ನನಗೆ ಹೇಳದೇ ಚಂದಮಾಮನಲ್ಲಿ ಒಂದಾಗಿದ್ದಳು !

ಅಮ್ಮಾ ನೆನಪಾಗಲು ಕಾರಣಗಳು ಬೇಕಾಗಿಲ್ಲ. ಅವಳು ನನ್ನೊಂದಿಗೇ ಇದ್ದಾಳೆಂದರೆ ಹಳೇಯ ನೆನಪುಗಳಿಂದಲೇ.
ಪಕ್ಕದ ಮನೆಯ ಹುಡುಗಿಗೆ ಅಪರಿಚಿತ ಹುಡುಗನೊಬ್ಬ ಕೊಡುವ ಕಾಟಕ್ಕೆ ಅವಳು ಅಮ್ಮನ ತೋಳುಗಳಲ್ಲಿ ಬಿಕ್ಕಳಿಸಿ ಅಳುತ್ತಿದ್ದಾಗ ನನಗೆ ಅಮ್ಮ ನೆನಪಾದಳು. ಕಾರಣ ನನ್ನ ಅನುಭವಗಳನ್ನು, ಕಾಲೇಜು ದಿನಗಳನ್ನು ಹೇಳಿಕೊಳ್ಳಲು ನನಗೆ ಅಮ್ಮ ಇಲ್ಲ. ತಪ್ಪುಗಳನ್ನು ತಿದ್ದಿ ತೀಡಲೂ ಇಲ್ಲ.

moon
ಹುಟ್ಟಿನಿಂದ ದೂರವಿದ್ದ ನನಗೆ ಅಮ್ಮನ ಪ್ರೀತಿಯ ಅಭಿರುಚಿ ಗೊತ್ತಿಲ್ಲ. ಅವಳ ವಾತ್ಸಲ್ಯದ ಪ್ರೀತಿ, ನಿಶ್ಕಲ್ಮಶ ಒಲವು ಸೀಗಲೇ ಇಲ್ಲ. ನಾನು ಪ್ರೈಮರಿಯಲ್ಲಿ ಓದುತ್ತಿದ್ದಾಗ ಶಾಲೆಯ ಕೊನೆಯಲ್ಲಿನ ಪಾಲಕರ ಸಭೆಗೆ ಎಲ್ಲರ ತಂದೆ ತಾಯಿ ಬಂದರೆ, ನನ್ನ ತಾಯಿಯೂ ಎಲ್ಲಿದಂಲೋ ಓಡಿ ಬರುವಳೋ ಎಂಬ ಭಾಸ. ಆದರೆ ಅವಳು ಬರವುದಿಲ್ಲ ಎಂದು ನನಗೆ ಗೊತ್ತಿತ್ತು. ನಾಲ್ಕು ಗಂಟೆಯ ಬೆಲ್ ಬಾರಿಸಿದಾಗ ಎಲ್ಲೋ ಉಮ್ಮಳಿಸಿ ಬಂದ ಅಳು ಗಲ್ಲವನ್ನು ಅಂದು ತೋಯಿಸಿತ್ತು.
ಅಜ್ಜಿ ಒಮ್ಮೆ ನನ್ನ ಅಮ್ಮ ಸುರಸುಂದರಿ, ಮಧುಬಾಲದಂತಿದ್ದಳು, ಎಂದು ಹಳೆಯ ನೆನಪು ಕೆದಕುತ್ತಾ ನನಗೆ ಹೇಳುತ್ತಿದ್ದಳು. ನೀಳವಾದ ಉದ್ದ ದೇಹಕ್ಕೆ ಸೀರೆ ಅವಳಿಗೆ ಹೇಳಿಮಾಡಿಸಿದ ಉಡುಪು. ನಿನ್ನಮ್ಮ ಸಾಯುವಾಗ ಹುಡುಗಿಯಂತಿದ್ದಳು. ಮುಖದ ಕೆನ್ನೆಯ ಗುಳಿಗಳಲ್ಲಿ ಜೀವನದ ಆಸೆಯ ನಗು ತುಂಬಿತ್ತು, ಜಿಗುಪ್ಸೆಯ ನೋವುಗಳಿದ್ದವು. ಎಂದು ಕಣ್ಣೀರಿಟ್ಟಳು. ಆದರೆ ಅವಳು ಹೇಳಿದ್ದನ್ನು ಕೇಳಿ ನನಗೆ ದುಃಖವೇ ಆಗಲಿಲ್ಲ. ಕಾರಣ ಆಗ ಅಮ್ಮ ಪದದ ಒಳಾರ್ಥ, ಪ್ರೀತಿ ಒಂದೂ ತಿಳಿದಿರಲಿಲ್ಲ.
ಅವಳು ತೀರಿದಾಗ ನಾನು ಎರಡನೇ ತರಗತಿ ಇದ್ದೆನಂತೆ.ಅವಳು ತೀರಿದದು ದುರಂತವೇ ಸರಿ. ಅಂದು ಹುಟ್ಟಿದಾಗ ಇವಳೇ ನನ್ನಮ್ಮಳೆಂದು ಗುರುತಿಸಲೂ ಆಗದ ಹಸಿಗೂಸು ನಾನು. ಹೇಗೆ ತಾನೇ ತಿಳಿದಾಳು ಇವಳೇ ಎಂದು. ನಾನು ದೊಡ್ಡವಳಾಗುತ್ತಾ ನನ್ನನ್ನು ಅಜ್ಜಿ ಹತ್ತಿರವೇ ಬಿಟ್ಟು ಅಪ್ಪನ ಬಳಿ ಹೋದಳು. ಆದರೆ ಇಂದಿಗೂ ಅವಳ ಧ್ವನಿ ಕಿವಿಯಲ್ಲಿ ಮಾರ್ಧನಿಸುತ್ತಿದೆ.
ಆದರೆ ಬಾಲ್ಯದ ನೆನಪುಗಳನ್ನೇ ಇಟ್ಟುಕೊಂಡು ಅವಳಿಗೆ ಹೊಸ ಆಕಾರವನ್ನು ಕೊಟ್ಟಿದ್ದೆನೆ. ಆ ಆಕಾರವನ್ನೇ ದಿನನಿತ್ಯ ಪೂಜಿಸುತ್ತಿದ್ದೆನೆ. ಕೆಲವೊಮ್ಮೆ ಅಮ್ಮಾ…. ಎಂದು ಕರೆಯಲು ನಾನು ಅರ್ಹಳಲ್ಲ ಎಂದೇ ದೂರವಾದಳಾ? ಅಥವಾ ನನ್ನ ಬಾಯಿಂದ ಕರೆಸಿಕೊಳ್ಳವ ಅದೃಷ್ಟ ಅವಳಿಗಿರಲಿಲ್ಲವಾ? ಅಥವಾ ತಾಯ್ತನವನ್ನು ಅನುಭವಿಸುವ ಬಯಕೆ ಇದ್ದರಲಿಲ್ಲವೆನೋ ಎಂದು ಅನಿಸಿಬಿಡುತ್ತದೆ.
ಅಮ್ಮ ಈಗ ಇದ್ದಿದ್ದರೇ ಹೇಗಿರುತ್ತಿದ್ದಳು. ಎಂದು ಕಲ್ಪಿಸಿದಾಗ ಬೆನ್ನು ಬಾಗಿ ನಡುಗುತ್ತಿರುತ್ತಿದ್ದಳೆನೋ! ಮುಖದ ಮುದುರುಗಳನ್ನು ನಿಧಾನವಾಗಿ ಎಣಿಸಿ ಬಿಡಬಹುದಿತ್ತೆನೋ! ಆ ಕ್ಷಣದಲ್ಲಿ ಅಮ್ಮನ ಬಗ್ಗೆ ನೆನೆದರೆ ಮನದಾಳದಲ್ಲಿರುವ ಅರಹುಗಳು ಎದೆ ತುಂಬಿ ಬಾಯಲ್ಲಿ ಬರುತ್ತವೆ. ಆದರೆ ಇದನ್ನೆಲ್ಲ ಅನುಭವಿಸಲು ಅಮ್ಮ ಅನ್ನವವಳೇ ಇಲ್ಲ. ಅಜ್ಜಿ ಹೇಳಿದಾಗ ಊಹಿಸಿಕೊಳ್ಳವುದಷ್ಟೇ ಅಮ್ಮ ಹೀಗಿದ್ದಳು, ಹಾಗಿದ್ದಳು ಎಂದು. ನನಗೆ ಕೇವಲ ಮನಕಲಕಿಸಿಕೊಂಡು ಅಳುವುದೇ ಕೆಲಸ.
ಒಂದು ಹೆಣ್ಣಿಗೆ ಇರುವ ಸಾಮಾನ್ಯ ಬಯಕೆಗಳೆಂದರೆ ಅಮ್ಮ ಎನಿಸಿಕೊಂಡವಳು ಮದುವೆಯಾಗುವ ವರನನ್ನು ಆರಿಸಿ ಮದುವೆ ಮಾಡಿಸಿ ಮಗುವನ್ನು ಎತ್ತಿ ಆಡಿಸಿ ಆ ಮಗುವಿನ ಬಾಯಿಂದ ಅಜ್ಜಿ ಎಂದು ಕರೆಸಿಕೊಂಡು ಹೆರಿಗೆಯ ಬಾಣಂತನವನ್ನು ಮಾಡಿಸಿ ಗಂಡನ ಮನೆಗೆ ಬಿಳ್ಕೋಡುವ ಸಮಯ ಅನಭವಿಸಬೇಕೆಂಬ ಸಣ್ಣ ಕನಸುಗಳು ನನ್ನ ಜೀವನದಲ್ಲಿ ಜೀವಂತವಾಗಲೇ ಇಲ್ಲ. ಊಹಿಸುವ ಮುಂಚೆಯೇ ಕನಸುಗಳು ಸತ್ತು ಹೋಗಿವೆ.
ನನ್ನ ಕಲ್ಪನೆಯ ಕನಸುಗಳಿಗೆ ರೆಕ್ಕೆ ಪುಕ್ಕ ಹಚ್ಚಿ ಜೀವಂತವಾಗಿಸುತ್ತಾಳೆ ಎಂಬ ಆಸೆ ಯೋಚಿಸುವ ಮೊದಲೇ ಕಮರಿ ಹೋಗಿದೆ.
ಆದರೂ ಅಮ್ಮ ಎಂದರೆ ರೋಮಾಂಚನ, ಮಧುರಭಾವನೆ. ಕಷ್ಟಗಳನ್ನೆಲ್ಲಾ ಬದಿಗಿಟ್ಟು ಯಾವುದೋ ಒಂದು ಹೊಸ ಶಕ್ತಿ ಹುರುದುಂಬಿಸಿದಂತೆ, ಅಮ್ಮನ ತೋಳಗಳಲ್ಲಿ ಮಲಗಿದಂತೆ, ಅವಳು ಚಂದಮಾಮನನ್ನು ತೋರಿಸಿ ನನಗೆ ಸಮಾಧಾನ ಮಾಡಿದಂತೆ ಹೀಗೆ ಒಂದೇ, ಎರಡೇ ಕಲ್ಪನೆಗಳು, ಹೇಳತೀರದು. ಅವಳಿದ್ದರೆ ಪ್ರೀತಿಗೆ ಕೊನೆಯೇ ಇರುತ್ತಿರಲಿಲ್ಲವೆನೋ? ಅವಳ ಮಾತು ಅಮರ ಭಾವನೆ ಅಮರ. ಆದರೆ ಅದರ ಭಾಗ್ಯ ನನಗಿರಲಿಲ್ಲ.
ಅಮ್ಮಾ ಜನ್ಮ ನೀಡಿದಳು ನನಗೆ ಅರಿವಿಲ್ಲದ ವೇಳೆಯಲ್ಲಿ, ನನಗೆ ಅರಿವು ಬಂದಾಗ ಅವಳು ಕಣ್ಣು ಮುಚ್ಚಿ ಚಂದಾಮಾಮನಲ್ಲಿ ಒಂದಾಗಿದ್ದಳು. ಕೊನೆಯಲ್ಲಿ ಮುಂದಿನ ಜನ್ಮವೊಂದಿದ್ದರೆ ದೇವರಲ್ಲೊಂದು ವಿನಮ್ರ ಮನವಿ, ನನ್ನಮ್ಮನನ್ನು ಮರುಕಳಿಸು ಎಂದು.
ಒಂದೇ ಒಂದು ಸಲ ಈಗ ಆಕೆ ಬಂದು, ಒಂದು ದಿನ ನನ್ನೊಂದಿಗೆ ಇದ್ದು ಬಿಟ್ಟರೆ…ಅಂದು ಕೊಳ್ಳುತ್ತೆನೆ. ಆದರೆ ಅದೆಲ್ಲ ಆಗುವ ಮಾತೇ?
ಈ ಲೇಖನವನ್ನು ಒಮ್ಮೇ ಓದಿ, ಒಂದು ದಿನ ಸುಮ್ಮನೆ ನಿಮ್ಮ ಅಮ್ಮನೊಂದಿಗಿರಿ. ನಾನೇಕೆ ಇದನ್ನು ಬರೆದೆ ಎಂಬುದು ನಿಮಗೆ ಅರ್ಥವಾಗುತ್ತದೆ.

-ಸುಷ್ಮಾ ಉಪ್ಪಿನ್, ಇಸಳೂರ

Categories: ಹರಿತ ಲೇಖನಿ

Tags:

Leave A Reply

Your email address will not be published.