ಸ್ವಚ್ಛತೆ ಕಾಯ್ದುಕೊಳ್ಳುವುದೇ ಅಘನಾಶಿನಿಯ ಮೂಲ..? ನಿರ್ಲಕ್ಷಿಸಿದ್ದೇವೆ ನಾವು.. ಶಂಕರ ಹೊಂಡದ ಪವಿತ್ರ ಜಲ..!

– ಎಮ್ ಆರ್ ಸಚಿನ್ 

ಶಂಕರ ಹೊಂಡ ಎಂಬುದು ಸ್ಥಳಿಯರೆಲ್ಲರೂ ತಿಳಿದಿರುವ ಶಿರಸಿ ನಗರದ ಮಧ್ಯಭಾಗದಲ್ಲಿನ ಒಂದು ಪ್ರಸಿದ್ಧ ನೀರಿನ ಚಿಲುಮೆ ಪ್ರದೇಶ. ಶಂಕರ ದೇವಸ್ಥಾನ, ದೊಡ್ಡಗಣಪತಿ ದೇವಸ್ಥಾನ, ದತ್ತ ಮಂದಿರ, ವೀರಭದ್ರೇಶ್ವರ ದೇವಸ್ಥಾನ, ಈಗ ಕೇವಲ ಪಳೆಯುಳಿಕೆಗಳಾಗಿ ಪಾಳುಬಿದ್ದಿರುವ ಜೈನ ದೇವಾಲಯಗಳ ಸಮುಚ್ಛಯದಲ್ಲಿ ಇರುವಂತಹ ಒಂದು ಪುರಾತನ ಕೆರೆ ಅಥವಾ ಕಲ್ಯಾಣಿ ಎನ್ನಬಹುದಾದ ಪ್ರದೇಶವೆ ಈ ಶಂಕರ ಹೊಂಡ. ಈ ಶಂಕರ ಹೊಂಡಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳು ಹಾಗೂ ಶಾಸನಗಳು ಸಿಕ್ಕ ಬಗ್ಗೆ ಇನ್ನೂ ಮಾಹಿತಿ ತಿಳಿದುಬಂದಿಲ್ಲ. ಸಮೀಪದಲ್ಲೆಲ್ಲಾ ಬಹಳಷ್ಟು ದೇವಸ್ಥಾನಗಳನ್ನು ಹೊಂದಿರುವ ಈ ಶಂಕರಹೊಂಡದ ಇತಿಹಾಸವು ಇನ್ನೂ ನಿಗೂಢವಾಗಿಯೇ ಇದೆ. ಆದರೆ ಮೊದಲಿನಿಂದಲೂ ಸಿಕ್ಕಿರುವ ದಾಖಲೆಗಳ ಹಾಗೂ ದಂತಕಥೆಗಳ ಪ್ರಕಾರ ಈ ಪ್ರದೇಶವು ಉತ್ತರಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ, ಕುಮಟಾ ತಾಲೂಕಿನ ಜನರ ಜೀವನದಿ ಅಘನಾಶಿನಿ ನದಿಯ ಉಗಮ ಸ್ಥಳವಾಗಿದೆ. ಅಘನಾಶಿನಿ ನದಿಯು ಬಹಳ ಚಿಕ್ಕದಾಗಿ ಗುಪ್ತಗಾಮಿನಿಯಾಗಿ ಇಲ್ಲಿಂದಲೇ ಹರಿದು ಮುಂದೆ ಬೃಹದಾಕಾರವಾಗಿ ಭೋರ್ಗರೆಯುತ್ತಾಳೆ. ಅನೇಕ ಪ್ರಸಿದ್ಧ ಜಲಪಾತಗಳನ್ನು ಸೃಷ್ಟಿಸುತ್ತಾ ಹರಿಯುವ ಸುಂದರಿ ಅಘನಾಶಿನಿಯು ಅರಬ್ಬಿ ಸಮುದ್ರದಲ್ಲಿ ಮೀಯುತ್ತಾಳೆ. ಇಂತಹ ಅಘನಾಶಿನಿ ನದಿಯ ಉಗಮ ಸ್ಥಳವನ್ನು ನಾವು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು ಎದ್ದುಕಾಣುವ ಸತ್ಯ.

ಶಂಕರ ಹೊಂಡದ ಬಗೆಗಿನ ಕೆಲವು ಅಚ್ಚರಿಯ ಸಂಗತಿಗಳು
ಶಂಕರ ಹೊಂಡವು ರಾಜರ ಕಾಲದಲ್ಲಿ ನಿರ್ಮಾಣಗೊಂಡಿದ್ದೇ ಅಥವಾ ನಿಸರ್ಗ ನಿರ್ಮಿತವೇ ಅಥವಾ ಮತ್ತಿನ್ಯಾವುದೋ ಏಲಿಯನ್ ಕಟ್ಟಿಸಿದ್ದೇ ಎಂಬುದರ ಬಗ್ಗೆ ಯಾರಿಗೂ ಸರಿಯಾಗಿ ಗೊತ್ತಿಲ್ಲ. ಆದರೆ ತಾಂತ್ರಿಕವಾಗಿ ಇದು ಪಕ್ಕಾ ಇಂಜಿನಿಯರಿಂಗ್ ಪ್ಲಾನ್‍ನಲ್ಲಿಯೇ ಕಟ್ಟಲಾಗಿದೆ. ಇದರ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಬಹುದು, ಉಗಮ ಸ್ಥಳದಿಂದ ನೀರು ಹೊರಹೊಮ್ಮುವ ಒರತೆಯನ್ನು ನೋಡಬಹುದು. ನೀರು ಅನಾವಶ್ಯಕವಾಗಿ ಹರಿದು ಹೋಗದಂತೆ ತಡೆ ಹಿಡಿಯಬಹುದು. ನೈಸರ್ಗಿಕವಾಗಿ ಇಲ್ಲಿನ ನೀರು ಎಂದೂ ಆರಿದ ಉದಾಹರಣೆಯಿಲ್ಲ. ಆದರೆ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿದ ನಂತರ ಪೂಜೆ ಮಾಡಿದ ಹದಿನಾರು ದಿನಕ್ಕೆ ನೀರು ಬಂದು ಕೊಳವು ತುಂಬಿಕೊಂಡ ನಿದರ್ಶನವುಂಟು. ಇವೆಲ್ಲಾ ಅಚ್ಚರಿಯನ್ನು ಕಣ್ಣಾರೆ ಕಂಡಂತ ಜನಗಳಿದ್ದಾರೆ. ಕೆಲ ವರ್ಷಗಳ ಹಿಂದೆ ಶಿರಸಿ ನಗರದ ಬಹುತೇಕ ಎಲ್ಲಾ ಸಾರ್ವಜನಿಕ ಗಣಪತಿ ಮೂರ್ತಿಯನ್ನು ಇದೇ ಶಂಕರಹೊಂಡದಲ್ಲಿ ವಿಸರ್ಜನೆ ಮಾಡಲಾಗುತ್ತಿತ್ತು, ಆದರೆ ಈಗ ಸಂಪೂರ್ಣವಾಗಿ ನಿಲ್ಲಿಸಲಾಗಿದೆ. 

ಶಂಕರ ಹೊಂಡದ ವಾಯುವ್ಯ ಭಾಗದಲ್ಲಿ ಶಂಕರ ದೇವಸ್ಥಾನವಿದ್ದು ಅದ್ದರಿಂದ ಇದಕ್ಕೆ ಶಂಕರಹೊಂಡವೆಂಬ ಹೆಸರು ಬಂದಿರಬಹುದೆಂದು ತರ್ಕಿಸಬಹುದಾದರೂ ಶಂಕರ ದೇವಸ್ಥಾನ ಇರುವ ದಿಕ್ಕಿನಿಂದಲೇ ನೀರಿನ ಸೆಳೆತವೂ ಇದೆಯೆಂದು ಹೇಳಲಾಗುತ್ತಿದೆ. ಆದರೆ ಅಘನಾಶಿನಿ ಉಗಮವೆನ್ನಬಹುದಾದ ಸ್ಥಳವು ಈ ಕೊಳದ ಪೂರ್ವಭಾಗದಲ್ಲಿಯೂ ಕಾಣಬಹುದಾಗಿದೆಯೆಂಬುದು ಅಚ್ಚರಿ ಹುಟ್ಟಿಸುತ್ತದೆ. ಈ ಕುರಿತು ಮತ್ತಷ್ಟು ಅಧ್ಯಯನಗಳು ನಡೆದರೆ ಹೆಚ್ಚಿನ ಅಚ್ಚರಿಯ ಮಾಹಿತಿ ಸಿಗುವ ಎಲ್ಲಾ ಸಾಧ್ಯತೆಗಳೂ ಇವೆ. ಒಂದು ಭಾಗದಲ್ಲಿ ಕಡಿಮೆ ಆಳವಾಗಿಯೂ ಒಂದು ಭಾಗದಲ್ಲಿ ಸುಮಾರು 12 ಅಡಿಗಳಷ್ಟು ಆಳವಾಗಿಯೂ ಇದೆ. ಇಲ್ಲಿ ಸುಳಿ ಇರಬಹುದೆಂದು ಕೆಲವರು ಹೇಳುತ್ತಾರೆಯಾದರೂ ಆ ಸಾಧ್ಯತೆ ಕಡಿಮೆ. ಈ ಶಂಕರಹೊಂಡದ ಜಲವು ಅತ್ಯಂತ ಪವಿತ್ರವಾದುದೆಂದು ಈ ನೀರಿನ ಪ್ರೋಕ್ಷಣೆಗೆ ಘಟ್ಟದ ಕೆಳಗಿನಿಂದ ಜನರು ಹುಡುಕಿಕೊಂಡು ಬರುತ್ತಾರೆ. ಇಲ್ಲಿನ ನೀರಿನಿಂದ ಚರ್ಮರೋಗ ಮತ್ತು ಇನ್ನಿತರ ವ್ಯಾಧಿಗಳು ಗುಣವಾಗುತ್ತವೆ ಎಂಬ ನಂಬಿಕೆ ಇಲ್ಲಿಗೆ ಬರುವ ಪರವೂರಿನ ಭಕ್ತರಲ್ಲಿದೆ. ಅವರಿಗೆ ಈ ಶಂಕರ ಹೊಂಡ ಕೇವಲ ಅಘನಾಶಿನಿ ಮಾತ್ರವಲ್ಲದೇ ಪಾಪನಾಶಿನಿಯೂ ಹೌದು.

ಸ್ಥಳಿಯವಾಗಿ ಇಂದು ಶಂಕರಹೊಂಡ ನಿರ್ಲಕ್ಷಿಸಲ್ಪಟ್ಟಿದ್ದೇಕೆ?
ಈ ಪ್ರದೇಶಕ್ಕೆ ಹೊರಗಿನಿಂದ ಜನರು ಬರುತ್ತಾರಾದರೂ ಇಲ್ಲಿಯವರಿಗೆ ಈ ಪ್ರದೇಶದ ಮಹತ್ವ ಅರಿತಂತಿಲ್ಲ. ಜೊತೆಗೆ ಇದು ಮೊದಲಿನಿಂದಲೂ ನಗರ ಸಭೆಯ ಆಸ್ತಿಯಾಗಿರುವುದರಿಂದ, ಇದು ಸಾರ್ವಜನಿಕ ಆಸ್ತಿ, ಧಾರ್ಮಿಕ ಸ್ಥಳವಲ್ಲ ಎನ್ನುವ ಅಸಡ್ಡೆಯೂ ಇದ್ದಿರಬಹುದು. ಇಲ್ಲಿನ ನೀರು ಕಡಿಮೆಯಾದರೆ ಅಥವಾ ಮಲಿನಗೊಂಡರೆ ಸುತ್ತಲಿನ ವೀರಭದ್ರಗಲ್ಲಿ, ರಾಯರಪೇಟೆ, ವಿಜಯನಗರ ಪ್ರದೇಶದ ಜನರು ಬಾವಿಯಲ್ಲಿಯೂ ಶುದ್ಧ ನೀರಿಲ್ಲದೆ ಕಷ್ಟ ಪಡಬೇಕಾದ ಪರಿಸ್ಥಿತಿ ಬರಬಹುದು. ಹಾಗಾಗಿ ಇಲ್ಲಿನ ನೀರನ್ನು ಸ್ವಚ್ಛವಾಗಿ ಉಳಿಸಿಕೊಳ್ಳುವ ಜರೂರತ್ತು ಅವರಿಗೆ ಖಂಡಿತವಾಗಿಯೂ ಇದೆ. ಕಾವೇರಿಯ ಮೂಲ ತಲಕಾವೇರಿಗೆ ಅಲ್ಲಿಯ ಜನರು ನೀಡುವ ಗೌರವ, ಭಕ್ತಿ ನಮ್ಮ ಅಘನಾಶಿನಿ ಮೂಲ ಶಂಕರ ಹೊಂಡಕ್ಕೂ ಬೇಕು. ಇದಕ್ಕೆ ಮೊದಲು ಜನರು ಜಾಗೃತರಾಗಬೇಕು. ಯಾವ್ಯಾವುದೋ ಹಳೆಯ ಫೋಟೋ, ಮಂತ್ರಿಸಿದ ಕಾಯಿ, ಹೂವು ಇತ್ಯಾದಿಗಳನ್ನು ಈ ನೀರಿನಲ್ಲಿ ಬಿಸಾಡುವುದು, ಹರಿಯ ನೀರಿನಲ್ಲಿ ಬಿಡಬೇಕಾದ ಪಿಂಡವನ್ನು ಇಲ್ಲಿ ಹಾಕುವುದು, ಗುಟ್ಖಾ ಪಾಕೀಟು, ಬಿಯರ್ ಬಾಟಲು ಇತ್ಯಾದಿಗಳ ಬಿಸಾಡುವುದು ಜನರು ನಿಲ್ಲಿಸಬೇಕು. ಪಾಪನಾಶಿನಿ ಎಂಬ ಹೆಸರಿನ ಈ ಪವಿತ್ರ ನೀರನ್ನು ಕಲುಷಿತಗೊಳಿಸುವ ಕಪ್ಪು ಮನಸ್ಸುಗಳ ಮಾನವರು ತಮ್ಮ ಪಾಪ ಪರಿಹಾರವೆಂದುಕೊಂಡು ಮತ್ತಷ್ಟು ಪಾಪವನ್ನು ತಮ್ಮ ಅಕೌಂಟಿನಲ್ಲಿ ಜಮೆಯಿಡುತ್ತಿದ್ದಾರೆ. ಜನರ ಒಡನಾಟವಿಲ್ಲದೆ ಶಂಕರಹೊಂಡದಲ್ಲಿ ಝೊಂಡು ಹುಲ್ಲುಗಳೂ ಬೆಳೆದು ಮತ್ತಷ್ಟು ಗಲೀಜಾಗಿವೆ. ಆತ್ಮಹತ್ಯೆ ಪ್ರಕರಣ, ಕಾಲುಜಾರಿ ಬಿದ್ದು ಮೃತ್ಯುಹೊಂದಿದ್ದು ಹಾಗೂ ಕೊಲೆ ಮಾಡಿ ಇಲ್ಲಿ ಬಿಸಾಡಿರುವಂತಹ ಘಟನೆಗಳೂ ಈ ಪ್ರದೇಶದಲ್ಲಿ ನಡೆದಿವೆ. ಈ ಮೊದಲು ಇಲ್ಲಿ ಜನರ ಓಡಾಟ ಇಲ್ಲಿ ಕಡಿಮೆ ಇತ್ತು, ಗಾಂಜಾ ತಾಣವಾಗಿ, ಅನೈತಿಕ ಚಟುವಟಿಕೆಯ ಪ್ರಶಸ್ತ ಜಾಗವಾಗಿತ್ತು. ಆದರೆ ಈಗ ನಿರ್ಮಾಣವಾದ ನೂತನ ರಸ್ತೆಯಿಂದ ಜನರ ಓಡಾಟ ಹೆಚ್ಚಿದ್ದು ಇತ್ತೀಚೆಗೆ ಈ ರೀತಿಯ ಘಟನೆಗಳು ಕಡಿಮೆಯಾಗಿವೆ. ಆದರೂ ಪೊಲೀಸರ ಬೀಟ್ ಅಗತ್ಯವಿದ್ದು ಕತ್ತಲಾವರಿಸುತ್ತಿದ್ದಂತೆ ಕೆಲವು ಹುಡುಗರು ಶಂಕರಹೊಂಡದ ಸಮೀಪ ಸಿಗರೇಟು, ಮದ್ಯ ಸೇವಿಸುತ್ತಾ ಇರುತ್ತಾರೆನ್ನುವ ಬಗ್ಗೆ ವರದಿಯಾಗಿವೆ.

ಶಿರಸಿಯ ಯುವಾ ಬ್ರಿಗೇಡ ಶ್ಲಾಘನೀಯ ಕಾರ್ಯ
ಶಿರಸಿಯ ಯುವಾ ಬ್ರಿಗೇಡ್ ಸ್ವಯಂಸೇವಕ ಯುವಕರ ತಂಡದವರು ಈಗ ಶಂಕರಹೊಂಡದ ಸ್ವಚ್ಛತೆಗೆ ತಮ್ಮದೇ ತಂಡ ಕಟ್ಟಿಕೊಂಡು ಸ್ವಚ್ಛತಾ ಕಾರ್ಯವನ್ನು ಮಾಡುತ್ತಿದ್ದಾರೆ. ಶಂಕರಹೊಂಡದ ಸುತ್ತಲಿನ ಆವರಣ, ನೀರಿನ ಪ್ರದೇಶ ಸೇರಿದಂತೆ ಸಂಪೂರ್ಣವಾಗಿ ಸ್ವಚ್ಛಗೊಳಿಸುವ ಪಣ ತೊಟ್ಟಿದ್ದಾರೆ. ಇವರ ಕಾರ್ಯಕ್ಕೆ ಈಗಾಗಲೇ ಶಿರಸಿ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿರಸಿ ನಗರಸಭೆಯ ಅಧ್ಯಕ್ಷರಾಗಿರುವ ಪ್ರದೀಪ ಶೆಟ್ಟಿ, ಆಯುಕ್ತರಾದ ಮಹೇಂದ್ರಕುಮಾರ್, ನಗರಸಭಾ ಸದಸ್ಯ ಸುಧೀರ ಕಂಚುಗಾರ ಸೇರಿದಂತೆ ಮತ್ತು ಕೆಲವರು ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ. 2009ರಲ್ಲಿ ಶಂಕರಹೊಂಡದ ಅಭಿವೃದ್ಧಿ ಕಾಮಗಾರಿಯು ಉದ್ಘಾಟನೆಯಾಗಿತ್ತು ಅಂದಿನ ನಗರಸಭೆಯ ರಮೇಶ ಆಚಾರಿಯವರ ಅಧ್ಯಕ್ಷತೆಯಲ್ಲಿ ಸುತ್ತಲೂ ಗ್ರಿಲ್ ನಿರ್ಮಾಣ ಹಾಗೂ ಸ್ನಾನ ಗೃಹದ ನಿರ್ಮಾಣವೂ ಆಗಿತ್ತು. ಅದಕ್ಕೂ ಮೊದಲೂ ಸಹಾ ಶಂಕರ ಹೊಂಡ ಇತ್ತೀಚಿನ ದಿನಗಳಷ್ಟು ಹದಗೆಟ್ಟಿರಲಿಲ್ಲ ಎಂಬುದು ಶಂಕರಹೊಂಡವನ್ನು ಬಲ್ಲಂತವರ ಅಭಿಪ್ರಾಯ.

‘ಶಿರಸಿ ಸಿರಿ’ ಮೂಲಕ ನಾವೂ ಸಹಾ ಈ ಕುರಿತಂತೆ ಕೆಲವರನ್ನು ವಿಚಾರಿಸಿದಾಗ ನಮ್ಮ ಊರಿನ ಈ ಪುರಾತನ ಕ್ಷೇತ್ರದ ಅಭಿವೃದ್ಧಿ ಮುಂದುವರೆಸಿಕೊಂಡು ಹೋಗಲು ಒಟ್ಟಾಗಿ ಸೇರಿ ಕೆಲಸ ಮಾಡಲು ಅನೆಕರು ಉತ್ಸುಕರಾಗಿದ್ದಾರೆ. ನಗರ ಸಭಾ ಸದಸ್ಯರಾಗಿರುವ ರಮೇಶ ಆಚಾರಿ, ವೀಣಾ ಶೆಟ್ಟಿ, ಉದ್ಯಮಿಗಳಾದ ಶಂಕರ ದಿವೇಕರ, ಸ್ಥಳಿಯರಾದ ಮಹಾಗಣಪತಿ ಹಾಗೂ ಶಂಕರ ದೇವಸ್ಥಾನದ ಮೊಕ್ತೇಸರರು ಹಾಗೂ ಪೌರೋಹಿತ್ಯ ಕುಟುಂಬದವರು, ಶಂಕರ ಹೊಂಡದ ಎದುರಿನ ಅಂಗಡಿಯ ಸಾಬಣ್ಣ ಮಾಮೂ ಸೇರಿದಂತೆ ಮತ್ತಷ್ಟು ಜನರು ತಮ್ಮ ಕೈಲಾದ ಸಹಾಯ ಮಾಡುವುದಾಗಿ ಶಂಕರ ಹೊಂಡದ ಅಭಿವೃದ್ಧಿಗೆ ಬೆಂಬಲಿಸಿದ್ದಾರೆ. ಈ ಕುರಿತಂತೆ ನಗರಸಭಾ ಅಧ್ಯಕ್ಷ ಪ್ರದೀಪ ಶೆಟ್ಟಿ ಸಹಾ ನಮ್ಮೊಂದಿಗೆ ಮಾತನಾಡಿ ಶೀಘ್ರದಲ್ಲಿಯೇ ಸ್ವಚ್ಛತೆಗೆ ಆದ್ಯತೆ ನೀಡುವುದಾಗಿ ಹಾಗೂ ಮುಂದಿನ ದಿನಗಳಲ್ಲಿ ಪಾವಿತ್ಯ್ರತೆ ಉಳಿಸಿಕೊಂಡು ಹೋಗಲು ತಮ್ಮಿಂದಾಗುವ ಎಲ್ಲಾ ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ.

ಆದರೆ ಇಲ್ಲಿ ನಿಜವಾಗಿಯೂ ಬೇಕಾಗಿರುವುದು ಜನರ ಸಂಪೂರ್ಣ ಇಚ್ಛಾ ಶಕ್ತಿ. ಕೇವಲ ಒಂದು ಸಂಘಟನೆಯಿಂದಾಗಲಿ, ಕೆಲವು ಜನರಿಂದಾಗಲಿ, ಅಧಿಕಾರಿಗಳಿಂದಾಗಲಿ ಈ ಬದಲಾವಣೆ ಸಾಧ್ಯವಿಲ್ಲ. ನಾವೇ ಮರೆತ ನಮ್ಮ ನೆಲದ ಪವಿತ್ರತೆಯನ್ನು ನಾವು ನೆನಪಿಟ್ಟು ಗೌರವಿಸಬೇಕಾಗಿದೆ. ಪರ ಊರಿನ ಜನರಿಗೆ ತಿಳಿದಿರುವ ಇಲ್ಲಿನ ಕ್ಷೇತ್ರ ಶಕ್ತಿಯನ್ನು ಮೊದಲು ನಾವು ಅರಿತು ನಂತರ ನಮ್ಮವರಿಗೆ ತಿಳಿಸಬೇಕಾಗಿದೆ. ಸ್ಥಳಿಯವಾಗಿ ಎಲ್ಲರೂ ಕೈಜೊಡಿಸಿ ದುಡಿದಾಗ ಮಾತ್ರ ಸ್ವಚ್ಛತೆ ಸಾಧ್ಯ, ಸ್ವಚ್ಛತೆ ಇರುವಲ್ಲಿ ಮಾತ್ರವೇ ದೈವಿಕ ಶಕ್ತಿ ಇರುತ್ತದೆ. ಈ ಭಾಗದ ಸುತ್ತಮುತ್ತÀಲಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಶಂಕರಹೊಂಡವನ್ನು ಸುಂದರವಾಗಿ ಸ್ವಚ್ಛವಾಗಿ ಉಳಿಸಿಕೊಳ್ಳಲೇಬೇಕಾಗಿದೆ. ಇಲ್ಲದಿದ್ದರೆ ಮುಂದೊಂದು ದಿನ ಬರಬಹುದಾದ ಆಪತ್ತಿಗೆ ನೀವೆಲ್ಲರೂ ಸೇರಿಯೇ ಹೊಣೆಗಾರರಾಗಬಹುದು ಎಚ್ಚರ!! ಇನ್ನು ನೀವೇ ಯೋಚಿಸಿ ನಮ್ಮೊಂದಿಗೆ ಕೈಜೋಡಿಸುತ್ತೀರೋ ಅಥವಾ ಇದೆಲ್ಲಾ ಯಾರಿಗೆ ಬೇಕು ಅಂತ ಸುಮ್ಮನಿರ್ತಿರೋ ನಿಮಗೆ ಬಿಟ್ಟದು!

Categories: ಜಿಲ್ಲಾ ಸುದ್ದಿ

3 Comments

 1. Sachchidananda Hegde

  ನನ್ನ ತಿಳುವಳಿಕೆಯ ಮಟ್ಟಿಗೆ ಹೇಳುವುದಾದರೆ ಅಘನಾಶಿನಿ ಹುಟ್ಟಿದ್ದು ಮಂಜುಗುಣಿ ಕೆರೆಯಲ್ಲಿ. ಅಲ್ಲಿಂದ ಅದು ರೇವಣಕಟ್ಟಾ, ಸರಕುಳಿ, ನಾಡಗುಳಿ, ಬಾಳಗಾರ, ದಂಟ್ಲಲ್, ಬಾಳೂರು, ಮಾಣಿಹೊಳೆ, ಉಂಚಳ್ಳಿ ಮೂಲಕ ಘಟ್ಟ ಇಳಿಯುತ್ತದೆ.

  Reply
 2. ಸುಮುಖ ಮಧುಕರ ಭಟ್ಟ

  ಹೌದು ನಾವಿಂದು ಶಂಕರಹೊಂಡವನ್ನು ಅದರ ಮೂಲ ರೂಪಕ್ಕೆ ತರುವ ಪ್ರಯತ್ನ ನಡೆಸಲೇ ಬೇಕಾದ ಅಗತ್ಯ ಅಂತೆಯೇ ಅನಿವಾರ್ಯತೆಯೂ ಎದುರಾಗಿದೆ .
  ಮಾನವ ಪಾಪದ ಫಲವು ಭಾರತದಂತಹ ಸಮೃದ್ಧ ದೇಶದಲ್ಲಿ ಅದೂ ದಕ್ಷಿಣ ಭಾರತದಂತಹ ಕರಾವಳಿ ಪ್ರದೇಶಗಳಲ್ಲಿ ಅದೂ ಮಲೆನಾಡಿನ ದಟ್ಟ – ಹಚ್ಹಸಿರಿನ ಮರ ಮತ್ತು ಗಿಡಮೂಲಿಕೆಗಳ ಬಲಿಷ್ಟ ಕೋಟೆಯನ್ನು ಬರಗಾಲವೆಂಬ ಶತ್ರು ಭೇದಿಸಲು ಸಾಧ್ಯವಾದರೆ ಇದು ನಿಜವಾಗಿಯೂ ಯೋಚಿಸಬೇಕಾದಂತಹ ಸಂಗತಿಯೇ .
  ಮನೆನಾಡನ್ನು ಮತ್ತೆ ಸಮೃದ್ಧ ವಲಯವನ್ನಾಗಿಸು ಶಂಕರಹೊಂಡವನ್ನು ಸ್ವಚ್ಛಗೊಳಿಸುವುದೂ ಒಂದು ಪ್ರಮುಖ ಪಾತ್ರವಹಿಸಿದೆ .
  ಈ ನಿಟ್ಟಿನಲ್ಲಿ ಸರ್ಕಾರದಿಂದ ಒಂದಿಷ್ಟು ಹಣ ಬಿಡುಗಡೆ, ಸಾರ್ವಜನಿಕರ ಸಹಕಾರ – ಶ್ರಮದಾನ ಸಿಕ್ಕರೆ ಸಾಕು……….
  ಪಾಪಪರಿಹಾರಿಣಿಯ ಸ್ರೋತ ಮತ್ತೆ ಸುಂದರವಾಗಬಹುದು .

  Reply

Leave A Reply

Your email address will not be published.