ಬಡ್ತಿ ಹಿನ್ನಲೆ; ಪ್ರಧಾನ ಸಿವಿಲ್ ನ್ಯಾಯಾಧೀಶೆ ಶಿಲ್ಪಾಗೆ ಬೀಳ್ಕೊಡುಗೆ ಸಮಾರಂಭ

ಶಿರಸಿ: ನ್ಯಾಯದಾನದ ಕಾರ್ಯದಲ್ಲಿ ಸ್ಥಳೀಯ ವಕೀಲರ ಸಹಕಾರ ಸ್ಮರಣೀಯ. ಹೆಚ್ಚಿನ ಜ್ಞಾನ ಕಾನೂನು ಅಂಶಗಳನ್ನು ಅರಿತಿರುವಂಥ ಪ್ರತಿಭಾನ್ವಿತ ವಕೀಲರಿರುವ ಶಿರಸಿಯಲ್ಲಿ ಇರುವುದು ಹೆಮ್ಮೆಯ ಸಂಗತಿಯಾಗಿದ್ದು, ಸಿಬ್ಬಂದಿ ಹಾಗೂ ವಕೀಲರು ಆಡಳಿತಾತ್ಮಕ ಮತ್ತು ನ್ಯಾಯಾಲಯದ ಕಲಾಪಕ್ಕೆ ಸಹಕರಿಸಿರುವುದಕ್ಕೆ ಕೃತಜ್ಞತೆ ಸಲ್ಲಿಸಲು ಸಂತೋಷವೆನಿಸುತ್ತದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಶಿಲ್ಪಾ ಎಚ್.ಎ. ಹೇಳಿದರು.

ಅವರು ಸ್ಥಳೀಯ ವಕೀಲರ ಸಂಘದ ಸಭಾಂಗಣದಲ್ಲಿ ವಕೀಲರ ಸಂಘದ ಆಶ್ರಯದಲ್ಲಿ ಶಿರಸಿ ಸಿವಿಲ್ ಜಡ್ಜ ಕಿರಿಯ ವಿಭಾಗದ ನ್ಯಾಯಾಲಯದಿಂದ ಪದೋನ್ನತಿ ಹೊಂದಿ ಹಳಿಯಾಳ ಹಿರಿಯ ಸಿವಿಲ್ ಜಡ್ಜ ನ್ಯಾಯಾಲಯಕ್ಕೆ ಹಿರಿಯ ಶ್ರೇಣಿಯ ನ್ಯಾಯಾಧೀಶೆಯಾಗಿ ಹೋಗುತ್ತಿರುವಂತಹ ಸಂದರ್ಭದಲ್ಲಿ ಇಂದು ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡುತ್ತಾ ಹೇಳಿದರು.
ಕಾರ್ಯಕ್ರಮದಲ್ಲಿ ವಿಶೇಷ ಆಮಂತ್ರಿತರಾಗಿ 1ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶ ಸಿ.ಎನ್. ಸುಣಗಾರ, ಹಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶೆ ಸಾವಿತ್ರಿ ಕುಜ್ಜಿ, 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಶಮೀರ ನಂದ್ಯಾಳ ಆಗಮಿಸಿ ಮಾತನಾಡಿದರು.

ವಕೀಲರ ಸಂಘದ ಅಧ್ಯಕ್ಷ ಎ.ರವೀಂದ್ರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ವಕೀಲರ ಸಂಘದ ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿಯ ಕಾರ್ಯ ಚಟುವಟಿಕೆಗೆ ನ್ಯಾಯಾಧೀಶೆ ನೀಡಿದ ಸಹಕಾರವನ್ನು ಸ್ಮರಿಸಿದರು. ಬೀಳ್ಕೊಡುಗೆ ಸಮಾರಂಭದಲ್ಲಿ ಹಿರಿಯ ವಕೀಲರುಗಳಾದ ಎಸ್.ಎನ್. ನಾಯ್ಕ, ಎ.ಆರ್. ಹೆಗಡೆ, ಎಮ್.ಎಮ್.ಹೆಗಡೆ, ಎನ್.ಎಸ್.ಹೆಗಡೆ ಲಿಂಗದಕೋಣ, ಬಸವರಾಜ ದೊಡ್ಮನಿ ಮಾತನಾಡಿದರು.

ವೇದಿಕೆಯ ಮೇಲೆ ಸಂಘದ ಉಪಾಧ್ಯಕ್ಷ ಸುಭಾಷ ಕೈರನ್ನ ಉಪಸ್ಥಿತರಿದ್ದರು. ವಕೀಲ ಮಹೇಶ ನಾಯ್ಕ ಕಂಡ್ರಾಜಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಆರ್.ಆರ್. ಹೆಗಡೆ ಸ್ವಾಗತ ಕೋರಿದರು. 

Categories: ಜಿಲ್ಲಾ ಸುದ್ದಿ

Leave A Reply

Your email address will not be published.