ಪರಿಸರ ವಿಕೋಪದ ಸವಾಲನ್ನು ಕಣ್ಣೆದುರಿಗಿಡುವ ಪ್ರಯತ್ನ ಈ 'ವರ್ಷಾ-ಹರ್ಷಾ' ಕಿರುಚಿತ್ರದ್ದು..!

ಶಿರಸಿ: ಕೆರೆಹೂಳು ತೆಗೆಯುವ ಮೊದಲು ತಲೆಯ ಹೂಳನ್ನು ತೆಗೆದಾಗ ಮಾತ್ರ ಜೀವಜಲಗಳ ರಕ್ಷಣೆಗೆ ಜನರು ಮುಂದಾಗುತ್ತಾರೆ ಎಂದು ಪರಿಸರ ಬರಹಗಾರ ಶಿವಾನಂದ ಹೆಗಡೆ ಕಳವೆ ಹೇಳಿದರು.

ತಾಲೂಕಿನ ಮತ್ತಿಘಟ್ಟಾದ ಮುಂಡಗನಮನೆ ಸಹಕಾರಿ ಸಂಘದ ಸಭಾಂಗಣದಲ್ಲಿ ಸೋಮವಾರ ನಡೆದ ಅಮಿತ್ ಹೆಗಡೆಯವರ ವರ್ಷಾ-ಹರ್ಷಾ ಕಿರುಚಿತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬರಗಾಲದ ಸಮಸ್ಯೆಗಳಿಗೆ ಸರ್ಕಾರವು ಟ್ಯಾಂಕರ್ ನೀರು ಕೊಟ್ರೆ ಸಾಕಾಗೊಲ್ಲ ಎಂಬುದನ್ನು ಬಯಲುಸೀಮೆಯ ಹಳ್ಳಿಗಳ ಜನರು ಅರಿತು ಜೀವಜಲ ರಕ್ಷಣೆಯ ಕಾರ್ಯದಲ್ಲಿ ತೊಡಗಿದ್ದಾರೆ. ನೀರಿಲ್ಲ ಎಂದು ನಿರಾಸೆ ಹೊತ್ತ ಜನರಲ್ಲಿ ಜೀವಜಲದ ಆಕಾಂಕ್ಷೆ ಈಗೀಗ ಮೂಡುತ್ತಿದ್ದು, ನೀರಿನ ಮೂಲವಾದ ಕೆರೆಗಳ ಹೂಳೆತ್ತುವ ಕಾಮಗಾರಿಗಳು ನಡೆಯುತ್ತಿದೆ ಎಂದರು.
ಅರಣ್ಯ ಕಾಲೇಜು ಪ್ರಾಧ್ಯಾಪಕ ಡಾ. ವಾಸುದೇವ ಮಾತನಾಡಿ, ವರ್ಷಾ-ಹರ್ಷಾ ಕಿರುಚಿತ್ರವು ನಮ್ಮಲ್ಲಿನ ಭಯವನ್ನು ಹೋಗಲಾಡಿಸಲು ಹಾಗೂ ಮುಂದಿನ ದಿನದಲ್ಲಿ ಹೇಗೆ ಜಲಮೂಲ ಉಳಿಸಬೆಕೆಂಬುದನ್ನು ತೋರ್ಪಡಿಸುತ್ತದೆ. ಮಲೆನಾಡಿನ ಪರಿಸ್ಥಿತಿ ವರ್ಷದಿಂದ ವರ್ಷಕ್ಕೆ ಹದಗೆಡುತ್ತಿದೆ. ಮಲೆನಾಡಿನ ಮಳೆಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುವ 8 ರಿಂದ 10 ದೊಡ್ಡ ದೊಡ್ಡ ಪ್ರಭೇದದ ಮರಗಳು ಮೇಲಿನಿಂದ ಒಣಗುತ್ತಿದೆ. ಇದಕ್ಕೆ ಹವಾಮಾನ ವೈಪರಿತ್ಯವೇ ಮುಖ್ಯ ಕಾರಣವಾಗಿದೆ. ಬರವನ್ನು ಮಲೆನಾಡಿನಿಂದ ಹೊರಹಾಕಲು ಸಾಕಷ್ಟು ಯೋಜನೆಗಳನ್ನು ರೂಪಿಸಲಾಗಿದ್ದರು ಸರ್ಕಾರಿ ವ್ಯವಸ್ಥೆಯ ಇಚ್ಛಾಶಕ್ತಿ ಕೊರತೆ ಎದ್ದು ಕಾಣುತ್ತಿದೆ. ಹವಾಮಾನ ವೈಪರಿತ್ಯವನ್ನು ಬದಲಾಯಿಸಲು ಸಾಧ್ಯವಿಲ್ಲದಿದ್ದರೂ ಸಹ ಅದನ್ನು ಎದುರಿಸುತ್ತೇವೆಂಬ ಮನೋಧೈರ್ಯ ಬೆಳೆಸಿಕೊಳ್ಳಬೇಕು ಎಂದರು.
ಹವಾಮಾನ ವೈಪರಿತ್ಯದ ಕುರಿತಾಗಿ ರಾಷ್ಟ್ರಮಟ್ಟದಲ್ಲಿ ಹಿರಿಯ ಪರಿಸರವಾದಿಗಳು ಚಿಂತನೆ ಮಾಡುತ್ತಿದ್ದಾರೆ. ಪೀಪಲ್ ಟ್ರೀ ಸಂಸ್ಥೆಯು ಹವಾಮಾನ ವೈಪರಿತ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ಹವಾಮಾನ ಬದಲಾವಣೆ ಮೂಲವನ್ನಾಧರಿಸಿ 6ಭಾಷೆಗಳಲ್ಲಿ ಕಿರುಚಿತ್ರ ರಚನೆ ಮಾಡಲಾಗುತ್ತಿದೆ. ಹವಾಮಾನ ಬದಲಾವಣೆ ಬಗ್ಗೆ ಹೆಚ್ಚು ಚಿಂತನೆ ಮಾಡಿ ಪರಿಸರ ವಿಕೋಪ ತಡೆಗಟ್ಟಲು ಯುವಜನತೆ ಶ್ರಮಿಸಬೇಕಿದೆ ಎಂದು ಪೀಪಲ್ ಟ್ರಿ ಸಂಸ್ಥೆಯ ಓಮ್‍ಜಿ ಜೋನ್ ಹೇಳಿದರು.
ವೇದಿಕೆಯಲ್ಲಿ ವಿಜ್ಞಾನಿ ಡಾ.ಶ್ರೀಕಾಂತ ಗುನಗಾ, ಪಶು ವಿಜ್ಞಾನಿ ಗಣೇಶ ಹೆಗಡೆ, ಮತ್ತಿಘಟ್ಟಾ ರಂಗಬಳಗದ ವಿ.ಆರ್ ಹೆಗಡೆ, ಗೋಪಾಲಕೃಷ್ಣ ವೈದ್ಯ ಮತ್ತಿಘಟ್ಟ ಇನ್ನಿತರರು ಉಪಸ್ಥಿತರಿದ್ದರು. ಅಮಿತ್ ಹೆಗಡೆ ಸ್ವಾಗತಿಸಿದರು. ಶ್ರೀನಿವಾಸ ಮತ್ತಿಘಟ್ಟ ನಿರೂಪಿಸಿದರು. ಶ್ರೀಧರ ಹೆಗಡೆ ಬೆಣ್ಣೆಮನೆ ವಂದಿಸಿದರು.

ಕಿರುಚಿತ್ರದ ಕುರಿತು…

ತಾಲೂಕಿನ ಮತ್ತಿಘಟ್ಟಾದ ಮಳೆಕಾಡು ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣಗೊಂಡ 10
ನಿಮಿಷದ ವರ್ಷಾ-ಹರ್ಷಾ ಕಿರುಚಿತ್ರವು ಪರಿಸರ ತಜ್ಞನೊಬ್ಬ ಪರಿಸರ ವಿಕೋಪದ ಸವಾಲನ್ನು ಎದುರಿಸಲು ಯಾವ ರೀತಿ ಹೋರಾಡುತ್ತಾನೆಂಬುದನ್ನು ತಿಳಿಸುತ್ತದೆ. ಪರಿಸರ ತಜ್ಞನೊಬ್ಬ ಮಲೆನಾಡ ಬೆಟ್ಟದ ತುದಿಯಲ್ಲಿ ನಿಂತು ತನ್ನಲ್ಲಿರುವ ಜಿಪಿಎಸ್ ಹಾಗೂ ಹಳೆಯ ಛಾಯಾಚಿತ್ರ ತೆಗೆದು ಕಥೆ ಹೋಲಿಕೆ ಮಾಡುವ ಸನ್ನಿವೇಶದಿಂದ ಪ್ರಾರಂಭವಾಗುವ ಕಥೆಯು ಹವಾಮಾನ ವೈಪರಿತ್ಯದಿಂದಾಗಿ ಬಯಲು ಸೀಮೆ ಮಾತ್ರವಲ್ಲದೆ ಮಲೆನಾಡಿನಲ್ಲಿಯ ಸಹ ಜಲಕ್ಷಾಮದ ತೊಂದರೆ ಪ್ರಸ್ತುತ ದಿನಗಳಲ್ಲಿ ಎದ್ದುಕಾಣುತ್ತಿದೆ. ಕೆರೆ, ತೊರೆ, ಹಳ್ಳಗಳಲ್ಲಿ ನಿಸ್ಸಂಕೋಚವಾಗಿ ಹರಿಯುತ್ತಿದ್ದ ನೈಸರ್ಗಿಕ ನೀರು ಬತ್ತುತ್ತಿದೆ. ಪರಿಸರ ವಿಕೋಪದಿಂದಾಗಿ ಪಶ್ಚಿಮ ಘಟ್ಟ ಮಲೆನಾಡಿನ ಪರಿಸರ ಪ್ರಾಣಿ ಪಕ್ಷಿಗಳು ಹಾಗೂ ಜನ ಜೀವನದ ಮೇಲೆ ಆಗುತ್ತಿರುವ ವ್ಯತಿರಿಕ್ತ ಪರಿಣಾಮವನ್ನು ಎಳೆ-ಎಳೆಯಾಗಿ ನೋಡುರರ ಮುಂದೆ ಬಿಚ್ಚಿಡಲಾಗಿದೆ.

Categories: ಜಿಲ್ಲಾ ಸುದ್ದಿ

Leave A Reply

Your email address will not be published.