ಕೊಂಕಣಿ ಲೋಕೋತ್ಸವ ಪ್ರಚಾರ ಅಭಿಯಾನ ಜಾಥಾ

ಶಿರಸಿ: ಇದೇ ಬರುವ ಫೆ.10, 11 ಮತ್ತು 12 ರಂದು ಮಂಗಳೂರಿನ ಪುರಭವನದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಮ್ಮಿಕೊಂಡ ರಾಷ್ಟ್ರಮಟ್ಟದ ಕೊಂಕಣಿ ಲೋಕೋತ್ಸವದ ಪ್ರಚಾರ ಅಭಿಯಾನ ಜಾಥಾ ಗುರುವಾರ ಶಿರಸಿಗೆ ಆಗಮಿಸಿತು.

 ನಗರದ ಆವೆಮರಿಯಾ ಹಿರಿಯ ಪ್ರಾಥಮಿಕ ಶಾಲೆಯ ವೇದಿಕೆಯಲ್ಲಿ ನಡೆದ ಸಭೆಯಲ್ಲಿ ಪ್ರಚಾರ ಅಭಿಯಾನದ ಸಂಚಾಲಕರಾದ ಜೇಮ್ಸ ಡಿಸೋಜಾ ಹಾಗೂ ಪ್ರಕಾಶ ನಾಯಕ ರವರು ಲೋಕೋತ್ಸವದ ವಿವರ ನೀಡಿದರು. ಕೊಂಕಣಿ ಭಾಷೆಯನ್ನು ಮಾತನಾಡುವ ಹಿಂದೂ, ಮುಸ್ಲಿಂ  ಮತ್ತು ಕ್ರೈಸ್ತ ಧರ್ಮದ ಸುಮಾರು 41 ಸಮುದಾಯದವರ ರಾಷ್ಟ್ರಮಟ್ಟದ ಸಮಾವೇಶ ಇದಾಗಿದ್ದು ಈ ಸಮಾವೇಶದಲ್ಲಿ ಕೊಂಕಣಿ ಭಾಷಿಕರ ವೈವಿಧ್ಯಮಯ ನೃತ್ಯ, ಸಂಗೀತ, ಜಾನಪದ ಕಲೆಗಳು ಪ್ರದರ್ಶನಗೊಳ್ಳಲಿವೆ. ಕೊಂಕಣಿಗರ ವಿಶಿಷ್ಟ ಮತ್ತು ಸ್ವಾದಿಷ್ಠ ಖಾದ್ಯಗಳ ಪ್ರದರ್ಶನ ಮತ್ತು ಮಾರಾಟವಿರುತ್ತದೆ. ಕೊಂಕಣಿ ಭಾಷೆಯ ಉತ್ತಮ ಭವಿಷ್ಯಕ್ಕಾಗಿ ವಿವಿಧ ವಿಚಾರಗೋಷ್ಠಿಗಳು, ಸಂವಾದಗೋಷ್ಠಿಗಳು ಹಾಗೂ ಕೊಂಕಣಿ ಕವಿಗೋಷ್ಠಿಗಳು ನಡೆಯಲಿವೆ. ಕೊಂಕಣಿಗರ ಸಾಂಪ್ರದಾಯಿಕ ಉಡುಗೆ ತೊಡುಗೆಗಳು, ರೀತಿ ರಿವಾಜುಗಳು, ಜಾನಪದೀಯ ವಸ್ತುಗಳ ಪ್ರದರ್ಶನಕ್ಕಾಗಿ ಸುಮಾರು 60 ಮಳಿಗೆಗಳನ್ನು ನಿರ್ಮಿಸಲಾಗುವದು. ಕೊಂಕಣಿ ಭಾಷೆಯ ಅಭಿವೃದ್ಧಿಗೆ ಕೊಡುಗೆ ನೀಡಿದ ಗಣ್ಯರನ್ನು ಒಂದೇ ವೇದಿಕೆಯಲ್ಲಿ ನೋಡುವ ಸದವಕಾಶ ಇಲ್ಲಿ ಲಭಿಸಲಿದೆ ಎಂದು ಅವರು ವಿವರ ನೀಡಿದರು. ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ಹಾಗೂ ತಮ್ಮ ಕಲೆಯನ್ನು ಪ್ರದರ್ಶಿಸಲು ಕರ್ನಾಟಕದ ಎಲ್ಲ ಕೊಂಕಣಿ ಭಾಷಿಕರಿಗೆ ಅವಕಾಶವಿದ್ದು ಇದರ ಸದುಪಯೋಗ ಪಡೆಯುವಂತೆ ಅವರು ಕರೆ ನೀಡಿದರು.

   ಸಭಾರಂಭದಲ್ಲಿ ಕೂಡ್ಲ ಆನಂದು ಶಾನಭಾಗರು ಎಲ್ಲರನ್ನೂ ಸ್ವಾಗತಿಸಿ ಪರಿಚಯಿಸಿದರು. ಕೊಂಕಣಿ ಪರಿಷತ್ತಿ ಅಧ್ಯಕ್ಷರಾದ ನಿತಿನ ಕಾಸರಕೋಡ, ಕಾರ್ಯದರ್ಶಿ ಆನಂದ ಕಾಮತ, ಹಾಗೂ ಸಂಘಟನಾ ಕಾರ್ಯದರ್ಶಿಗಳಾದ ಪ್ರಮೋದ ಕಾಮತ ಹಾರೂಗಾರ, ವಾಸುದೇವ ಶಾನಭಾಗ, ಕೊಂಕಣಿ ಶಿಕ್ಷಣ ರಾಯಭಾರಿ ಅಂತೋನ ನೊರೊನ್ಹಾ, ಜಗದೀಶ ಭಂಡಾರಿ, ರೊಮಾವ್ ಫರ್ನಾಂಡಿಸ ಮುಂತಾದವರು ಉಪಸ್ಥಿತರಿದ್ದು ಚರ್ಚೆಯಲ್ಲಿ ಪಾಲ್ಗೊಂಡರು. ಸಭೆಗಾಗಿ ಸ್ಥಳಾವಕಾಶ ನೀಡಿ ಸಭೆಯಲ್ಲಿ ಉಪಸ್ಥಿತರಿದ್ದ ಆವೆ ಮರಿಯಾ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕಿ ಸಿಸ್ಟರ ಕ್ಲಾರೆಟ ಹಾಗೂ ಸಹಶಿಕ್ಷಕರನ್ನು ಅಭಿನಂದಿಸಲಯಿತು. ವಾಸುದೇವ ಶಾನಭಾಗ ವಂದಿಸಿದರು.

                                          

Categories: ಜಿಲ್ಲಾ ಸುದ್ದಿ

Leave A Reply

Your email address will not be published.