ಸಾಧಕಿಯನ್ನು ಸ್ಪೂರ್ತಿಯನ್ನಾಗಿಟ್ಟುಕೊಂಡು ಹೆಜ್ಜೆ ಇಡಬೇಕು; ಸಾವಿತ್ರಿ ಕುಜ್ಜಿ

ಶಿರಸಿ: ಬಿ ಬ್ರೇವ್ ಪಾರ್ ಅ ಚೇಂಜ್ ಎಂಬ ಪರಿಕಲ್ಪನೆಯನ್ನು ಇಟ್ಟುಕೊಂಡು ಈ ವರ್ಷದ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಪ್ರತಿಯೊಬ್ಬರಲ್ಲೂ ನೂನ್ಯತೆ ಇದ್ದೇ ಇರುತ್ತದೆ. ಆದರೆ ಅದನ್ನು ಮೆಟ್ಟಿ ನಿಲ್ಲುವ ಪ್ರಯತ್ನವನ್ನು ನಾವು ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಾವಿತ್ರಿ ಎಸ್ ಕುಜ್ಜಿ ಹೇಳಿದರು.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಗರದ ವಕೀಲರ ಸಂಘದ ಸಭಾಂಗಣದಲ್ಲಿ ಶಿರಸಿ ಮಹಿಳಾ ವಕೀಲರ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆ ಮತ್ತು ಅರಿವು ಟ್ರಸ್ಟ್ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಧಕಿಯನ್ನು ಸ್ಪೂರ್ತಿಯನ್ನಾಗಿ ಇಟ್ಟುಕೊಂಡು ನಾವು ಹೆಜ್ಜೆ ಇಡಬೇಕಿದೆ.

ಪುರುಷ ಪ್ರಧಾನ ಸಮಾಜದಲ್ಲಿ ಮಹಿಳಾ ದಿನಾಚರಣೆ ಆಚರಿಸುವ ಮೂಲಕ ಹೆಣ್ಣಿಗೆ ಗೌರವ ದೊರೆತಿದ್ದು ಪ್ರಶಂಸನೀಯ ಎಂದು ಹೇಳಿದರು.
ಮಹಿಳಾ ದಿನಾಚರಣೆಯ ಅಂಗವಾಗಿ ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಜುಳ ತಟ್ಟಿಕೈ, ತಮಗೆ ಓದಿನಲ್ಲಿ ಬಿಎ ಕಲಿತಿದ್ದರೂ ಯಾವ ಕಡೆಯಲ್ಲಿ ಕೆಲಸ ಸಿಗಲಿಲ್ಲ. ಜೊತೆಯಲ್ಲಿ ಮಾರ್ಗದರ್ಶಕರು ಇರಲಿಲ್ಲ. ಆದರೆ ಸಿಂಡಿಕೇಟ್ ಬ್ಯಾಂಕಿನವರ ಸಹಕಾರದಿಂದ ಪ್ಯಾಷನ್ ಡಿಸೈನಿಂಗ್ ಕೋರ್ಸ್ ಮತ್ತು ಬ್ಯಾಗ್ ಹೊಲಿಗೆಯ ಕೋರ್ಸ್ ಅನ್ನೂ ಸಹ ಮುಗಿಸಿದ್ದೇನೆ. ಶಿರಸಿ ಜಾತ್ರೆ, ಕರಾವಳಿ ಉತ್ಸವಗಳಲ್ಲಿ ನಾನು ತಯಾರಿಸಿದ ಬಟ್ಟೆಗಳ ಅಂಗಡಿಗಳನ್ನು ಹಾಕಿದ್ದಾಗಿ ಅವರು ಹೇಳಿದರು.

ಪ್ರಸ್ತುತ ಜೀವನೋಪಾಯಕ್ಕೆ ಮತ್ತು ಕುಟುಂಬ ನಿರ್ವಹಣೆಗೆ ಹೇರೂರಿನಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಜೊತೆಯಲ್ಲಿ ಬ್ಯಾಗ್ ಹೊಲಿಗೆ, ಬಟ್ಟೆ ಹೊಲಿಗೆಯನ್ನು ಮಾಡುತ್ತಿದ್ದೇನೆ. ತಂದೆಯವರು ನನ್ನನ್ನು ಶಾಲೆಗಳಿಗೆ ಎತ್ತುಕೊಂಡೆ ಹೋಗುತ್ತಿದ್ದರು. ತಾವು ಇಂದು ಈ ಸ್ಥಾನಕ್ಕೆ ಬರಲು ಕಾರಣವೆಂದರೆ ಅದು ಪತ್ರಕರ್ತರಾಗಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿರಸಿ ಮಹಿಳಾ ವಕೀಲರ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಯ ಅಧ್ಯಕ್ಷೆ ಎನ್ ಆರ್ ತ್ರಿವೇಣಿ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ನ್ಯಾಯಾಧೀಶ ಸಿ ಎನ್ ಸುಣಗಾರ, ವಕೀಲರ ಸಂಘದ ಅಧ್ಯಕ್ಷ ಎ. ರವೀಂದ್ರ ನಾಯ್ಕ, ಕಾರ್ಯದರ್ಶಿ ಆರ್ ಆರ್ ಹೆಗಡೆ, ಸರಕಾರಿ ಸಹಾಯಕ ಅಭಿಯೋಜಕರಾದ ಎಸ್ ಎಸ್ ಇನಾಂದಾರ ಉಪಸ್ಥಿತರಿದ್ದರು.
ಕಾವ್ಯಾ ಜಗದೀಶ ಸ್ವಾಗತಿಸಿದರು. ವಕೀಲೆ ಜ್ಯೋತಿ ಗೌಡ ಪ್ರಸ್ತಾವಿಕ ಮಾತುಗಳನ್ನಾಡಿದರು. ವಕೀಲೆ ವಾಣಿ ಹೆಗಡೆ ಸುಶ್ರಾವ್ಯವಾಗಿ ಪ್ರಾರ್ಥಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.