ಇಸ್ರೇಲ್'ಗೆ ಭೇಟಿ ನೀಡಿದ್ದ ರೈತರಿಂದ ಅನುಭವ-ಮಾಹಿತಿ ಹಂಚಿಕೆ

ಶಿರಸಿ: ಕೃಷಿ ಪದ್ದತಿಯ ಅಳವಡಿಕೆಯಲ್ಲಿ ಇಸ್ರೇಲ್ ಜಗತ್ತಿಗೇ ಮಾದರಿಯಾಗಿದ್ದು, ಅಲ್ಲಿನ ಕೃಷಿ ಪದ್ದತಿಯನ್ನು ತಿಳಿದುಕೊಂಡು ಬರಲು ಇಸ್ರೇಲ್ ಗೆ ತೆರಳಿದ್ದ ತಾಲೂಕಿನ ರೈತರು ಇಂದು ನಗರದ ನೆಮ್ಮದಿ ಕುಟೀರದಲ್ಲಿ ತಮ್ಮ ಅನುಭವ, ಅಭಿಪ್ರಾಯಗಳನ್ನು ಹಂಚಿಕೊಳ್ಳುವುದರ ಜೊತೆಗೆ ಕೆಲವು ವಿಡಿಯೋಗಳನ್ನು ತೋರಿಸಿದರು.

ಕದಂಬ ಮಾರ್ಕೆಟಿಂಗ್ ಶಿರಸಿ, ಉ.ಕ.ಜಿಲ್ಲಾ ಪ್ರಾಂತೀಯ ಸಾವಯವ ಕೃಷಿಕರ ಸಂಘಗಳ ಒಕ್ಕೂಟ, ನೆಮ್ಮದಿ ಬಳಗ ಶಿರಸಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ಮೊದಲು ಪ್ರಾಸ್ತಾವಿಕ ಮಾತನಾಡಿದ ಸುರೇಶ್ಚಂದ್ರ ಹೆಗಡೆ, ಇಸ್ರೇಲಿನಲ್ಲಿ ಜನ ಸಹಭಾಗಿತ್ವದಲ್ಲಿ ಕೃಷಿ ನಡೆಸುತ್ತಿರುವುದು ಹೆಚ್ಚು ಕಂಡು ಬಂದಿದೆ. ಕೃಷಿಯನ್ನು ವ್ಯವಸ್ಥಿತವಾಗಿ ಮಾಡುವುದಕ್ಕೆ ಇಸ್ರೇಲ್ ಮಾದರಿಯಾಗಿದೆ. ಅಲ್ಲಿ ವಾರ್ಷಿಕ 15 ರಿಂದ 50 ಮಿ ಲೀ ಮಳೆ ಸಾಮಾನ್ಯವಾಗಿ ಬೀಳುತ್ತದೆ ಎಂದರು.
ತೋಟಗಾರಿಕಾ ಇಲಾಖೆಯ ಲಕ್ಷ್ಮಿನಾರಾಯಣ ಹೆಗಡೆ ಮಾಹಿತಿ ಹಂಚಿಕೊಂಡು ಕನಿಷ್ಟ 40-80 ಲೀ ನೀಡುವಂತಹ ಹಸುಗಳನ್ನು ಅಲ್ಲಿಯ ಹೈನುಗಾರಿಕೆಯಲ್ಲಿ ಕಾಣಬಹುದಾಗಿದೆ. ಓಲೀವ್, ಖರ್ಜೂರ, ಓರ್ಚರ್ಡ್, ಮಾವು, ಕಿತ್ತಳೆ ಇಸ್ರೇಲ್ ನ ಮುಖ್ಯಬೆಳೆಯಾಗಿದೆ. ದೊಡ್ಡ ಪ್ರಮಾಣದಲ್ಲಿ ತರಕಾರಿಯನ್ನು ಬೆಳೆಯುತ್ತಾರೆ. ಹೈನುಗಾರಿಕೆ, ಕೃಷಿ, ನೀರಿನ ಮರುಬಳಕೆಯ ಬಗ್ಗೆ ಅಲ್ಲಿಯವರು ಕೈಗೊಂಡ ನಿರ್ಣಯಗಳನ್ನು ಇಲ್ಲಿನ ಅನುಕೂಲಕ್ಕೆ ತಕ್ಕಂತೆ ನಾವೂ ಸಹ ಅಳವಡಿಸಿಕೊಳ್ಳಬಹುದಾಗಿದೆ. ಆದರೆ ಸರಿಯಾದ ಅಧ್ಯಯನ ಅಗತ್ಯ ಎಂದರು.
ಯುವ ಕೃಷಿಕ ಚಿನ್ಮಯ ಹೆಗಡೆ ಬೊಮ್ನಳ್ಳಿ ಮಾತನಾಡಿ, ಅಲ್ಲಿನ ಜನ ಕೃಷಿಗೋಸ್ಕರ ತಮ್ಮ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡ ಯಂತ್ರಗಳ ಬಗ್ಗೆ ಮತ್ತು ಆಧುನಿಕ ಯಂತ್ರೋಪಕರಣಗಳ ಕುರಿತಾಗಿ ಹೇಳುವುದರ ಜೊತೆಯಲ್ಲಿ ಪಿಪಿಟಿ ಮೂಲಕ ವಿಡಿಯೋವನ್ನು ತೋರಿಸಿಕೊಟ್ಟರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.