ಕೃಷಿಕರೇ‌.. ಅರಣ್ಯಾಭಿವೃದ್ಧಿ ಕಾರ್ಯಯೋಜನೆ ರೂಪಿಸಿರಿ; ಪರಿಸರ ತಜ್ಞ ಎ ಎನ್ ಯಲ್ಲಪ್ಪರೆಡ್ಡಿ

ಶಿರಸಿ: ಉತ್ತರ ಕನ್ನಡದ ಜನತೆ ಪರಿಸರ ಪ್ರೀತಿಗೆ ರಾಜ್ಯಕ್ಕೆ ಮಾದರಿಯಾಗಿದ್ದಾರೆ. ಸೊಪ್ಪಿನ ಬೆಟ್ಟಗಳಲ್ಲಿ ಅಪರೂಪದ ಔಷಧ ಸಸ್ಯ, ಕಾಡು ಹಣ್ಣುಗಳನ್ನು ಬೆಳೆಸಿ ಆರೋಗ್ಯ, ಆದಾಯ ಹೆಚ್ಚಿಸಿಕೊಳ್ಳುವುದರ ಜೊತೆಗೆ ಸಸ್ಯಾಭಿವೃದ್ಧಿಯಿಂದ ನಾಡಿಗೆ ಆರೋಗ್ಯ ನೀಡುವ ಮೂಲಕ ಪರಿಸರದಲ್ಲಿ ಮಹತ್ವದ ಬದಲಾವಣೆ ತರಬಹುದಾದ ಶಕ್ತಿ ಇಲ್ಲಿನ ಕೃಷಿಕರಿಗಿದೆಯೆಂದು ಕರ್ನಾಟಕ ಪರಿಸರ ಇಲಾಖೆಯ ನಿವೃತ್ತ ಕಾರ್ಯದರ್ಶಿ ಎ.ಎನ್.ಯಲ್ಲಪ್ಪರೆಡ್ಡಿ ಹೇಳಿದರು.

ಅವರು ಬುಧವಾರ ತಾಲೂಕಿನ ಕಳವೆ ಸೊಪ್ಪಿನ ಬೆಟ್ಟ, ಅರಣ್ಯಗಳನ್ನು ವೀಕ್ಷಿಸಿ ಗ್ರಾಮದ ಜನರ ಜೊತೆ ಮಾತಾಡುತ್ತಿದ್ದರು. ಕೆನರಾ ವೃತ್ತ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಮೂರು ದಶಕಗಳ ಹಿಂದಿನ ದಿನಗಳನ್ನು ರೆಡ್ಡಿ ನೆನಪುಮಾಡಿಕೊಂಡರು.  ಅರಣ್ಯ ಇಲಾಖೆ ಜನರ ಹತ್ತಿರಕ್ಕೆ ಹೋಗುವ ಕ್ರಿಯೆ ಆಗ ಆರಂಭವಾಗಿತ್ತು. ಸಾಮಾಜಿಕ ಅರಣ್ಯ ಯೋಜನೆ, ಶಾಲಾ ವನ ಕಾರ್ಯಕ್ರಮಗಳಲ್ಲಿ ಹಳ್ಳಿಗಳ ನಿಜವಾದ ಅರಣ್ಯಜ್ಞಾನಿಗಳ ಒಡನಾಟ ಇಲಾಖೆಗೆ ದೊರೆಯಿತು. ಈಗ 32 ವರ್ಷ ಬಳಿಕ ಪುನಃ ಕಳವೆಯ ಪ್ರದೇಶ ಸುತ್ತಾಡುತ್ತಿದ್ದೇನೆ. ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಜೊತೆಯಾಗಿ ಅತ್ಯುತ್ತಮ ಮಾದರಿ ರೂಪಿಸಿದೆಯೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಂಜುನಾಥ ಭಟ್ ಕಳವೆ, ನರಸಿಂಹ ದೀಕ್ಷಿತರ ಸೊಪ್ಪಿನ ಬೆಟ್ಟ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದರು. ಸೊಪ್ಪಿನ ಬೆಟ್ಟಗಳಲ್ಲಿ ಕೃಷಿ ಹಾಗೂ ಜೀವವೈವಿಧ್ಯ ಅಭಿವೃದ್ಧಿ ಹಿನ್ನಲೆಯಲ್ಲಿ  ಕೃಷಿಕರೇ ಮುಂದಾಗಿ ಅರಣ್ಯಾಭಿವೃದ್ಧಿಯ ವಿಸ್ತ್ರತ ಕಾರ್ಯಯೋಜನೆ ಸಿದ್ದಪಡಿಸುವಂತೆ ಸಲಹೆ ನೀಡಿದರು. ಇದರಿಂದ ಕೃಷಿಕರಿಗೆ ಹೆಚ್ಚಿನ ಆದಾಯ ದೊರಕಿ ಜೀವನಮಟ್ಟವೂ ಸುಧಾರಿಸುತ್ತದೆಂದರು.
ಪರಿಸರ ಬರಹಗಾರ ಶಿವಾನಂದ ಕಳವೆ 16 ವರ್ಷಗಳಿಂದ ಸೊಪ್ಪಿನ ಬೆಟ್ಟದಲ್ಲಿ ರಚಿಸಿದ ನೆಲ ಜಲ ಸಂರಕ್ಷಣೆ ಮಾದರಿ ವೀಕ್ಷಿಸಿ ಲಮಿಡಿಮಾವಿನ ತಳಿಗಳು, ವಿವಿಧ ಔಷಧ ಸಸ್ಯಗಳ ವಿವರ ಪಡೆದರು. ಕಾಡು ಹಣ್ಣಿನ ಸಸ್ಯಾಭಿವೃದ್ಧಿ ಕುರಿತು ವಿಚಾರ ವಿನಿಮಯ ನಡೆಯಿತು.   ಗ್ರಾಮ ಅರಣ್ಯ ಸಮಿತಿ, ಅರಣ್ಯ ಇಲಾಖೆಯ ಶಿರಸಿ ವಿಭಾಗ ಹಾಗೂ ವಿವಿಧ ದಾನಿಗಳ ನೆರವಿನಿಂದ ರೂಪಿಸಿದ ಕಾನ್ಮನೆ ನಿಸರ್ಗ ಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಪರಿಸರ ತರಬೇತಿ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಿದರು. ವೇ| ಹಿತ್ಲಳ್ಳಿ ನಾಗೇಂದ್ರ ಭಟ್ ಮಾರ್ಗದರ್ಶನದಲ್ಲಿ ರೂಪಿಸಿದ ಅಕ್ಷರ ವನದ ಕುರಿತು ವಿವರ ಪಡೆದರು. ಇಂಥ ವನಗಳನ್ನು ಇನ್ನಷ್ಟು ಕಡೆಗಳಲ್ಲಿ ರೂಪಿಸುವುದಾಗಿ ತಿಳಿಸಿದರು.

ಗ್ರಾಮಸ್ಥರಾದ ಮಂಜುನಾಥ ಭಟ್, ಈರಾ ನಾರಾಯಣ ಗೌಡ, ಶ್ರೀಧರ ಭಟ್, ನರಸಿಂಹ ದೀಕ್ಷಿತ್, ರಮೇಶ ಭಟ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಕೃಷಿ-ಪರಿಸರದ ಕುರಿತು ಮಾತುಕತೆ ನಡೆಸಿದರು. ರಾಜ್ಯದ ಹಿರಿಯ ಪರಿಸರ ತಜ್ಞ ಯಲ್ಲಪ್ಪರೆಡ್ಡಿ ಕಳವೆಗೆ ಬಂದಿರುವುದು ಅತ್ಯಂತ ಸಂತಸ ತಂದಿದ್ದು, ಕಾನ್ಮನೆ ಹಾಗೂ ಕಳವೆಯ ಎಲ್ಲ ಪರಿಸರ ಚಟಿವಟಿಕೆಗಳಿಗೆ ಹೀಗೆ ನಿರಂತರ ಮಾರ್ಗದರ್ಶನ ನೀಡುವಂತೆ ಗ್ರಾಮಸ್ಥರು ವಿನಂತಿಸಿದರು. ಗ್ರಾಮಸ್ಥರ ಪರವಾಗಿ ರೆಡ್ಡಿಯವರನ್ನು ಈ ಸಂದರ್ಭದಲ್ಲಿ ಶಾಲು ಹೊದಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕೃಷಿ ಭಾರತ್ ಪತ್ರಿಕೆ ಸಂಪಾದಕ ಚಂದ್ರಶೇಖರ್ ಬಾಳೆ, ಬೆಂಗಳೂರಿನ ‘ಸುಗ್ಗಿ’ ಸಾವಯವ ಮಳಿಗೆಯ ವಿದ್ಯಾಧರ ಹೆಗಡೆ ಸಂಕದಮನೆ ಉಪಸ್ಥಿತರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.