ಉತ್ತಮ ಚಿಂತನೆ ಹೊರಹೊಮ್ಮಲು ಓದು ಅತ್ಯಾವಶ್ಯಕ; ರಾಜು ಮೊಗವೀರ

ಶಿರಸಿ: ಒಳ್ಳೆಯ ಪುಸ್ತಕ ಓದುವುದರಿಂದ ಉತ್ತಮವಾದ ಚಿಂತನೆ ಜಾಗೃತವಾಗುತ್ತದೆ. ವಿದ್ಯಾರ್ಥಿಗಳು ಸಾಧ್ಯವಾದಷ್ಟು ಹೆಚ್ಚಿನ ಮಟ್ಟಿಗೆ ಓದುವ ಮತ್ತು ಬರೆಯುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಹಾಯಕ ಆಯುಕ್ತ ರಾಜು ಮೊಗವೀರ ಹೇಳಿದರು.

ಬುಧವಾರ ನಗರದ ಮಾರಿಗುಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪುಸ್ತಕ ಪ್ರೇಮಿ ವಿದ್ಯಾರ್ಥಿ ಬಳಗ ಹಮ್ಮಿಕೊಂಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬರವಣಿಗೆ ತಾನಾಗೇ ಎಲ್ಲರಿಗೂ ದಕ್ಕುವಂತದ್ದಲ್ಲ. ಸಾಹಿತಿಗಳು ಹಾಗೂ ಅನುಭವ ಇದ್ದವರ ಮಾತನ್ನು ಕೇಳಿ ಜ್ಞಾನ ಸಂಪಾದಿಸಬೇಕು. ಹುಟ್ಟಿನಿಂದ ಎಲ್ಲರೂ ಪ್ರತಿಭಾವಂತರಾಗುವುದಿಲ್ಲ.  ಅವರವರ ಶ್ರಮದಿಂದ ಮೇಲೆ ಬಂದಿರುತ್ತಾರೆ. ಪ್ರತಿಯೊಬ್ಬರಲ್ಲಿಯೂ ಒಂದೊಂದು ಪ್ರತಿಭೆ ಅಡಗಿರುತ್ತದೆ. ಅದನ್ನು ಕಾರ್ಯರೂಪಕ್ಕೆ ತರುವ ಅವಶ್ಯಕತೆಯಿದೆ ಎಂದರು.

ಸಿದ್ದಾಪುರ ಎಂಜಿಸಿ ಕಾಲೇಜಿನ ಉಪನ್ಯಾಸಕ ವಿಠ್ಠಲ ಭಂಡಾರಿ ಮಾತನಾಡಿ, ಪುಸ್ತಕ ಒಂದು ಅಲಂಕಾರಿಕ ವಸ್ತುವಲ್ಲ. ಅದು ಮನೆಯಲ್ಲಿದ್ದರೇ ಅದುವೇ ಒಂದು ಅಲಂಕಾರವಾಗಿದೆ. ಓದಲು ಸಮಯ ಸಿಗುವುದಿಲ್ಲ. ಸಮಯವನ್ನು ನಾವು ಮಾಡಿಕೊಳ್ಳಬೇಕು. ಇಂದಿನ ದಿನಗಳಲ್ಲಿ ಓದು ಎಂದರೆ ಪಠ್ಯ ಎಂದುಕೊಳ್ಳುತ್ತಿದ್ದಾರೆ. ಇದು ಅನೇಕ ಉಪನ್ಯಾಸಕರಲ್ಲಿಯೂ ಈ ಹವ್ಯಾಸವಿದೆ. ಆದರೆ ಪಠ್ಯದ ಜೊತೆ ವಾಕ್ಯ ರಚನೆಯಲ್ಲಿ ಅನುಭವ ಹೊಂದಿದ್ದವನು ಮಾತ್ರ ನಿಜವಾದ ಸಾಹಿತಿಯಾಗುತ್ತಾನೆ ಎಂದರು.
ಕನ್ನಡ ಉಪನ್ಯಾಸಕಿ ಮಾಧವಿ ಭಂಡಾರಿ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಆರ್.ಕೆ.ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. .

Categories: ಜಿಲ್ಲಾ ಸುದ್ದಿ

Leave A Reply

Your email address will not be published.