ಜ. 7,8ರಂದು ಎಮ್ಇಎಸ್ ಹಬ್ಬ; ಜಿ ಎಮ್ ಮುಳಖಂಡ

ಶಿರಸಿ: ಇಲ್ಲಿನ ಮೋಡರ್ನ ಎಜ್ಯುಕೇಶನ್ ಸೊಸೈಟಿ ನಡೆಸುವ ಹನ್ನೊಂದೂ ಸಂಸ್ಥೆಗಳ ಸಹಕಾರದಲ್ಲಿ ಎಂಇಎಸ್ ಹಬ್ಬ ಆಚರಿಸಲು ತೀರ್ಮಾನಿಸಲಾಗಿದೆ. ಜ.7 ಹಾಗೂ 8ರಂದು ಹಬ್ಬ ನಡೆಯಲಿದ್ದು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಹಳೆ ವಿದ್ಯಾರ್ಥಿಗಳು ಪ್ರಮುಖ ಕಾರ್ಯಕ್ರಮಗಳನ್ನು ನಡೆಸಿಕೊಡಲಿದ್ದಾರೆ ಎಂದು ಎಂಇಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ ತಿಳಿಸಿದರು.
ಅವರು ಬುಧವಾರ ನಗರದಲ್ಲಿ ಆಹ್ವಾನ ಪತ್ರಿಕೆ ಬಿಡುಗಡೆಗೊಳಿಸಿ, ಸಂಸ್ಥೆಯಲ್ಲಿ ಸುಮಾರು 4500 ವಿದ್ಯಾರ್ಥಿಗಳು ಇದ್ದಾರೆ. ಇವರ ಪ್ರತಿಭೆಯನ್ನು ಬೆಳಗಿಸುವ ಅವಕಾಶವಾಗಿಯೂ ವೇದಿಕೆ ಸಿದ್ಧಗೊಳಿಸಲಾಗುತ್ತಿದೆ. ಮುಂಜಾನೆ 9ರಿಂದ ರಾತ್ರಿ 9ರ ತನಕ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ. 23 ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಧಾನವಾಗಿ ನಡೆಯಲಿದೆ ಎಂದರು.

ಹಬ್ಬಕ್ಕಾಗಿ ಪ್ರತ್ಯೇಕ ವೇದಿಕೆ ಕೂಡ ಸಜ್ಜಾಗಿದ್ದು, ಇದೂ ಸೇರಿ 12.80 ಲ.ರೂ. ಬೀಳುವ ನಿರೀಕ್ಷೆ ಇದೆ. ಸ್ಮರಣ ಸಂಚಿಕೆ, ಆಸಕ್ತ ದಾನಿಗಳಿಂದ ನೆರವನ್ನೂ ಪಡೆದುಕೊಳ್ಳಲಾಗಿದೆ. ಜ್ಞಾನ ಸುಧಾ ನೆನಪಿನ ಸಂಚಿಕೆಯನ್ನೂ ಬಿಡುಗಡೆಗೊಳಿಸಲು ತೀರ್ಮಾನಿಸಲಾಗಿದೆ ಎಂದರು. ಪ್ರಥಮ ದಿನದಂದು ಬೆಳಿಗ್ಗೆ 9ಕ್ಕೆ ಚರ್ಚಾ ಸ್ಪರ್ಧೆ ಎಂಇಎಸ್ ಮಹಾ ವಿದ್ಯಾಲಯ ಸಭಾಭವನದಲ್ಲಿ ನಡೆಯಲಿದ್ದು, ಪೊಲೀಸ್ ಉಪಾಧೀಕ್ಷಕ ನಾಗೇಶ ಶೆಟ್ಟಿ ಉದ್ಘಾಟಿಸುವರು. ನಗರಸಭೆ ಅಧ್ಯಕ್ಷ ಪ್ರದೀಪ ಶೆಟ್ಟಿ ಅಧ್ಯಕ್ಷತೆವಹಿಸಿಕೊಳ್ಳುವರು. ಪ್ರಾಚಾರ್ಯ ಎ.ಕೆ.ಕಿಣಿ ಉಪಸ್ಥಿತರಿರುವರು. ಮಧ್ಯಾಹ್ನ 3ಕ್ಕೆ  ಎಂಇಎಸ್ ಬಯಲು ರಂಗ ಮಂದಿರದಲ್ಲಿ ನಿವೃತ್ತ ಲೋಕಾಯುಕ್ತ  ಎನ್.ಸಂತೋಷ ಹೆಗ್ಗಡೆ ಉದ್ಘಾಟಿಸಲಿದ್ದು, ಅತಿಥಿಗಳಾಗಿ ಉಪಾಧ್ಯಕ್ಷರುಗಳಾದ ಭೀಮಣ್ಣ ನಾಯ್ಕ, ಜಿ.ಎನ್.ಹೆಗಡೆ ಗಡೀಮನೆ ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಜಿ.ಎಂ.ಹೆಗಡ ಮುಳಖಂಡ ವಹಿಸಿಕೊಳ್ಳಲಿದ್ದಾರೆ.

ಎರಡನೇ ದಿನ ಮುಂಜಾನೆ ಎಂಇಎಸ್ ಸಭಾಂಗಣದಲ್ಲಿ ಸಂಗೀತ ಸ್ಪರ್ಧೆ ನಡೆಯಲಿದ್ದು, ಸಹಾಯಕ ಆಯುಕ್ತ ರಾಜು ಮೊಗವೀರ ಚಾಲನೆ ನೀಡುವರು. ಅಧ್ಯಕ್ಷತೆಯನ್ನು ಎಂಇಎಸ್ ಉಪಾಧ್ಯಕ್ಷ ಹಾಲಪ್ಪ ಜಕಲಣ್ಣವರ್ ವಹಿಸಿಕೊಳ್ಳುವರು.  ನಿವೃತ್ತ ಪ್ರಾಚಾರ್ಯ ಡಾ. ಎಂ.ಜಿ.ಹೆಗಡೆ ಉಪಸ್ಥಿತರಿರುವರು. ಮಧ್ಯಾಹ್ನ 3ಕ್ಕೆ ಜ್ಞಾನ ಸುಧಾ ಸ್ಮರಣ ಸಂಚಿಕೆಯನ್ನು ಖ್ಯಾತ ಸಾಹಿತಿ ನಾ.ಡಿಸೋಜಾ ಬಯಲು ರಂಗಮಂದಿರದಲ್ಲಿ ಬಿಡುಗಡೆ ಮಾಡಲಿದ್ದಾರೆ. ಡಾ. ವಿ.ಎಸ್.ಸೋಂದೆ, ಶಾಂತಾರಾಮ ಹೆಗಡೆ ಶೀಗೇಹಳ್ಳಿ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಎರಡೂ ದಿನ ಸಂಜೆ 4ರಿಂದ 9ರ ತನಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಜ.7ರಂದು ರಾಷ್ಟ್ರೀಯ ಭಾವೈಕ್ಯ ನೃತ್ಯವನ್ನು ಮನೋಜ ಪಾಲೇಕರ್ ಸಂಗಡಿಗರು ಮಾಡಲಿದ್ದು, ಸೀಮಾ ಭಾಗವತ್ ತಂಡದಿಂದ ಕಥಕ್, ಭರತ ನಾಟ್ಯ, ಕುಚಿಪುಡಿ ಸಂಗಮ, ಆನಂದ ಹೆಗಡೆ ಸಂಗಡಿಗರಿಂದ ಯಕ್ಷ ನೃತ್ಯ ಸಾಕ್ಷಚಿತ್ರ, ರಾಜೇಶ ಹೆಗಡೆ ಅವರಿಂದ ಜಾದು, ಪಕ್ಷೀರಾಣಿ ನಾಟಕ, ಭವನಾ ಸಂಗಡಿಗರಿಂದ ನೃತ್ಯ, ಸುಮಾ ಹೆಗಡೆ ಮಂಚಿಕೇರಿಯಿಂದ ಸುಗಮ ಸಂಗೀತ, ಸ್ವಾತಿ ಸಂಗಡಿಗರಿಂದ ದೇಶಭಕ್ತಿ ಗೀತೆಗಳು, ರವಿ ಮೂರೂರು ತಂಡದಿಂದ ಭಾವ ವೈವಿಧ್ಯ ಜರುಗಲಿದೆ.

8ಕ್ಕೆ ಚಂದನಾ ಹೆಗಡೆ ಸಂಗಡಿಗರಿಂದ ಸಮೂಹ ನೃತ್ಯ, ಎನ್.ಎಸ್.ಸಹನಾ ಭವಗೀತೆ, ಎಂಇಎಸ್ ಕನ್ನಡದ ಶಾಲಾ ಮಕ್ಕಳಿಂದ ಶಬರಿಮಲೆ ಅಯ್ಯಪ್ಪ ನೃತ್ಯ ರೂಪಕ, ದೀಪಾ ಭಟ್ಟ ಜನಪದ ಗೀತೆ, ಹರೀಶ ಭಟ್ಟ ಸಂಗಡಿಗರಿಂದ ಏಕಾಂಕ ನಾಟಕ, ಪ್ರತೀಕ್ಷಾ ಜಿ.ಹೆಗಡೆ ಭರತನಾಟ್ಯ, ಎಂಇಎಸ್ ವಾಣಿಜ್ಯ ಕಾಲೇಜಿನಿಂದ ಕೋಲಾಟ, ಮನು ಹೆಗಡೆ ಅವರಿಂದ ಶಾಸ್ತ್ರೀಯ ಗಾಯನ, ವೆಂಕಟ್ರಮಣ ಹೆಗಡೆ ಸಂಗಡಿಗರಿಂದ ಜಾನಪದ ನೃತ್ಯ, ಪಂ.ಆರ್.ವಿ.ಹೆಗಡೆ ಅವರಿಂದ ಸಿತಾರ ವಾದನ, ನಯನಾ ಸಂಗಡಿಗರಿಂದ ಸಮೂಹ ನೃತ್ಯ, ತೇಲಂಗ ಪ್ರೌಢ ಶಾಲೆಯಿಂದ ಸಮೂಹ ಡಾನ್ಸ, ಉಡುಪಿ ಹವ್ಯಾಸಿ ತಂಡದಿಂದ ನಾಟಕ ಚಿತ್ರ ಪ್ರದರ್ಶನ ಆಗಲಿದೆ ಎಂದ ಅವರು, ಎರಡೂ ದಿನ ಸಂಸ್ಥೆಯ ಹನ್ನೊಂದೂ ಶೈಕ್ಷಣಿಕ ವಿಭಾಗದಿಂದ ಪ್ರದರ್ಶನ, ಪುಸ್ತಕ ಮಳಿಗೆಗಳು ಕೂಡ ಇರಲಿವೆ ಎಂದರು.

ಈ ವೇಳೆ ಸಂಸ್ಥೆಯ ಪ್ರಮುಖರಾದ ಎಸ್.ಪಿ.ಶೆಟ್ಟಿ, ಸುಧೀರ ಭಟ್ಟ, ಎಸ್.ಎಸ್.ಭಟ್ಟ ಹಾಗೂ ಗಿರಿಧರ ಕಬ್ನಳ್ಳಿ ಇತರರು ಇದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.