ನೀಲಕಣಿ ಇದ್ದಿದ್ದು, 'ನೀಲೇಕಣಿ'ಯಾಗಿದ್ದು ಹೀಗೆ.. ! 

ವಿಶೇಷ ಸಂದರ್ಶನದ ವರದಿ..

ರಮಣೀಯ ದಂಪತಿಗಳಿಗೆ ಗಂಡುಮಗು ಇರಲಿಲ್ಲ. ಒಂದು ದಿನ ಅವರ ಕನಸಿನಲ್ಲಿ ಬ್ರಾಹ್ಮಣೊತ್ತಮರೋರ್ವರು ಬಂದು ನಿಮ್ಮ ಮನೋಭಿಲಾಷೆ ಈಡೇರಬೇಕಿದ್ದರೆ ನೀವು ‘ನಾಗ’ ಇರುವ ಒಂದು ಪುಣ್ಯ ಸ್ಥಳದಲ್ಲಿ ಸುಬ್ರಹ್ಮಣ್ಯೇಶ್ವರ ದೇವಾಲಯವನ್ನು ಕಟ್ಟಿಸಬೇಕೆಂದು, ಅದರಿಂದ ನಿಮ್ಮ ಕುಟುಂಬಕ್ಕೆ ಸರ್ವರೀತಿಯಲ್ಲೂ ಒಳಿತಾಗುವುದೆಂದರು. ಅವರ ಮಾತಿನಂತೆ ಹೊನ್ನಾವರ ಮೂಲದವರಾದ ರಮಣೀಯರು 1830 ರಲ್ಲಿ ಶಿರಸಿಗೆ ಬಂದು ನೆಲೆಸಿ, ಇಲ್ಲಿಯೇ ಒಂದು ಸುಬ್ರಹ್ಮಣ್ಯ ಸ್ವಾಮಿಯ ದೇವಸ್ಥಾನವನ್ನು ಕಟ್ಟಿದರು. ಆ ದೇವಾಲಯವೇ ಈಗಿನ ನಿಲೇಕಣಿಯ ಸುಂದರವಾದ ಸುಬ್ರಹ್ಮಣ್ಯೇಶ್ವರ ದೇವಸ್ಥಾನ.

ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ, ನೀಲೇಕಣಿ

ಈಗಿನ ನೀಲೇಕಣಿ ಕುಟುಂಬದವರ ಪೂರ್ವಜರಾದ ರಮಣೀಯ ಅವರು, ಅವರ ಸಂಸಾರ ಸಮೇತ ಇಲ್ಲಿಗೆ ಬಂದು,ಸುಬ್ರಹ್ಮಣ್ಯೇಶ್ವರನನ್ನು ತಮ್ಮ ಮನೆದೇವರಾಗಿ ಪೂಜೆಮಾಡತೊಡಗಿದರು. ಅದರ ಫಲವಾಗಿ ಅವರಿಗೆ ಗಂಡುಮಗುವಿನ ಜನನವೂ ಕೂಡ ಆಯಿತು. ತದನಂತರದಲ್ಲಿ ನೀಲೇಕಣಿ ಕುಟುಂಬದವರ ಜೊತೆಗೆ ಸುತ್ತಮುತ್ತಲಿನ ಅನೇಕ ಕುಟುಂಬಗಳೂ ದೇವರ ಆರಾಧನೆಯಲ್ಲಿ ತೊಡಗಿದವು. ಮತ್ತು ದೇವಸ್ಥಾನದ ಭಕ್ತರಾದರು.
ಹೀಗೆಯೇ ಸಾಗುತ್ತಿರುವಾಗ ಅಂದಾಜು 50 ವರ್ಷಗಳ ನಂತರ ಅಂದರೆ, 1883 ಸುಮಾರಿಗೆ ಈ ಸುಬ್ರಹ್ಮಣ್ಯೇಶ್ವರ ದೇವರ ರಥೋತ್ಸವ ಆರಂಭಗೊಂಡಿತು. ಸಾಮಾನ್ಯವಾಗಿ ವಾಡಿಕೆಯಂತೆ ಮಾರ್ಗಶಿರ ಮಾಸ ಶುಕ್ಲಪಕ್ಷದ ಷಷ್ಠಿಯಂದು ನಡೆಯುವ ನೀಲೇಕಣಿ ತೇರು. ಇದು ಇಂದು ಕೇವಲ ಒಂದು ಕುಟುಂಬದ ತೇರಾಗಿ ಉಳಿದಿಲ್ಲ. ಬದಲಾಗಿ ಇಡಿ ನೀಲೇಕಣಿ ಊರಿನ, ಶಿರಸಿ ನಗರದ ಎಲ್ಲ ಜನರ ಹಬ್ಬವಾಗಿ ನಿತ್ಯಜೀವನದಲ್ಲಿ ಪ್ರತಿವರ್ಷ ನಡೆದುಕೊಂಡು ಬರುತ್ತಿದೆ.

ಈ ತೇರು ಅರಂಭಗೊಳ್ಳುವ ಮೊದಲನೇ ದಿನ, ನಿಲೇಕಣಿ ಕುಟುಂಬದವರು ಹಾಗು ನೆಂಟರಿಷ್ಟರೆಲ್ಲರೂ ಜೊತೆಯಾಗಿ ವನಭೋಜನವನ್ನು ನಡೆಸುತ್ತಾರೆ. ನಂತರ ಗರುಢಸ್ಥಾಪನಾ ಅಂದರೆ ಧ್ವಜಾರೋಹಣ ಕಾರ್ಯಕ್ರಮದ ಮೂಲಕ ತೇರಿನ ವಿಧಿ-ವಿಧಾನಗಳು ತೆರೆದುಕೊಳ್ಳುತ್ತವೆ. ಆ ದಿನ ಸಂಜೆ ದೇವರ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ನೀಲೇಕಣಿಯಿಂದ ಭೀಮನಗುಡ್ಡಕ್ಕೆ ಹೊತ್ತೊಯ್ಯಲಾಗುತ್ತದೆ. ಎರಡನೇ ದಿನ ಲಾಲ್ಲಕ್ಕಿಯಲ್ಲಿ ಸುಬ್ರಹ್ಮಣ್ಯೇಶ್ವರ ಸ್ವಾಮಿಯನ್ನು ಕೂರಿಸಿ, ಶಿರಸಿ ನಗರದ ರಾಯರಪೇಟೆ, ಸಿಂಪಿಗಲ್ಲಿ, ಚನ್ನಪಟ್ಟಣ ಬಜಾರ್, ನಾಡಿಗಲ್ಲಿ, ಬಸ್ ನಿಲ್ದಾಣ ವೃತ್ತ, ಮಾರಿಗುಡಿ, ವೀರಭದ್ರಗಲ್ಲಿಯ ಮೂಲಕ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮುನಃ ನೀಲೇಕಣಿಯ ಮರಳಲಾಗುತ್ತದೆ.

ಹೂವಿನ ತೇರು: 

ತೇರಿನ ಮೂರನೇ ದಿನ ಸ್ವಲ್ಪ ವಿಶೇಷ ಆಚರಣೆಯಿರುತ್ತದೆ. ಎಲ್ಲಕಡೆಗಳಲ್ಲೂ ತೇರನ್ನು ಸಾಮಾನ್ಯವಾಗಿ ಹಿರಿಯರು ಎಳೆಯುತ್ತಾರೆ. ಮಕ್ಕಳು ದೂರದಿಂದ ನಿಂತು ಕೇವಲ ನೋಡುತ್ತಿರುತ್ತಾರೆ. ಆದರೆ ಇಲ್ಲಿಯ ವಿಶೇಷವೆಂದರೆ, ಮಕ್ಕಳಿಗಾಗಿಯೇ ಹೂವಿನ ತೇರನ್ನು ಸಿದ್ದಗೊಳಿಸಿ ಅದನ್ನು ಕೇವಲ ಮಕ್ಕಳಿಂದ ಎಳೆಸಲಾಗುತ್ತದೆ. ಆ ಮೂಲಕ ಮಕ್ಕಳಿಗೂ ದೇವರ ತೇರನ್ನು ಎಳೆದ ಕುಷಿ ದೊರೆಯುತ್ತದೆ.

ಇನ್ನು ನಾಲ್ಕನೇಯ ದಿನ ಚಂಪಾಷಷ್ಠಿಯ ದಿನ. ಈದಿನ ಅಡಿಕೆ ಮರದಿಂದ ವಿಶಿಷ್ಟವಾಗಿ ಅಲಂಕೃತಗೊಂಡ ದೊಡ್ಡ ತೇರು ನಗರದ ಜನತೆಯನ್ನು ಸರ್ವರೀತಿಯಲ್ಲೂ ಬೆರಗುಗೊಳಿಸುತ್ತದೆ. ಆದಿನ ಮಧ್ಯಾಹ್ನ ಒಂದು ಘಂಟೆ ನಂತರ ಮಹಾಪೂಜೆ ನಡೆಯಲಿದ್ದು, ನಂತರದಲ್ಲಿ ಭಕ್ತಾದಿಗಳಿಗೆ ರಥವೇರಿ ದೇವರ ದರ್ಶನಕ್ಕೆ ಅವಕಾಶ ದೊರೆಯುತ್ತದೆ. ಮಧ್ಯರಾತ್ರಿ 12 ಗಂಟೆಯ ನಂತರ ರಥವನ್ನು ಭಕ್ತಾದಿಗಳು ಎಳೆಯುತ್ತಾರೆ. ಹಾಗೆಯೇ ಪಾರಂಪರಿಕವಾಗಿ ಮೃಗಭೇಟೆಯೂ ನಡೆದುಬಂದಿದೆ. ದೇವಾಲಯದ ಎದುರಿನ ಕೆರೆಯಲ್ಲಿ ದೇವರನ್ನು ಕೂರಿಸಿ 7 ಸುತ್ತು ನೀರಾಟ ಮಾಡಿಸಲಾಗುತ್ತದೆ. ಕೊನೆಯ ದಿನ ಪೂಜೆಯ ನಂತರ ಓಕೂಳಿ ಆಟವು ನಡೆಯುತ್ತದೆ.

ತೇರಿನ ನಿರ್ಮಾಣ : ಚಂಪಾಷಷ್ಠಿಯ ದಿನ ಎಳಯಲ್ಪಡುವ ತೇರನ್ನು ಪ್ರತಿವರ್ಷ ಹೊನ್ನಾವರ ತಾಲೂಕಿನ ಹೊಸಾಡು ಊರಿನ ಹನುಮಂತ ಗೌಡ ಎಂಬುವವರು ಕಟ್ಟುತ್ತಾರೆ. ಮೋದಲನೇ ದಿನ ಆರಂಭಗೊಂಡು ಮೂರು ದಿನದೊಳಗೆ ಅಂದರೆ ಚಂಪಾಷಷ್ಠಿಯ ಮುನ್ನಾದಿನ ತೇರು ಕಟ್ಟುವಿಕೆಯ ಕಾರ್ಯ ಮುಗಿಯುತ್ತದೆ.

ದಿ. 3 ರಂದು ನಿರ್ಮಾಣ ಹಂತದಲದಲಿದ್ದ ತೇರು.

ನೀಲಕಣಿ “ನೀಲೇಕಣಿ”ಯಾಯಿತು:  ಈ ದೇವಾಲಯ ಹಾಗು ಸುತ್ತಲಿನ ಸ್ಥಳವನ್ನು ಒಮ್ಮೆ ಸರಿಯಾಗಿ ನೋಡಿದಾಗ, ಒಂದು ಕಡೆ ಭೀಮನಗುಡ್ಡ ಇರುವ ಕಣಿವೆ ಪ್ರದೇಶ ಹಾಗು ಮತ್ತೊಂದೆಡೆ ಲಿಂಗದಕೋಣದ ಕಣಿವೆ ಪ್ರದೇಶ ಕಂಡುಬರುತ್ತದೆ. ಅಂದರೆ ಎರಡು ಕಣಿವೆಗಳ ನಡುವೆ ಈ ಪ್ರದೇಶ ಇದ್ದು, ಅಲ್ಲಿಂದ ಆಗಸವನ್ನು ನೋಡಿದಾಗ ಪೂರ್ತಿ ನೀಲಿಯಾಗಿ ಗೋಚರಿಸಿದ್ದರ ಪರಿಣಾಮವಾಗಿ ಈ ಪ್ರದೇಶಕ್ಕೆ “ನೀಲಕಣಿ” ಎಂಬ ಹೆಸರು ಬಂದದ್ದು. ಕಾಲಾಂತರದಲ್ಲಿ ಅದು ನೀಲೇಕಣಿಯಾಗಿ ಬದಲಾಯಿತು.

ನೀಲೇಕಣಿ ಮನೆತನದವರ ಮಾತು: ಈ ದೇವಾಲಯವು ನಮ್ಮ ಮನೆಯ ದೇವರಾಗಿದ್ದರೂ, ನಗರದ ಎಲ್ಲ ಭಕ್ತರು ಇಲ್ಲಿ ಬಂದು ಪೂಜೆ ಸಲ್ಲಿಸುತ್ತಿದ್ದಾರೆ. ಅಲ್ಲದೇ ತೇರಿನ ಸಮಯದಲ್ಲಿ ಇದು ಇಡಿ ನೀಲೇಕಣಿ ಊರಿನ ತೇರಾಗಿ ಬಹಳ ಸಡಗರ-ಸಂಭ್ರಮದಿಂದ ನಡೆಯುತ್ತಿದೆ. ಸುಬ್ರಹ್ಮಣ್ಯೇಶ್ವರ ದೇವರು ನಾಡಿನ ಸಕಲರಿಗೂ ಒಳಿತನ್ನುಂಟು ಮಾಡಲಿ ಎಂಬುದು ನಮ್ಮ ಪ್ರಾರ್ಥನೆಯಾಗಿದೆ.

ಓದುಗರ ಗಮನಕ್ಕೆ: ಈ ಮೇಲಿನ ಎಲ್ಲ ಮಾಹಿತಿಗಳು ಶ್ರೀ ಸುಬ್ರಹ್ಮಣ್ಯೇಶ್ವರ ದೇವಾಲಯದ ಮೋಕ್ತೇಸರರಾದ ಉದಯ ನೀಲೇಕಣಿ ಅವರ ಪುತ್ರ “ಜಯದೇವ್ ನೀಲೇಕಣಿ” ಅವರ ಜೊತೆ ನವೆಂಬರ್ 3ರಂದು ಶಿರಸಿ ನೌ ನಡೆಸಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾಗಿದೆ.

sirsinow.com

Categories: ಜಿಲ್ಲಾ ಸುದ್ದಿ

2 Comments

  1. ವಿನಾಯಕ ಭಟ್.ಬಿಸಲಕೊಪ್ಪ

    ಉತ್ತಮ ವರ್ಣನೆ.ಪ್ರತಿ ಆಚರಣೆಗಳ ಹಿಂದೆಯೂ ಇತಿಹಾಸವೊಂದು ಇದ್ದೇ ಇರುತ್ತದೆ.ಕುತೂಹಲಕ್ಕಾಗಿ ಅದನ್ನು ತಿಳಿಯಬಹುದು.ಎಲ್ಲ ಆಚರಣೆಗಳೂ ನಂಬಿಗೆಯ ಮೂಲದಿಂದ ಬಂದಿದ್ದು.ನಂಬಿ,ಆಚರಿಸಿ,ಸಂಭ್ರಮಿಸಿ.ಇನ್ನೊಬ್ಬರ ಬದುಕಿಗೆ ಅಡಚಣೆಯಾಗದಂತೆ.
    ವಿನಾಯಕ ಭಟ್.ಬಿಸಲಕೊಪ್ಪ.

    Reply

Leave A Reply

Your email address will not be published.