'ವಿಶ್ವಮಾನವ ದಿನ'ದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಾಳೆ

ಶಿರಸಿ: ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ನಿಮಿತ್ತ ವಿಶ್ವಮಾನವ ದಿನಾಚರಣೆಯನ್ನು ದಿ. 29ರಂದು ನಗರದ ವಿಕಾಸಾಶ್ರಮ ಬಯಲಿನ ಸಹ್ಯಾದ್ರಿ ರಂಗಮಂದಿರದಲ್ಲಿ ಸಂಜೆ 5 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಉದ್ಘಾಟಕರಾಗಿ ಜಿಲ್ಲಾ ಉಸ್ತುವಾರಿ ಹಾಗು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್ ವಿ ದೇಶಪಾಂಡೆ ಆಗಮಿಸಲಿದ್ದು, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಅನಂತಕುಮಾರ ಹೆಗಡೆ, ಜಿ ಪಂ ಸದಸ್ಯೆ ಜಯಲಕ್ಷ್ಮೀ ಮೊಗೇರ, ಜಿಲ್ಲೆಯ ಶಾಸಕರುಗಳಾದ ಶಾರದಾ ಶೆಟ್ಟಿ, ಶಿವರಾಮ್ ಹೆಬ್ಬಾರ್, ಮಂಕಾಳು ವೈದ್ಯ, ಸತೀಶ್ ಶೈಲ್, ಜಿಲ್ಲಾಧಿಕಾರಿ ಎಸ್ ಎಸ್ ನಕುಲ್, ಸಹಾಯಕ ಆಯುಕ್ತ ರಾಜು ಮೊಗವೀರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿರುವರು. 

ಸಭಾ ಕಾರ್ಯಕ್ರಮದ ನಂತರದಲ್ಲಿ ರತ್ನಾಕರ ಶೇಟ್, ಡಾ. ಸುಮನ್ ಹೆಗಡೆ, ರಾಜೇಶ್ವರಿ ಹೆಗಡೆ ಮತ್ತು ಇತರರಿಂದ ಕುವೆಂಪು ಭಾವಗೀತೆಗಳ ಸುಗಮ ಸಂಗೀತ ನಡೆಯಲಿದೆ. ನಂತರದಲ್ಲಿ ನಿಧಿ ರಾವ್, ನಿಧಿ ಸ್ವಾದಿ, ಮೋನಿಕಾ ಹೆಗಡೆ ಇವರಿಂದ ಭರತನಾಟ್ಯ ಜೊತೆಗೆ ಗಜಾನನ ಪ್ರೌಢಶಾಲೆ ಹೆಗಡೆಕಟ್ಟಾ ಮಕ್ಕಳಿಂದ ನೃತ್ಯ ನಡೆಯಲಿದೆ. ಶಿರಸಿಯ ಅಂಕಸಂಸಾರ ತಂಡದಿಂದ ‘ಕುವೆಂಪು ಕಥನ’ ಎಂಬ ರೂಪಕ ಮತ್ತು ಮನೋಜ ಪಾಲೇಕರ ಅವರ ಗೀತ ರೂಪಕ ಏರ್ಪಡಿಸಲಾಗಿದೆ. ಇದೇ ಸಂದರ್ಭದಲ್ಲಿ ವಿಶ್ವಮಾನವ ದಿನದ ಅಂಗವಾಗಿ ನಡೆಸಿದ್ದ ಚಿತ್ರಕಲಾ ಮತ್ತು ಕವನ ರಚನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಗುವುದು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.