ಸ್ನೇಹ ಚಿರಂತನ!

ಸ್ನೇಹ! ಪದದ ಮೋಡಿಯೇ ಬೇರೆ. ಅದರ ಮಹತ್ವವೂ ಭಿನ್ನ. ಸ್ನೇಹ ಸಿಂಚನದ ಅನುಭವ, ಆನಂದ ಅನುಭವಿಸಿದವರಿಗಷ್ಟೇ ಮೀಸಲು. ಗೋಲಿ, ಬುಗುರಿ, ಲಗೋರಿ, ಕುಂಟೆಬಿಲ್ಲೆ ಆಡುವುದು, ಮರಕೋತಿ ಆಡುವುದು… ಇವುಗಳ ಜೊತೆಜೊತೆಯಾಗಿಯೇ ಬೆಳೆಯುತ್ತ ಬರುವ ಎಳೆಯ ಪ್ರಾಯದ ಸ್ನೇಹ ಶಾಲಾ ಮಟ್ಟದಲ್ಲಿ ವಿಶಾಲವಾಗಿ ಹರಡಿ ನಂತರದ ದಿನಗಳಲ್ಲಿ ತೆಳುವಾಗಿ ಬದುಕಿನ ಜರಡಿಯ ಸಂದುಗಳಲ್ಲಿ ಸೋರಿ ಹೋಗಿಬಿಡುವುದು ಸಹಜ.
ಇದನ್ನೂ ಮೀರಿ ಉಳಿದುಕೊಳ್ಳುವ ಸ್ನೇಹ ನಿರಂತರ. ಚಿರನಿದ್ರೆಯವರೆಗೂ! ಆದರೆ ಆ ಅಪರಿಚಿತ ಇಬ್ಬರ ನಡುವೆಯೂ ಸ್ನೇಹ ದೀರ್ಘ ಕಾಲದವರೆಗೆ ಉಳಿದುಕೊಳ್ಳಲು ಇಬ್ಬರ ನಡುವಿನ ಹೊಂದಾಣಿಕೆ, ಸಾಮರಸ್ಯ ಬಹು ಮುಖ್ಯವಾದದು.

friendship-hands-joined
ಹೀಗಿದ್ದರೂ ತನ್ನ ಇರುವಿಕೆಯ ಸಮಯದಲ್ಲಿ ಸ್ನೇಹ ನೀಡುವ ಮುದವೇ ಬೇರೆ. ಜಗಳ, ತಂಟೆ, ಪ್ರೀತಿ, ಹೊಟ್ಟೆಕಿಚ್ಚು, ಹೋಲಿಕೆ, ಹಾಗು ಏಳು ಬೀಳುಗಳ ನಡುವೆ ಕಳಚಿ ಬೀಳುವ ಇಬ್ಬರ ಮುಖವಾಡ. ಮನೆಯವರ ಬಳಿ ಹೇಳಿ, ಹಂಚಿಕೊಳ್ಳಲಾಗದ್ದನ್ನು ವ್ಯಕ್ತಗೊಳಿಸಿಕೊಳ್ಳುವ ವೇದಿಕೆ. ಅನುಗಾಲ ಜೊತೆಗಿರುವ ಮನೆಯವರಿಗಿಂತ ದಿನದ ಕೆಲವು ಸಮಯ ಒಡನಾಡಿಯಾಗುವ ಸ್ನೇಹಕ್ಕೆ ಹೆಚ್ಚು ಮಹತ್ವ.
ಕಾಲೇಜಿನ ಎಲ್ಲ ಮಜಲುಗಳನ್ನು ದಾಟಿ ನೌಕರಿ ಹಿಡಿದಾಗಲೂ ವಾರಕ್ಕೊಮ್ಮೆ ಸ್ನೇಹಿತರೊಂದಿಗೆ ಒಂದಷ್ಟು ಹರಟಿದರೇ ಸಮಾಧಾನ. ಇಲ್ಲಿ ಗಂಡು ಹೆಣ್ಣು ಎಂಬ ಲಿಂಗ ಬೇಧಕ್ಕೆ ಅವಕಾಶವೇ ಇಲ್ಲ. ಅವರವರ ಕಲ್ಪನೆ ಕನಸುಗಳ ಮೂರ್ತರೂಪವೇ ಸ್ನೇಹ.
ಸ್ನೇಹದ ಅನುಭವಗಳು ಅನೇಕ. ಕಂಡು ಕಾಣದಂತೆ ಮುಖ ತಿರುಗಿಸಿ ಹೋಗುತ್ತಿರುವಾಗ ಕೂಗಿ ಬಳಿ ಕರೆದು ಕೈ ಹಿಡಿದು ಮಾತನಾಡಿಸುತ್ತದೆ ಸ್ನೇಹ. ಸೋತು ಹತಾಶಳಾದಾಗ ಗೆಲುವಿನ ಮೆಟ್ಟಿಲನ್ನು ತೋರಿ ಸಂತೈಸುತ್ತದೆ. ನೋವು ನಲಿವಿನಂತಿದ್ದು, ಬಂಧುವಂತೆ ಜೊತೆಗಿದ್ದು ಜೀವನ ಎದುರಿಸಲು ಕಲಿಸುತ್ತದೆ.
ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಒಂದು ದಿನ ಎದುರಾಗಿ ಮುಗುಳ್ನಗುವಲ್ಲಿ ಪರಿಚಯವಾಗಿ ಕಣ್ಣಲ್ಲಿ ಬೆಳೆದು ಮಾತಲ್ಲಿ ಹೆಮ್ಮರವಾಗಿ ಜೀವಕ್ಕೆ ಜೀವ ಎಂಬಂತೆ ಬೆಸೆಯುವುದೇ ಸ್ನೇಹ. ಎರಡು ಭಿನ್ನ ಲಿಂಗಗಳ ಬಂಧ ಎಂದರೆ ಪ್ರೀತಿ ಒಂದೇ ಅಲ್ಲ. ಸ್ನೇಹವೂ ಆಗಿರಬಹುದು.
ಸ್ನೇಹ ಎಂಬುದು ಬಣ್ಣಿಸಲಾಗದ ಸುಮಧುರ ಸಂಬಂಧ. ಇದು ಸರೋವರಗಳ ಸಿಹಿ ನೀರಿಗಿಂತ ಸಿಹಿ. ಬಿಳಿ ಬಣ್ಣದ ಶುದ್ದತೆಗಿಂತ ಶುದ್ದ. ಪುಟ್ಟದೊಂದು ಮಳೆ ಹನಿ ಕೂಡ ಸ್ನೇಹ ಎಂಬ ಸೆರೆಗೆ ಸಿಕ್ಕಿ ಸ್ವಾತಿ ಮುತ್ತಾಗಬಹುದು. ಇದು ಬೆಲೆ ಕಟ್ಟಲಾಗದ ಪ್ರಕೃತಿದತ್ತ ಕೊಡುಗೆ. ರೂಪವಿಲ್ಲದ ಅಧ್ಬುತ ರೂಪ.
ಗೆಳತಿಯರಿಲ್ಲದ ಜೀವನ ಚುಕ್ಕಿ ಚಂದ್ರರಿಲ್ಲದ ಆಗಸದಂತೆ. ಎಲ್ಲಕ್ಕೂ ಮಿಗಿಲಾಗಿ ಭಗ್ನ ಪ್ರೇಮಿಗೆ ಬೇಕು ಸ್ನೇಹ, ಕಾರಣ ಪ್ರೀತಿಯ ಬಲೆಯಲ್ಲಿ ಬಿದ್ದಾಗ ಹುಚ್ಚು ಮನಸ್ಸು ಕುರುಡಾಗಿದ್ದು ಎನನ್ನೋ ಮಾಡಿಸಿಬಿಡುತ್ತದೆ. ಹೀಗಿರುವಾಗ ಬೆಳಕಿನಂತೆ ಮನ್ನಡೆಯ ಹಾದಿ ತೋರಿಸಲು, ಜೀವಕ್ಕೆ ಜೀವ ಕೊಡುವಂತವಳು ಬೇಕು ಗೆಳತಿ. ಹಾಗಾಗಿ ಸ್ನೇಹ ಪರಿಶುದ್ದ. ಕಳೆದುಕೊಳ್ಳಬೇಡಿ ಮೂರ್ಖತನದಿಂದ.
• ಸ್ನೇಹವನ್ನು ಕಳೆದುಕೊಳ್ಳಬೇಡಿ, ಸ್ನೇಹ ಮಾರ್ಪಾಟಾಗಿ ಪ್ರೀತಿ ಮಾಡಿಕೊಂಡಾಗ.
• ಕಳೆದುಕೊಳ್ಳಬೇಡಿ, ಬೇರೆಯವರ ಮುಂದೆ ಸ್ನೇಹಿತೆಯ/ತನ ಚಾಡಿ ಹೇಳುವುದರಿಂದ.
• ಕಳೆದುಕೊಳ್ಳಬೇಡಿ, ಹೊಟ್ಟೆಕಿಚ್ಚು ಮಾಡುವದರಿಂದ.
• ಕಳೆದುಕೊಳ್ಳಬೇಡಿ, ಅವಳ/ನ ಶ್ರೀಮಂತಿಕೆಯನ್ನು, ಸೌಂದರ್ಯವನ್ನು ಕಂಡು/ ತಮಗೆ ಹೋಲಿಸಿಕೊಂಡು.
• ಕಳೆದುಕೊಳ್ಳಬೇಡಿ ಬೇರೆಯವರ ಪಿಸುಮಾತನ್ನು ಕೇಳಿ.
ಇದಕ್ಕೂ ಮೀರಿ ಚಿರಕಾಲ ಉಳಿದುಕೊಳ್ಳುವ ಸ್ನೇಹ ಚಿರಂತನವಾಗಿರುತ್ತದೆ. ಆದರೆ ಅದು ತುಂಬಾ ವಿರಳ.

 
ಸುಷ್ಮಾ ಉಪ್ಪಿನ. ಇಸಳೂರ
ಪತ್ರಿಕೋದ್ಯಮ ವಿಭಾಗ.
ಪ್ರಥಮ ಎಂ.ಸಿ.ಜೆ
ಎಸ್.ಡಿ.ಎಂ. ಕಾಲೇಜು ಉಜಿರೆ.

Categories: ಹರಿತ ಲೇಖನಿ

Tags:

Leave A Reply

Your email address will not be published.