ಕೆಲವೇ ನಿಮಿಷದಲ್ಲಿ ₹4 ಲಕ್ಷ ಸಂಗ್ರಹ; ಜಲಮೂಲ ಸಂರಕ್ಷಣೆಗೆ ಶಿರಸಿಗರ ಸಂಕಲ್ಪ

ಶಿರಸಿ: ಜಲಮೂಲ ಸಂರಕ್ಷಣೆಗೆ ಪಣತೊಟ್ಟಿರುವ ನಗರವಾಸಿಗಳು ಸಾರ್ವಜನಿಕರ ವಂತಿಗೆ ಹಣದಿಂದ ಪುಟ್ಟ ಕೆರೆಯೊಂದರ ಹೂಳೆತ್ತಿ ಪುನಶ್ಚೇತನಗೊಳಿಸುವ ಕಾರ್ಯಕ್ಕೆ ಯುಗಾದಿ ಹಬ್ಬದ ದಿನ ಮಂಗಳವಾರ ಚಾಲನೆ ನೀಡಲಾಯಿತು.

ಸರ್ಕಾರದ ನೆರವನ್ನು ಮರೆತು ಸಾರ್ವಜನಿಕರಿಂದ ವಂತಿಗೆ ಸಂಗ್ರಹಿಸಿ ಆನೆಹೊಂಡ ಕೆರೆಯ ಪುನಶ್ಚೇತನಗೊಳಿಸುವ ಕನಸು ಹೊತ್ತು ಬಂದವರಲ್ಲಿ ಕೆಲವರು ಸ್ಥಳದಲ್ಲಿಯೇ ತಮ್ಮ ಕೊಡುಗೆಗಳನ್ನು ಘೋಷಿಸುವುದರ ಮೂಲಕ 4.13 ಲಕ್ಷ ಮೊತ್ತ ಸಂಗ್ರಹಕ್ಕೆ ಕಾರಣವಾಯಿತು.
ಕೆರೆ ಅಭಿವೃದ್ಧಿಗೆ ಪ್ರೇರೇಪಿಸಿ ಸಾರ್ವಜನಿಕರನ್ನು ಅಣಿಗೊಳಿಸಿರುವ ಉಪವಿಭಾಗಾಧಿಕಾರಿ ಕೆ. ರಾಜು ಮೊಗವೀರ ಆನೆಹೊಂಡದ ಹೂಳೆತ್ತುವ ಕಾರ್ಯಕ್ಕೆ ಸಾಂಕೇತಿಕ ಚಾಲನೆ ನೀಡಿದರು. ‘ಕೊಳವೆಬಾವಿ ಕೊರೆದು ನೀರನ್ನು ಬಳಸಿದರೆ ಮನೆಯ ಹಿರಿಯರು ಕೂಡಿಟ್ಟ ಹಣವನ್ನು ಖರ್ಚು ಮಾಡಿದಂತೆ ಆಗುತ್ತದೆ. ಕೆರೆ, ತೆರದ ಬಾವಿಗಳನ್ನು ಪುನಶ್ಚೇತನಗೊಳಿಸಿಕೊಂಡು ಸಾಧ್ಯವಾದಷ್ಟು ಅದೇ ನೀರನ್ನು ಬಳಸಿಕೊಂಡು ಭವಿಷ್ಯದ ನೆಮ್ಮದಿ ಉಳಿಸಿಕೊಳ್ಳಬೇಕು’ ಎಂದು ಅವರು ಹೇಳಿದರು.
ಕೆರೆ ಅಭಿವೃದ್ಧಿಯ ಕಲ್ಪನೆ ಬಿತ್ತಿದ ಪರಿಸರ ಬರಹಗಾರ ಶಿವಾನಂದ ಕಳವೆ ಮಾತನಾಡಿ ‘ಆನೆಹೊಂಡ ಕೆರೆ ಅಭಿವೃದ್ಧಿಗೆ ₹ 8–10 ಲಕ್ಷ ವೆಚ್ಚವಾಗಬಹುದು. ಒಮ್ಮೆ ಮಳೆಯಾದರೆ ಇಲ್ಲಿ 3.8 ಮಿಲಿಯನ್ ಲೀಟರ್ ನೀರು ಸಂಗ್ರಹವಾಗುತ್ತದೆ. ಇದೇ ಕೆರೆಯ ಪಕ್ಕದಲ್ಲಿ ಪಾಳುಬಿದ್ದಿರುವ ಬಾವಿಯಲ್ಲಿ ಈ ಬಿರು ಬೇಸಿಗೆಯಲ್ಲೂ ಆರು ಅಡಿ ನೀರಿದೆ. ಜಲಮೂಲವನ್ನು ಸಂರಕ್ಷಿಸಿಕೊಂಡರೆ ನೀರಿಗೆ ಬರ ಬರುವುದಿಲ್ಲ’ ಎಂದರು.
ನಗರಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿ, ಉಪಾಧ್ಯಕ್ಷೆ ಅರುಣಾ ವೆರ್ಣೇಕರ, ಪೌರಾಯುಕ್ತ ಮಹೇಂದ್ರಕುಮಾರ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಬಸವರಾಜ ದೊಡ್ಮನಿ, ನಗರದ ಪ್ರಮುಖರಾದ ಉದಯ ಸ್ವಾದಿ, ಶಂಕರ ದಿವೇಕರ, ಡಾ. ಶಿವರಾಮ ಕೆ.ವಿ, ಕಿರಣ ಚಿತ್ರಕಾರ, ಅನಿಲ್ ನಾಯಕ ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.