ರೋಟರಿ-ಐಎಮ್ಎ ಜುವೆನೈಲ್ ಮಧುಮೇಹ ವೇದಿಕೆ ಉದ್ಘಾಟನೆ

ಶಿರಸಿ: ಇಲ್ಲಿಯ ರೋಟರಿ ಕ್ಲಬ್ ಹಾಗೂ ಐಎಂಎ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಜ್ಯುವೆನೈಲ್ ಡಯಾಬಿಟಿಸ್ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳ ಸಹಾಯಕ್ಕಾಗಿ ರೋಟರಿ-ಐಎಂಎ ಜ್ಯುವೆನೈಲ್ ಡಯಾಬಿಟಿಕ್ ಕ್ಲಬ್‍ನ್ನು ಸ್ಥಾಪಿಸಲಾಯಿತು.

ಈ ಡಯಾಬಿಟಿಕ್ ಒಕ್ಕೂಟವನ್ನು ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಡಯಾಬಿಟಿಕ್ ಆಸ್ಪತ್ರೆಯ ತಜ್ಞ ಡಾ. ಪ್ರಸನ್ನಕುಮಾರ, ಜಗತ್ತಿನಲ್ಲಿ ಒಟ್ಟೂ 5 ಲಕ್ಷ ಅಧಿಕ ಸಂಖ್ಯೆಯಲ್ಲಿ ಜುವೆನೈಲ್ ಡಯಾಬಿಟಿಸ್‍ನಿಂದ ಬಳಲುತ್ತಿರುವ ಮಕ್ಕಳಿದ್ದಾರೆ. ನಮ್ಮ ದೇಶದಲ್ಲಿಯೇ 1 ಲಕ್ಷ ಮಕ್ಕಳಿದ್ದು, ಅಂತವರ ಸಹಾಯಕ್ಕಾಗಿ ಎಲ್ಲರೂ ಕೈ ಜೋಡಿಸಬೇಕಾಗಿದೆ. ಇಂತಹವರಿಗೆ ಸಹಾಯ ಮಾಡುವುದರಿಂದ  ಮನುಷ್ಯ ಜನ್ಮ ಸಾರ್ಥಕವಾಗುವುದು. ಪ್ರತಿಯೊಬ್ಬರೂ ಇದರಲ್ಲಿ ಪಾಲುದಾರರಾಗಬೇಕು. ಸೇವೆ ಮಾಡಲು ಮನಸ್ಸಿದ್ದರೆ  ಹೇಗಾದರೂ ಸಂಪನ್ಮೂಲ ಕ್ರೋಢಿಕರಣವಾಗುತ್ತದೆ. ಜಗತ್ತಿನಲ್ಲಿ, ಅದರಲ್ಲೂ ಭಾರತದಲ್ಲಿ ಬಹಳ ಶ್ರೀಮಂತರು,ಕೊಡುಗೈ ದಾನಿಗಳು ಇದ್ದಾರೆ. ಅವುಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುವವರು ಬೇಕು ಎಂದು ತಿಳಿಸಿ ಮಧುಮೇಹ ರೋಗಿಗಳಿಗೆ ಹಾಗೂ ಅವರ ಪಾಲಕರಿಗೆ ಧೈರ್ಯತುಂಬುವ ಮಾತುಗಳನ್ನಾಡಿದರು.
 ಇನ್ನೋರ್ವ ಮುಖ್ಯ ಅತಿಥಿ, ಡಯಾಬಿಟಿಸ ತಜ್ಞೆ ಡಾ. ಅಂಜನಾ ಹುಳಸೆ ಅವರು ಮಾತನಾಡಿ, ಮಧುಮೇಹ ರೋಗ ಮಕ್ಕಳದಲ್ಲಿ ಬರುವದು ಅತಿ ವಿರಳವಾದರೂ ನಮ್ಮ ಜನಸಂಖ್ಯೆಗನುಗುಣವಾಗಿ ನಮ್ಮಲ್ಲಿ ಬಹಳ ಮಕ್ಕಳು ಈ ರೋಗದಿಂದ ಬಳಲುತ್ತಿದ್ದಾರೆ. ಕರ್ನಾಟಕದಲ್ಲಿಯೇ 15 ರಿಂದ 20 ಸಾವಿರ ಮಕ್ಕಳು ಈ ರೋಗದಿಂದ ಬಳಲುತ್ತಿದ್ದಾರೆ. ಈ ರೋಗ ಬಂದಾಕ್ಷಣ ಪಾಲಕರು ಹೆದರುವ ಅವಶ್ಯಕತೆಯಿಲ್ಲ. ಆಧುನಿಕ ಚಿಕಿತ್ಸೆಯಿಂದ ಈ ಮಕ್ಕಳೂ ಉಳಿದ  ಮಕ್ಕಳಂತೆ, ಆಟೋಟ, ವ್ಯಾಯಾಮ ಮಾಡಿಕೊಂಡು ವ್ಯಾಸಂಗವನ್ನು ಮುಂದುವರಿಸಬಹುದು. ಜಗತ್ತಿನಲ್ಲಿ ಅದೆಸ್ಟೋ ಜನರು ಜ್ಯುವೆನೈಲ್ ಡಯಾಬಿಟಿಸ್ ಸಮಸ್ಯೆ ಇದ್ದರೂ ಅತ್ಯಂತ ಉನ್ನತ ಸಾಧನೆಯನ್ನು ಮಾಡಿದವರಿದ್ದಾರೆ ಎಂದು ಉದಾಹರಣೆಯೊಂದಿಗೆ ತಿಳಿಹೇಳಿದರು.

ಈ ಸಂದರ್ಭದಲ್ಲಿ 10 ಜ್ಯುವೆನೈಲ್ ಡಯಾಬಿಟಿಕ್ ಮಕ್ಕಳಿಗೆ ಹಾಗೂ ಪಾಲಕರಿಗೆ ಜ್ಯುವೆನೈಲ್ ಡಯಾಬಿಟಿಸ್ ಬಗ್ಗೆ ವಿವರವಾದ ಮಾಹಿತಿಯನ್ನು ಕೊಟ್ಟು ಚಿಕಿತ್ಸೆ ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆಯೊಂದಿಗೆ ತಿಳಿಸಿದರು. ಶಿಬಿರದಲ್ಲಿಯಾವ ಆಹಾರ ಸೇವನೆ ಮಾಡಬೇಕು.? ಯಾವ ಯಾವ ಮುಂಜಾಗ್ರತೆ ವಹಿಸಬೇಕು. ಯಾವಾಗ ವೈದ್ಯರನ್ನು ಕಾಣಬೇಕು. ಇತ್ಯಾದಿ  ಮಾಹಿತಿಯನ್ನು ಕೊಡಲಾಯಿತು. ನೋವೋ ನೊರಡಿಸ್ಕ ಕಂಪನಿಯ ಸಹಯೋಗದಲ್ಲಿ ಎಲ್ಲಿ ಮಕ್ಕಳಿಗೆ ಉಚಿತವಾಗಿ ಇನ್ಸುಲಿನ್ ಇಂಜೆಕ್ಷನ್‍ಗಳು ರಕ್ತದಲ್ಲಿ ಸಕ್ಕರೆ ಪ್ರಮಾಣ ಕಂಡುಕೊಳ್ಳುವ ಗ್ಲುಕೋಮೀಟರ್ ಸಾಧನ, ಇನ್ಸಲಿನ್ ಸಿರಿಂಜ್‍ಗಳು, ಜ್ಯುವೆನೈಲ್ ಡಯಾಬಿಟಿಸ್ ಬಗ್ಗೆ ಮಾಹಿತಿ ಇರುವ ಕರಪತ್ರಗಳು ಡಯಾಬಿಟಿಕ್ ಡೈರಿ, ಇತ್ಯಾದಿಗಳನ್ನೊಳಗೊಂಡ ಅಂದಾಜು ರೂ. 5 ಸಾವಿರ ರೂ ಮೌಲ್ಯದ ಡಯಾಬಿಟಿಕ್ ಕಿಟ್‍ಗಳನ್ನು  ಉಚಿತವಾಗಿ ವಿತರಿಸಲಾಯಿತು.

ರೋಟರಿ ಅಧ್ಯಕ್ಷ ಡಾ. ದಿನೇಶ ಹೆಗಡೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಈ ಒಕ್ಕೂಟವು  ಪ್ರತಿ ತಿಂಗಳು ಈ ಸಮಸ್ಯೆಯುಳ್ಳವರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಿದೆ ಎಂದರು. ಐಎಂಎ ಅಧ್ಯಕ್ಷ ಡಾ. ಕೈಲಾಶ್ ಪೈ ಅತಿಥಿಗಳನ್ನು ಪರಿಚಯಿಸಿದರು. ಐಎಂಎ ಕಾರ್ಯದರ್ಶಿ ಡಾ. ಅಂಬರ್ ಎಂ. ವಂದನಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ರೋಟರಿ ಕಾರ್ಯದರ್ಶಿ ರೊ| ಹಸ್ತಿಮಲ್ ಚೌಧರಿ, ಖಜಾಂಚಿ, ರೋ|ಫ್ರಾನ್ಸಿಸ್ ರೋಡ್ರಿಗಸ್, ರೋ| ರವಿ ಹೆಗಡೆ ಗಡಿಹಳ್ಳಿ, 50 ಕ್ಕೂ ಹೆಚ್ಚು ವೈದ್ಯರುಗಳು ಭಾಗವಹಿಸಿದ್ದರು. ರೋ|ಡಾ. ರಮೇಶ ಹೆಗಡೆ ಹಾಗೂ ರೊ| ಡಾ. ಕೃಷ್ಣ ಮೂರ್ತಿ ರಾಯ್ಸದ್ ಕಾರ್ಯಕ್ರಮ ನಿರ್ವಹಿಸಿದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.