ರಾಮಕೃಷ್ಣ ಹೆಗಡೆ ನೆನಪಿಗೆ ಸನ್ಮಾನ, ಸಂಸ್ಮರಣಾ ದಿನ

ಶಿರಸಿ: ಮುತ್ಸದ್ಧಿ ರಾಜಕಾರಣಿ, ಮಾಜಿ ಮುಖ್ಯಮಂತ್ರಿಗಳಾಗಿದ್ದ ದಿವಂಗತ ರಾಮಕೃಷ್ಣ ಹೆಗಡೆ ಅವರ ಪುಣ್ಯತಿಥಿ ಹಿನ್ನಲೆಯಲ್ಲಿ ಜ.12ರಂದು ಬೆಳಿಗೆ 10:30ಕ್ಕೆ ನಗರದ ಗಾಣಿಗರ ಸಮುದಾಯ ಭವನದಲ್ಲಿ ಸನ್ಮಾನ, ಸಂಸ್ಮರಣಾ ದಿನ ಆಚರಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಇಲ್ಲಿನ ಹೆಗಡೆ ಅಭಿಮಾನಿ ಬಳಗದ ಪ್ರಮುಖರು ತಿಳಿಸಿದರು.

ಬುಧವಾರ ನಗರದ ವಿನಾಯಕ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅಭಿಮಾನಿ ಬಳಗದ ಪ್ರಮೋದ ಹೆಗಡೆ ಯಲ್ಲಾಪುರ ಹಾಗೂ ನಾಗೇಶ ಪಿ.ಗಾಂವಕರ್, ಹೆಗಡೆ ಅವರು ಕಳೆದ 13 ವರ್ಷಗಳಿಂದ ನಮ್ಮೊಂದಿಗೆ ಇಲ್ಲ. ಆದರೆ, ಅವರು ಕೊಟ್ಟ ಕೊಡುಗೆಗಳು ಇವೆ, ಅವರ ಆಚಾರ ವಿಚಾರಗಳು ಇಂದಿಗೂ ಪ್ರೇರಣಾದಾಯಕ. ಮುಂದಿನ ಪೀಳಿಗೆಗೂ ಅವರ ತತ್ವಾದರ್ಶಗಳು ಪ್ರೇರಣೆ ಆಗಬೇಕು ಎಂಬ ಕಾರಣದಿಂದ ಸಂಸ್ಮರಣಾ ದಿನಾಚರಣೆ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಸಮಾರಂಭಕ್ಕೆ ಚಾಲನೆ ನೀಡಲಿದ್ದು, ಅಧ್ಯಕ್ಷತೆಯನ್ನು ಹಿರಿಯ ಸಹಕಾರಿ ಎಂ.ಸಿ.ನಾಣಯ್ಯ ವಹಿಸಿಕೊಳ್ಳಲಿದ್ದಾರೆ. ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ಟ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಶ್ರೀನಿವಾಸ ಅವರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ರಮಾನಂದ ನಾಯಕ ಅವರನ್ನು ಸನ್ಮಾನಿಸಲಾಗುತ್ತಿದೆ ಎಂದ ಅವರು, ಹೆಗಡೆ ಅವರು ಪಕ್ಷಾತೀತ ನಾಯಕರಾಗಿದ್ದು, ಎಲ್ಲರೂ ಸಮಾರಂಭದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ಈ ವೇಳೆ ವೆಂಕಟೇಶ ಹೆಗಡೆ ಹೊಸಬಾಳೆ, ಆರ್.ಎಂ.ಹೆಗಡೆ, ಎಂ.ಆರ್.ಹೆಗಡೆ ಕಾನಗೋಡ, ಜಿ.ಟಿ.ಹೆಗಡೆ ತಟ್ಟಿಸರ ಇತರರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.