ಜನರ ಮನಗೆದ್ದ 'ವಿಶ್ವಮಾನವ ದಿನಾಚರಣೆ'

ಶಿರಸಿ: ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಪ್ರಯುಕ್ತ ನಗರದ ಸಹ್ಯಾದ್ರಿ ರಂಗಮಂದಿರದಲ್ಲಿ ಗುರುವಾರ ಸಂಜೆ ಜಿ ಪಂ ಉ.ಕ. ಮತ್ತು ಕನ್ನಡ ಸಂಸ್ಕೃತಿ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಕಾರ್ಯಕ್ರಮವು ಜನಮೆಚ್ಚುಗೆಗೆ ಪಾತ್ರವಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಸಿ ಎನ್ ಸುಣಗಾರ, ವಿಶ್ವಮಾನವನ ಪರಿಕಲ್ಪನೆಯನ್ನು ತಾನೋಬ್ಬ ನ್ಯಾಯಾಧೀಶನಾಗಿ ಯೋಚಿಸುವವನಾಗಿದ್ದೇನೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬನಿಗೂ ತನ್ನದೇ ಆದ ಹಕ್ಕಿರುತ್ತದೆ. ಅದಕ್ಕೆ ಚ್ಯುತಿಬರದಂತೆ ಎಲ್ಲರೂ ವರ್ತಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿಕೊಂಡ ಶ್ರೀಲತಾ ಕಾಳೇರಮನೆ ಮಾತನಾಡಿ ಕುವೆಂಪು ಅವರ ಜನ್ಮದಿನವನ್ನು ವಿಶ್ವಮಾನವ ದಿನವನ್ನಾಗಿ ಆಚರಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದರು.

ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ಮಾತುಗಳನ್ನಾಡಿದ ಸಹಾಯಕ ಆಯುಕ್ತ ರಾಜು ಮೊಗವೀರ, ತನ್ನ ವ್ಯಕ್ತಿ ವೈಶಿಷ್ಟ್ಯಯುತವಾದ ಕವನ ಸಂಕಲನದ ಮೂಲಕ ಕುವೆಂಪು ಜನಮಾನಸದಲ್ಲಿ ಅಜರಾಮರರಾಗಿ ಉಳಿದಿದ್ದಾರೆ. ಅವರು ಮಸೀದಿ,ಮಠ, ಚರ್ಚ್ ಗಳನ್ನು ಬದಿಗಿಟ್ಟು ಚಿಂತನೆ ಮಾಡಿದವರು. ಸಾಹಿತ್ಯ ಮತ್ತು ವೈಚಾರಿಕತೆಯನ್ನು ಒಟ್ಟಿಗೆ ಅಳವಡಿಸಿಕೊಂಡಿದ್ದಾರೆ. ಜಡ ಮತ್ತು ಚೇತನದ ವ್ಯತ್ಯಾಸವನ್ನು ಬಹಳ ಸೊಗಸಾಗಿ ತಿಳಿಸುವುದರ ಜೊತೆಗೆ  ಹಿಂದು ಸಂಸ್ಕೃತಿಯ ವಿರೋಧಿಸದೇ ಅದರಲ್ಲಿರುವ ಲೋಪಗಳನ್ನು ಕಟುವಾಗಿ ವಿರೋಧಿಸಿದ್ದಾರೆ. ಅವರ ಜನ್ಮದಿನವನ್ನು ವಿಶ್ವ ಮಾನವ ದಿನಾಚರಣೆಯ ಮೂಲಕ ಇದೇ ಮೊದಲ ಬಾರಿಗೆ ಸರಕಾರಿ ಕಾರ್ಯಕ್ರಮವನ್ನಾಗಿ ಆಚರಿಸುತ್ತಿರುವುದು ಸಂತಸದ ವಿಚಾರ ಎಂದರು.

ಇದೇ ಸಂದರ್ಭದಲ್ಲಿ ವಿಶ್ವಮಾನವ ದಿನಾಚರಣೆಯ ಅಂಗವಾಗಿ ನಡೆಸಿದ್ದ ಚಿತ್ರಕಲೆ ಮತ್ತು ಕವನ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ವಿತರಿಸಲಾಯಿತು. ಕುವೆಂಪು ಜನ್ಮದಿನದ ಅಂಗವಾಗಿ ಜಿಲ್ಲಾ ಆಡಳಿತ ಹೊರತಂದಿರುವ ಅವರ ಜೀವನದ ಕುರಿತಾಗಿರುವ ಕೈಪಿಡಿಯನ್ನು ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಸ್ಥಾಯಿ ಸಮಿತಿ ಅಧ್ಯಕ್ಷ ಬಸವರಾಜ ದೊಡ್ಮನಿ, ತಾಪಂ ಸದಸ್ಯ ವಿನಾಯಕ ಭಟ್ಟ, ತಹಶೀಲ್ದಾರ ಬಸಪ್ಪ ಪೂಜಾರ, ಪೌರಾಯುಕ್ತ ಮಹೇಂದ್ರಕುಮಾರ ಸೇರಿದಂತೆ ಇನ್ನೀತರರು ಉಪಸ್ಥಿತರಿದ್ದರು.

ಸಭಾಕಾರ್ಯಕ್ರಮದ ನಂತರದಲ್ಲಿ ಶಿರಸಿಯ ಶಿರಸಿ ರತ್ನಾಕರ, ಡಾ. ಸುಮನ್ ಹೆಗಡೆ, ರಾಜೇಶ್ವರಿ ಹೆಗಡೆ ಮತ್ತು ಇತರರಿಂದ ಕುವೆಂಪು ಭಾವಗೀತೆಗಳ ಸುಗಮ ಸಂಗೀತ, ನಿಧಿ ರಾವ್, ನಿಧಿ ಸ್ವಾದಿ, ಮೋನಿಕಾ ಹೆಗಡೆ ಇವರಿಂದ ಭರತನಾಟ್ಯ ನಡೆಲ್ಪಟ್ಟಿತು. ಜೊತೆಗೆ ಗಜಾನನ ಪ್ರೌಢಶಾಲೆ ಹೆಗಡೆಕಟ್ಟಾ ಮಕ್ಕಳಿಂದ ನೃತ್ಯ ಮತ್ತು ಶಿರಸಿಯ ಅಂಕಸಂಸಾರ ತಂಡದಿಂದ ‘ಕುವೆಂಪು ಕಥನ’ ರೂಪಕ ಮತ್ತು ಮನೋಜ ಪಾಲೇಕರ ಅವರ ಗೀತ ರೂಪಕ ಎಲ್ಲರ ಮೆಚ್ಚುಗೆಯನ್ನು ಪಡೆದುಕೊಂಡಿತು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.