ಜಿಲ್ಲೆಯಲ್ಲಿ 'ಮುತ್ತುಕೃಷಿ'ಗೆ ಮುನ್ನುಡಿ ಬರೆದ ನಂದಜಾ ಹೆಗಡೆ

ಶಿರಸಿ: ಕಳೆದ 3 ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಮುತ್ತು ಕೃಷಿಗೆ ಮರು ಜೀವ ನೀಡಲೆಂದು ಆಯ್ದ ಕೃಷಿಕರನ್ನು ಬೆಂಗಳೂರಿಗೆ ತರಬೇತಿಗಾಗಿ ಕಳುಹಿಸಿಕೊಟ್ಟಿದ್ದರ ಜೊತೆಗೆ ಕೃಷಿ ಮಾಡಿದ ರೈತರಿಗೆ ಪ್ರೋತ್ಸಾಹ ಧನವನ್ನು ಕೊಡಿಸಿ ನೈಸರ್ಗಿಕವಾಗಿ ಮುತ್ತು ಬೆಳೆಯಲು ಉತ್ತೇಜನ ನೀಡಲಾಗಿತ್ತು. ಆದರೆ ಹವಾಮಾನ ವೈಪರೀತ್ಯ ಹಾಗೂ ಅನುಭವದ ಕೊರತೆಯಿಂದಾಗಿ ಅದು ಅಷ್ಟೊಂದು ಯಶಸ್ವಿಯಾಗಿಲ್ಲ. ಆದರೆ ಶ್ರೀಮತಿ ನಂದಜಾ ಹೆಗಡೆಯವರು ಛಲ ಬಿಡದೇ ತಾವು ಪಡೆದು ಬಂದ ತರಬೇತಿ ಹಾಗೂ ತಮ್ಮದೇ ಆದ ಅನುಭವದಿಂದಾಗಿ  ಯಶಸ್ವಿಯಾಗಿ ಮುತ್ತು ಕೃಷಿಯನ್ನು ಬೆಳೆದು ಇತಿಹಾಸ ನಿರ್ಮಿಸಿದ್ದಾರೆ ಎಂದು ಸಂಸದ ಅನಂತಕುಮಾರ ಹೆಗಡೆ ಹೇಳಿದರು.

ತಾಲೂಕಿನ ಕಕ್ಕಳ್ಳಿ ಗ್ರಾಮದಲ್ಲಿ ಯಶಸ್ವಿಯಾಗಿ ನೈಸರ್ಗಿಕವಾಗಿ ಬೆಳೆದ ಮುತ್ತು ಕೃಷಿಯನ್ನು ಉದ್ಘಾಟಿಸಿ ಮಾತನಾಡಿದ ಸಂಸದ ಹೆಗಡೆ ಮಲೆನಾಡಿನ ಜನರಿಗೆ ಬದುಕನ್ನು ನೀಡಬಹುದಾದ ಕಲ್ಪನೆಯೊಂದಿಗೆ ಮೊದಲು ಪ್ರಾಯೋಗಿಕವಾಗಿ ಪ್ರಾರಂಭಿಸಲಾಗಿತ್ತು. ಆದರೆ ಮೊದಲು ಅಷ್ಟೊಂದು ಫಲಕಾರಿಯಾಗಿ ಕಂಡುಬಂದಿರಲಿಲ್ಲ. ಈಗ ಇದೊಂದು ಹೊಸ ಬೆಳವಣಿಗೆಯಾಗಿದ್ದು ಇದು ರೈತರಿಗೆ ಆತ್ಮವಿಶ್ವಾಸವನ್ನು ತುಂಬುವಲ್ಲಿ ಪರಿಣಾಮಕಾರಿಯಾಗಿದೆ. ಮೊದಲ ಹಂತದ ಗೆಲುವಿಗಾಗಿ ತುಂಬಾ ದಿನ ಕಾದಿದ್ದೇವೆ. ರೈತರ ಅನುಭವ ಹಾಗೂ ತಾಳ್ಮೆ ಯಶಸ್ವಿ ಪಥದತ್ತ ಕೊಂಡೊಯುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ ಎಂದರು.

ಮುಂದಿನ ದಿನಗಳಲ್ಲಿ ಕೇರಳ ಹಾಗೂ ಒರಿಸ್ಸಾದಿಂದ ತಜ್ಞರ ತಂಡವನ್ನು ಜಿಲ್ಲೆಗೆ ಕರೆತಂದು ಇನ್ನೂ ಹೆಚ್ಚಿನ ಜನರಿಗೆ ಮುತ್ತು ಕೃಷಿಯನ್ನು ಪರಿಚಯಿಸಿ ಮುತ್ತು ಕೃಷಿಯನ್ನು ಲಾಭದಾಯಕ ಉದ್ದಮೆ ಯನ್ನಾಗಿ ಮಾರ್ಪಾಡಲು ಅಗತ್ಯ ಶ್ರಮ ವಹಿಸಿರುವುದಾಗಿ ಸಂಸದರು ಹೇಳಿದರು. ಈ ಸಂದರ್ಭದಲ್ಲಿ ಖಾನಾಪುರದ ಮಾಜಿ ಶಾಸಕ ಪ್ರಲ್ಹಾದ ರೆಹಮಾನಿ, ಮೀನುಗಾರಿಕೆ ಇಲಾಖೆಯ ಉಪ-ನಿರ್ದೆಶಕ ವೆಂಕಟರಮಣ ಹೆಗಡೆ, ಶಿರಸಿ ಮೀನುಗಾರಿಕಾ ಸಹಾಯಕ ನಿರ್ದೆಶಕ ವೈಭವ, ಪ್ರದೀಪ ಹೆಗಡೆ, ಕದಂಬ ಸಂಸ್ಥೆಯ ಗೋಪಾಲ ದೇವಾಡಿಗ,ತಾಲೂಕು ಪಂಚಾಯತ್ ಸದಸ್ಯ ದತ್ತಾತ್ರೆಯ ವೈದ್ಯ ಮುಂತಾದವರು ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.