ಶಿರಸಿ: ಗ್ರಾಮೀಣ ಭಾಗದ ಅಂಗಡಿಗಳಲ್ಲಿ ಮದ್ಯ ಮಾರಾಟ ನಿಷೇಧಿಸಬೇಕು. ತಾಲೂಕಾ ಮಟ್ಟದಲ್ಲಿ ಸ್ತ್ರೀ ಶಕ್ತಿ ಬ್ಯಾಂಕ್ ಸ್ಥಾಪಿಸುವುದರ ಜೊತೆಗೆ ರಾಷ್ಟ್ರೀಕೃತ ಬ್ಯಾಂಕುಗಳ ಬಡ್ಡಿ ದರ ಸ್ಥಗಿತಗೊಳಿಸಬೇಕು ಇತ್ಯಾದಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕೌಶಲ್ಯ ಸ್ತ್ರೀ ಶಕ್ತಿ ಒಕ್ಕೂಟದ ವತಿಯಿಂದ ನಗರದಲ್ಲಿ ಮೌನ ಪ್ರತಿಭಟನೆ ನಡೆಯಿತು.
ಎಲ್ಲ ಸಂಘಗಳಿಗೂ ಸುತ್ತು ನಿಧಿ ಕೊಡಬೇಕು. ರೇಶನ್ ಅಂಗಡಿ ನಡೆಸಲು ಸ್ತ್ರೀ ಶಕ್ತಿ ಸಂಘಗಳಿಗೆ ಅವಕಾಶ ನೀಡಬೇಕು. ಸಣ್ಣ ಕೈಗಾರಿಕೆ ಮತ್ತು ಮಹಿಳಾ ಉತ್ಪನ್ನಗಳಿಗೆ ಸ್ತ್ರೀ ಶಕ್ತಿ ಸಂಘಟನೆಗಳಿಗೆ ಆದ್ಯತೆ ನೀಡಬೇಕು. ಬಡ್ಡಿ ರಹಿತ ಸಾಲ ಸ್ತ್ರೀ ಶಕ್ತಿ ಸಂಘಗಳಿಗೆ ನೀಡಬೇಕು. ಯಶಸ್ವಿನಿ ಯೋಜನೆ ಸ್ತ್ರೀ ಶಕ್ತಿ ಒಕ್ಕೂಟಕ್ಕೂ ವಿಸ್ತರಿಸಬೇಕು. ವಿಧವಾ ವೇತನ ಹಾಗೂ ವೃದ್ದಾಪ್ಯ ವೇತನವನ್ನು ಹೆಚ್ಚಿಸಬೇಕು. ಸರ್ಕಾರದ ಎಲ್ಲ ಸೌಲಭ್ಯಗಳನ್ನು ತಾಲೂಕಾ ಒಕ್ಕೂಟಕ್ಕೆ ನೀಡಬೇಕು ಎಂದು ಒತ್ತಾಯಿಸಿ ಶಿರಸಿ ಉಪವಿಭಾಗಾಧಿಕಾರಿ ಕೆ.ರಾಜು ಮೊಗವೀರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಒಕ್ಕೂಟದ ಅಧ್ಯಕ್ಷೆ ಶೋಭಾ ನಾಯ್ಕ, ತಾಲೂಕಿನ ಎಲ್ಲ ಸ್ತ್ರೀ ಶಕ್ತಿ ಸಂಘಗಳ ಅಧ್ಯಕ್ಷರು, ಕಾರ್ಯಕರ್ತರು ಇದ್ದರು.