ರೈತರಿಗೆ ಬರ ಪರಿಹಾರ ನೀಡಲು ಬಿಜೆಪಿ ಆಗ್ರಹ

ಶಿರಸಿ: ರಾಜ್ಯದಲ್ಲಿ ರೈತರು ಸತತ ಕಂಗೆಟ್ಟಿದ್ದು, ಆರ್ಥಿಕವಾಗಿ ಅತ್ಯಂತ ದುಸ್ಥಿತಿಯಲ್ಲಿದ್ದಾರೆ. ಸಹಕಾರಿ ಸಂಘಗಳಲ್ಲಿ ಮಾಡಿರುವ ಸಾಲವನ್ನು ತುಂಬಲಾಗದೇ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಆದರೆ ರಾಜ್ಯ ಸರಕಾರ ಇದರ ಬಗ್ಗೆ ನಿಷ್ಕಾಳಜಿ ವಹಿಸುವುದನ್ನು ಭಾರತೀಯ ಜನತಾ ಪಾರ್ಟಿ ಖಂಡಿಸುತ್ತದೆ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಅವರು ಇಂದು ನಗರದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ಮಾತನಾಡಿ, ಪ್ರಸ್ತುತ ವರ್ಷ ಮುಂಗಾರು ಮತ್ತು ಹಿಂಗಾರು ಮಳೆ ಕೈಕೊಟ್ಟಿದ್ದು, ಬೆಳೆದ ಬೆಳೆಗಳು ರೈತರ ಕೈ ಸೇರಿಲ್ಲ. ಅವರು ತಮ್ಮ ದಿನನಿತ್ಯದ ಜೀವನವನ್ನು ಸಾಗಿಸುವುದೇ ಕಷ್ಡಕರವಾಗಿದೆ. ರಾಜ್ಯ ಸರಕಾರ ಇಲ್ಲಿಯ ಪರಿಸ್ಥಿತಿಯನ್ನು ನಿಭಾಯಿಸದೇ ಕೇಂದ್ರ ಸರಕಾರ ನೀಡಿದ ಹಣವನ್ನೂ ಸಹ ಸರಿಯಾಗಿ ಉಪಯೋಗಿಸದೇ ಕಾಲಹರಣ ಮಾಡುತ್ತಿದೆ.
ಈ ಕೂಡಲೇ ರಾಜ್ಯ ಸರಕಾರ ರೈತರ ಎಲ್ಲ ಸಾಲವನ್ನು ಮನ್ನಾ ಮಾಡಬೇಕು, ಜೊತೆಯಲ್ಲಿ ಜಾನುವಾರುಗಳಿಗೆ ಮೇವು ಮತ್ತು ನೀರನ್ನು ಒದಗಿಸಬೇಕು. ಇಲ್ಲವಾದಲ್ಲಿ ಬಿಜೆಪಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಅವರು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ತಾಲೂಕ ಗ್ರಾಮೀಣ ಅಧ್ಯಕ್ಷ ಆರ್ ವಿ ಹೆಗಡೆ ಚಿಪಗಿ, ನಗರ ಘಟಕಾಧ್ಯಕ್ಷ ಗಣಪತಿ ನಾಯ್ಕ, ಜಿ ಪಂ ಸದಸ್ಯ ಆರ್ ಡಿ ಹೆಗಡೆ, ನಗರ ಪ್ರಧಾನ ಕಾರ್ಯದರ್ಶಿ ರಿತೇಶ ಕೆ, ಜಿಲ್ಲಾ ಕೋಶಾಧ್ಯಕ್ಷ ನಂದನ ಸಾಗರ, ಜಿ ಪಂ ಸದಸ್ಯೆ ಉಷಾ ಹೆಗಡೆ, ವೀಣಾ ಶೆಟ್ಟಿ,  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.