ಉಮಾಕಾಂತ ಭಟ್ಟ ಕೆರೆಕೈ ಸೇರಿದಂತೆ ಸಾಧಕರಿಗೆ 'ಹವ್ಯಕ ಪ್ರಶಸ್ತಿ'

ಶಿರಸಿ: ಸಂಸ್ಕೃತ ವಿದ್ವಾಂಸ, ಖ್ಯಾತ  ತಾಳಮದ್ದಲೆ ಅರ್ಥಧಾರಿ ಮೇಲುಕೋಟೆಯ ಸಂಸ್ಕೃತ ಕಾಲೇಜಿನ ನೂತನ ಪ್ರಾಚಾರ್ಯ ಉಮಾಕಾಂತ ಭಟ್ಟ ಕೆರೇಕೈ, ಖ್ಯಾತ ಹೃದ್ರೋಗ ತಜ್ಞ ಡಾ. ದಿವಾಕರ ಭಟ್ಟ ಅವರೂ ಸೇರಿದಂತೆ ಹಲವು ಸಾಧಕರಿಗೆ ಶ್ರೀಅಖಿಲ ಹವ್ಯಕ ಮಹಾಸಭಾದ ಹವ್ಯಕ ಪ್ರಶಸ್ತಿ ಪ್ರಕಟಿಸಲಾಗಿದೆ.

ಮೇಲುಕೋಟೆ ಸಂಸ್ಕೃತ ವಿದ್ಯಾಲಯದಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿ ಯಕ್ಷಗಾನ ಕಲೆಯಲ್ಲಿ ಉತ್ತಮ ಪಾತ್ರಧಾರಿ ಹಾಗೂ ಯಕ್ಷಗಾನ ತಾಳಮದ್ದಳೆಯ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದ, ಖ್ಯಾತ ವಾಗ್ಮಿ, ಚಿಂತಕ ಹಾಗೂ ಉತ್ತಮ ಲೇಖಕ,  ಸಂಸ್ಕೃತ ಮತ್ತು ಕನ್ನಡದಲ್ಲಿ ಹಲವಾರು ಮೌಲಿಕ ಕೃತಿಗಳನ್ನು ರಚಿಸಿ ಪ್ರಕಟಿಸಿದ ಉಮಾಕಾಂತ ಭಟ್ಟರಿಗೆ ಹವ್ಯಕ ಮಹಾ ಸಭಾ ಹವ್ಯಕ ಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.
ಜಿಲ್ಲೆಯ ಸಿದ್ದಾಪುರ ಹೆಗ್ಗರಣಿ ಮೂಲದ ಖ್ಯಾತ ಹೃದ್ರೋಗ ತಜ್ಞ ಡಾ. ದಿವಾಕರ ಭಟ್ಟ ಬೆಂಗಳೂರು ನಗರದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಸಾವಿರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ ಕೀರ್ತಿ ಪಡೆದಿದ್ದಾರೆ. ಇವರು ಹವ್ಯಕ ಭೂಷಣ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮೂಲತಃ ತಾಲೂಕಿನ ಗೋಳಗೋಡಿನವರಾದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ವಿಶೇಷ ಸಾಧನೆ ಮಾಡಿದ ವಿದುಷಿ ವಸುಧಾ ಶರ್ಮಾ ಸಾಗರ ಅವರಿಗೆ, ಭಾರತೀಯ ರಕ್ಷಣಾ ಕ್ಷೇತ್ರದ ತೇಜಸ್ ಯುದ್ಧ ವಿಮಾನದ ಯೋಜನಾ ಮುಖ್ಯಸ್ಥರಾಗಿ ಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿರುವ ಅತ್ಯಂತ ಚಾಣಾಕ್ಷ ವ್ಯಕ್ತಿ, ಅಂತರಾಷ್ಟ್ರೀಯ ಛಾಯಾಚಿತ್ರಗ್ರಾಹಕ ಕುಮಟಾ ಮೂಲದ ಕೃಷ್ಣ ಭಟ್ ಮೂರೂರು ಅವರಿಗೆ ಹವ್ಯಕ ಶ್ರೀ ಪ್ರಶಸ್ತಿ ಪ್ರಕಟಿಸಲಾಗಿದೆ.
ಇದೂ ಅಲ್ಲದೇ ಸಾಗರದ ಎಂ. ಹರನಾಥ ರಾವ್ ಮತ್ತಿಕೊಪ್ಪರಿಗೆ ಹವ್ಯಕ ಭೂಷಣ, ದಕ್ಷಿಣ ಕನ್ನಡದ ಶ್ರೀಮತಿ ಗಂಗಾ ಪಾದೇಕಲ್ಲಿಗೆ ಹವ್ಯಕ ಭೂಷಣ ಅವರಿಗೂ ಪ್ರಶಸ್ತಿ ಘೋಷಿಸಲಾಗಿದೆ. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಸಾಂಕೇತಿಕವಾಗಿ ಪಲ್ಲವ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದ್ದು, ಏ.9ರಂದು ಬೆಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.