಹೆಗಡೆ ಜಾನ್ಮನೆ ಮಾತನಾಡಿ, ಸಿದ್ದರಾಮಯ್ಯನವರ ಸರ್ಕಾರ ಬಂದ ಮೇಲೆ ಬರಗಾಲ ಹೆಚ್ಚಾದಂತೆ ಕಾಣುತ್ತಿದೆ. ಅವರು ಆತ್ಮಹತ್ಯಾ ಭಾಗ್ಯ ಯೋಜನೆಯನ್ನು ಈ ವರ್ಷವೂ ಸಹ ಮುಮದುವರೆಸಿಕೊಂಡು ಬಂದಿದ್ದಾರೆ. ಕಾಂಗ್ರೆಸ್ಸಿನ ವಿಫಲತೆಯನ್ನು ಮುಚ್ಚಿಕೊಳ್ಳಲು ಕೇಂದ್ರ ಸರಕಾರದೆಡೆಗೆ ಬೆಟ್ಟು ಮಾಡಿ ತೋರಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಅಲ್ಲಿನ ಸರಕಾರ ರೈತರ ಸಾಲವನ್ನು ಮನ್ನಾ ಮಾಡುವ ಮೂಲಕ ಆಶ್ವಾಸನೆ ನೀಡಿದ್ದನ್ನು ಪೂರೈಸಿಕೊಂಡಿದ್ದಾರೆ. ಸಿದ್ದರಾಮಯ್ಯನವರು ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಜಿಲ್ಲೆಯ ಉಸ್ತುವಾರಿ ಸಚಿವರು ಗುದ್ದಲಿ ಪೂಜೆಗೆ ಮಾತ್ರ ಶಿರಸಿ ತಾಲೂಕಿಗೆ ಬಂದು ಹೋಗುವಂತೆ ಕಾಣುತ್ತಾರೆ ಎಂದರು.
ಮಾಜಿ ಶಾಸಕ ವಿ ಎಸ್ ಪಾಟೀಲ್ ಮಾತನಾಡಿ, ಕಾಂಗ್ರೆಸ್ ಎಂದಿಗೂ ರೈತರ ಸಾಲವನ್ನು ಮನ್ನಾ ಮಾಡಿಲ್ಲ. ಇಂದು ಸಾಕಷ್ಟು ರೈತರು ಸಮಸ್ಯೆಯಲ್ಲಿದ್ದಾರೆ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಮೇಲೆ ರೈತರು, ಪೋಲಿಸರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಈ ಸಮಯದಲ್ಲಿ ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಆರ್ ವಿ ಹೆಗಡೆ ಚಿಪಗಿ, ಬನವಾಸಿ ಗ್ರಾ ಪಂ ಅಧ್ಯಕ್ಷ ಗಣೇಶ ಸಣ್ಣಲಿಂಗಣ್ಣನವರ್, ತಾ ಪಂ ಉಪಾಧ್ಯಕ್ಷ ಚಂದ್ರು ಎಸಳೆ, ಯುವಮೋರ್ಚ ಗ್ರಾಮೀಣ ಘಟಕದ ಅಧ್ಯಕ್ಷ ಪ್ರಸನ್ನ ಹೆಗಡೆ, ಜಿಲ್ಲಾ ಯುವಮೋರ್ಚ ಕಾರ್ಯದರ್ಶಿ ರವೀಶ ಹೆಗಡೆ, ಶ್ರೀರಾಮ ನಾಯ್ಕ, ವಿನಾಯಕ ಹೆಗಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.