ಅಡಿಕೆ ದರ ಕುಸಿತ : ಆಮದು ನಿರ್ಭಂಧಕ್ಕೆ ಕೇಂದ್ರಕ್ಕೆ ಮನವಿ

ಶಿರಸಿ : ರಾಜ್ಯದಲ್ಲಿ ಬರದ ಪರಿಸ್ಥಿತಿ ಎದುರಾಗಿರುವ ಬೆನ್ನಲ್ಲೆ ಸದಾ ತಂಪಿನಲ್ಲಿರುವ ಮಲೆನಾಡಿನ ರೈತರಿಗೆ ಅಡಿಕೆ ದರ ಕುಸಿತದ ಬಿಸಿ ಮುಟ್ಟಿದೆ. ಕಡಿಮೆ ಫಸಲು, ಕೊಳೆರೋಗ, ಅಡಿಕೆ ಕಸುಬುದಾರರ ಸಮಸ್ಯೆಯ ಜೊತೆಗೆ ಇತ್ತೀಚಿಗೆ ಮಾರುಕಟ್ಟೆಯಲ್ಲಿ ಅಡಿಕೆ ದರ ಕುಸಿತವು ರೈತರ ನಿದ್ರೆ ಕೆಡಿಸಿದೆ ಎಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ಅಡಿಕೆ ಬೆಳೆಯುವ ಪ್ರದೇಶದ ಸಂಸದರು ಹಾಗು ರಾಜ್ಯದ ಅಡಿಕೆ ಮಾರಾಟ ಸಹಕಾರ ಸಂಘಗಳ ಪ್ರತಿನಿಧಿಗಳ ನಿಯೋಗ ದಿನಾಂಕ ೧೦ ಗುರುವಾರದಂದು ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ ಮನವಿಯನ್ನು ನೀಡಿತು.ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ಥೈಲ್ಯಾಂಡ್, ಮಲೇಶಿಯಾ ಇನ್ನೀತರ ದೇಶಗಳಿಂದ ಅತ್ಯಂತ ಕಡಿಮೆ ದರಕ್ಕೆ ಕಳಪೆ ಗುಣಮಟ್ಟದ ಅಡಿಕೆಗಳು ಆಮದಾಗುತ್ತಿದ್ದು, ಇದು ಸ್ಥಳಿಯ ಅಡಿಕೆ ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಿದೆ. ರೈತರ ಹಿತ ಕಾಪಾಡುವಲ್ಲಿ ಕೇಂದ್ರ ಸರಕಾರ ಈ ಕುರಿತು ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿಕೊಂಡರು.

Delhi (1)

 

ನಂತರ ಹರಿಯಾಣದ ಮುಖ್ಯಮಂತ್ರಿ ಮನೋಹರ ಲಾಲ್ ಕಟ್ಟರ್ ಅವರನ್ನು ಭೇಟಿ ಮಾಡಿದ ನಿಯೋಗ ಹರಿಯಾಣದಲ್ಲಿ ಪಾನ್ ಮಸಾಲ ಹಾಗೂ ಸಿಹಿ ಅಡಿಕೆಗಳ ಮೇಲಿನ ನಿರ್ಭಂಧವನ್ನು ಕೈಬಿಡುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಹರಿಯಾಣ ಮುಖ್ಯಮಂತ್ರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು. ನಿಯೋಗದಲ್ಲಿ ಟಿಎಸ್ಎಸ್ ಅಧ್ಯಕ್ಷರಾದ ಶಾಂತಾರಾಮ ಹೆಗಡೆ, ಶಿವಮೊಗ್ಗದ ಕೆ ಆರ್ ಎಮ್ ಅಧ್ಯಕ್ಷ ಎಚ್ಎಸ್ ಮಂಜಪ್ಪ, ಬಿ ಎಸ್ ಯಡ್ಯೂರಪ್ಪ, ಪ್ರತಾಪ ಸಿಂಹ, ಟಿ ಎಸ್ ಎಸ್ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ಇನ್ನೀತರರಿದ್ದರು.

Categories: ಜಿಲ್ಲಾ ಸುದ್ದಿ

Leave A Reply

Your email address will not be published.