ಸಂಸದನ ಹಲ್ಲೆ ಖಂಡಿಸಿ ಯುವ ಕಾಂಗ್ರೆಸ್ ಪ್ರತಿಭಟನೆ

ಶಿರಸಿ: ನಗರದ ಟಿಎಸ್ಎಸ್ ಆಸ್ಪತ್ರೆಯ ವೈದ್ಯರ ಮೇಲೆ ಜಿಲ್ಲೆಯ ಸಂಸದರು ನಿನ್ನೆ ತಡರಾತ್ರಿ ಹಲ್ಲೆ ನಡೆಸಿರುವುದನ್ನು ಖಂಡಿಸಿ ಯುವಕಾಂಗ್ರೆಸ್ ವತಿಯಿಂದ ಇಂದು ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ನಗರದ ಅಂಚೆಕಛೇರಿ ವೃತ್ತದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದ ಕಾರ್ಯದರ್ಶಿ ಸತೀಶ ನಾಯ್ಕ ಮಾತನಾಡಿ, ಕರ್ತವ್ಯನಿರತ ವೈದ್ಯರ ಮೇಲೆ ಜಿಲ್ಲೆಯ ಸಂಸದ ಹಲ್ಲೆ ನಡೆಸಿ ತಮ್ಮ ಅಧಿಕಾರ ದುರ್ಬಳಕೆ ಮಾಡಿದ್ದಾರೆ. ಗಾಯಗೊಂಡ ವೈದ್ಯರ ಪರವಾಗಿ ಕಾಂಗ್ರೆಸ್ ಇರುತ್ತದೆ. ಒಂದು ಕಡೆ ರಾಜ್ಯದ ಸಚಿವರನ್ನು ಕಳೆದುಕೊಂಡ ದುಃಖದಲ್ಲಿ ನಾವಿದ್ದೇವೆ. ಹೀಗಿರುವಾಗ ಸಂಸದರ ನಡೆ ಖಂಡನೀಯ ಎಂದರು.

ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಪಾದ ಹೆಗಡೆ ಕಡವೆ ಮಾತನಾಡಿ, ಸಂಸದರ ದುರಾವರ್ತನೆಯನ್ನು ಯುವ ಕಾಂಗ್ರೆಸ್ ಖಂಡಿಸುತ್ತದೆ. ಚಿಕಿತ್ಸೆ ಸರಿಯಾಗಿ ದೊರೆಯಲಿಲ್ಲ ಎಂಬ ಕಾರಣಕ್ಕೆ ಇಂತಹ ಅಮಾನುಷ ಕೃತ್ಯ ಮಾಡಿರುವುದು ಆಕ್ಷೇಪಾರ್ಹ. ಸಂಬಂಧಪಟ್ಟವರು ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು. ಮತ್ತು ಅವರು ಸಂಸದರ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸುವುದಾಗಿ ಹೇಳಿದರು. 
ನಗರಸಭಾ ಸದಸ್ಯ ಜಗದೀಶ ಗೌಡರ್ ಮಾತನಾಡಿ, ಉತ್ತರಕನ್ನಡ ಜಿಲ್ಲೆ ಸುಸಂಕೃತರ ಜಿಲ್ಲೆ ಎಂದು ಹೆಸರಾಗಿದೆ. ಆದರೆ ಈಗ ಸಂಸದರು ಅನಾಗರಿಕ ವರ್ತನೆ ಮಾಡಿದ್ದಾರೆ. ಬಿಜೆಪಿಯವರ ಇಂತಹ ಅಸಭ್ಯ ಸಂಸ್ಕೃತಿಯನ್ನು ನಾಡಿನ ಜನತೆ ತಿರಸ್ಕರಿಸಬೇಕು. ರಾಜ್ಯದಲ್ಲಿ ಬಿಜೆಪಿಯವರು ನಡೆಸುವ ನೈತಿಕ ಪೋಲೀಸ್ ಗಿರಿಯನ್ನು ಖಂಡಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ನಗರಸಭಾ ಉಪಾಧ್ಯಕ್ಷೆ ಅರುಣಾ ವೆರ್ಣೇಕರ್, ರಾಚಪ್ಪಾ ಜೋಗಳೇಕರ್, ಪ್ರವೀಣ ಗೌಡರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.