ಭಾವ ಮನವ ಸೋಕಿದಾಗ

ಅರಸಿ ಹೊರಟ ಬದುಕಲಿ ‘ಅವಳು’ ಜೀವವಾದಾಗ,ಪ್ರೇಮಿಯೊಬ್ಬ ಒಂಟಿಯಾಗಿರುವಾಗ ಆತ ತನ್ನ ನಿವೇದನೆಯನ್ನು,ಪ್ರಸ್ತುತವನ್ನ ಮೀರಿ ಚಂದದ ಕನಸನ್ನು,ಒಂಟಿಯಿದ್ದರೂ ಮನದಲ್ಲಿ ಬಿಡದೆ ಒಸರುತ್ತಿರುವ ಅವಳ ಪ್ರೇಮದ ಭಾವದ ಒರತೆಯನ್ನ ಹಂಚಿಕೊಂಡ ಪರಿ ಇದು.ಒಂದು ತರ ಇದು ಪ್ರೇಮ ಪತ್ರವಿರಬಹುದು ಅಥವಾ ಚಂದದ ಭಾವನೆಗಳು ತುಂಬಿರುವ ಭಾವ ಪತ್ರವಿರಬಹುದು..ಹೊಗಳಿಕೆಯ ಮೀರಿ,ರೂಪಗಳ ವರ್ಣನೆಯ ಮೀರಿ ತನ್ನನ್ನು ಅವಳ ಪ್ರೇಮಕ್ಕೆ ಅರ್ಪಿಸಿಕ್ಕೊಂಡ ಕ್ಷಣವದು..

” ತಿಳಿಸಂಜೆಯ ಆ ಸಮಯದ ಸೃಷ್ಟಿಯನ್ನು ದೇವರು ನನಗಾಗಿಯೇ ಮಾಡಿದಂತಿತ್ತು. ಆದೇಲ್ಲಿಂದಲೋ ತೂರಿಬಂದ ಗಾಳಿ ನನ್ನನ್ನು ಆವರಿಸಿದಾಗ ನೀನು ಎಲ್ಲವನ್ನೂ ಮೀರಿ ನನ್ನನ್ನು ಆವರಿಸಿದಂತಿತ್ತು. ಮತ್ತೆ ಮೂಡಿದ ಕನಸು ನಂಗೇ ತಿಳಿಯದೇ ನನ್ನನ್ನು ಸಮಾಧಾನಿಸುತ್ತಿದೆಯೋ ಅಥವಾ ತುಂಬಿ ಬಂದು ಮನಸ್ಸು ನನ್ನನ್ನು ಮೌನಿಯಾಗಿಸಿದೆಯಾ?ತಿಳಿಯುವ ಹಂಬಲವೇ ಇಲ್ಲ.ನಾವಿಬ್ಬರೇ ಇದ್ದು ಆದರೆ ಮಾತೆ ಇರದ ಆ ಕ್ಷಣಕ್ಕೂ,ನೀನಿರದ  ಆದರೆ ಮಾತಾಡಬೇಕೆಂಬ ನನ್ನ ಹಂಬಲದ ಈ ಕ್ಷಣಕ್ಕೂ ತಾಳೆಯಗುತ್ತಲೇ ಇಲ್ಲವಲ್ಲ.ನೀನಿರಬೇಕು,ಎಲ್ಲವನ್ನೂ ಮೀರಿ!! ನಮ್ಮಿಬ್ಬರ ಮೌನ ಆ ನೋಟದಲ್ಲೇ ಕರಗಿಹೋಗಬೇಕು,ಮಾತೇ ಇರದಿದ್ದರೂ ಚಿಂತೆಯಿಲ್ಲ,ದೂರ ನಿಂತರೂ ಚಿಂತೆಯಿಲ್ಲ, ಬೀಸಿ ಬಂದ ಆ ಗಾಳಿ ನಿನ್ನ ಸೋಕಿ ನನ್ನನ್ನು ಹಾಗೆಯೇ ಹಾದು ಹೋದರೂ ಸಾಕು ಅದೇನೋ ಭಾವ ನನ್ನನ್ನು ಆವರಿಸಿಬಿಡುತ್ತದೆ. ರೂಪ,ಬಣ್ಣ,ಸ್ಪರ್ಶ,ಕನಸು,ಆಸೆ ಇವೆಲ್ಲವನ್ನೂ ಮೀರಿ ನಿಲ್ಲುವ ಆ ಕಾಲ ಅದು ತೀರ ಆತ್ಮೀಯ. ಎಷ್ಟು ಬರೆದರೂ ಕಾಲಿಯಾಗದ ಅಕ್ಷರಗಳ  ಸಮ್ಮಿಲನದಂತೆ ನಮ್ಮಿಬ್ಬರ ಆ ಪ್ರಸ್ತುತಿ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಒಬ್ಬನೇ ನಗಬಲ್ಲೆ ನಿನ್ನನ್ನು ನೆನೆದು,ಮತ್ತೆ ಮತ್ತೆ ಅಳಬಲ್ಲೆ ನೀನು ನನ್ನ ಪ್ರೀತಿಸಿದ ಆ ಕ್ಷಣಗಳ ಸೆರೆಯಲ್ಲಿ ಬಂಧಿಯಾಗಿ. ಒಂದಿಷ್ಟು ಕನಸುಗಳು ನನ್ನನ್ನು ಆವರಿಸಿದಾಗ ಮನಸ್ಸು ಆದ್ಯಾವುದೋ ಭಾವಲೋಕಕ್ಕೆ ನನ್ನನ್ನು ಎಳೆದುಕೊಂಡು ಸಾಗುತ್ತದೆ. ಅದೊಂದು ಕನಸು ಅದು ನನಗೆ ಮತ್ತು ಕೇವಲ ನಿನಗೇ ಮಾತ್ರ ಮೀಸಲು.ಅದೊಂದು ತೀರ ಅಲ್ಲಿ ನಾವಿಬ್ಬರೇ ಇರಬೇಕು.ಚಂದಿರ,ನಕ್ಷತ್ರ ಜೊತೆಗೆ ನಿನ್ನ ರೂಪಕ್ಕೆ ಮೆರಗು ನೀಡಲು ಚಂದದ ಬೆಳದಿಂಗಳು.ಇಬ್ಬರೇ ಕೂತು ಆಕಾಶ ನೋಡುತ್ತಾ ನೆನಪುಗಳ ಲೋಕಕ್ಕೆ ಹೊರಳುತ್ತಿರಬೇಕು.ಎಣಿಸಿದಷ್ಟೂ ಮುಗಿಯದ ನಕ್ಷತ್ರಗಳು.ಅದೇಲ್ಲಿಂದಲೋ ನೀನು ಬಂದೆ,ಚಂದದ ಕನಸುಗಳನ್ನು ಮತ್ತು ಕೇವಲ ನನ್ನದೆನ್ನುವಂತಿದ್ದ ಭಾವನೆಗಳನ್ನೂ ಹೊತ್ತು. ಮಾತುಗಳನ್ನು ಮೀರಿದ್ದು,ಮೌನಕ್ಕೆ ತೀರ ಹತ್ತಿರವೆನಿಸಿದರೂ ಕಣ್ಣುಗಳು ಬಿಡದೇ ಮಾತಾಡುತ್ತಿದೆ ಎಂಬಂತಿದ್ದ ಕಾಲವನ್ನು ಹೊತ್ತು.ನೀನು ಕೇವಲ ನಾನಿರುವ ಆ ಕ್ಷಣಕ್ಕೆ ಬಂದರೆ ಸಾಕು.ಹೌದು ಅದು ಇದೇ ಲೋಕ ಆದರೆ ಎಲ್ಲವನ್ನೂ ಮೀರಿ ನಾನು ಮತ್ತು ನೀನಿರುವ ಚಂದದ ಲೋಕ.

”ಸೂಜಿಗಲ್ಲಾಗಿರುವೆ ಸೆಳೆದು ನಿನ್ನಯ ಕಡೆಗೆ ಗರಿಗೆದರಿ ಕನಸುಗಳು ಮೂಡುತಿಹುದು” ಹೌದು ಈ ಹಾಡು ಬಿಡದೇ ಆವರಿಸುತ್ತಿದೆ. ನಿವೇದಿಸಿದಾಗ ಮೌನಿಯಾಗಿದ್ದೆ ನೀನು ಆದರೆ ಅದೆಲ್ಲವನ್ನು ಮೀರಿ ಧ್ಯಾನಿಯಾಗಿದ್ದೆ ನಾನು. ನಾ ಬರೆದ ಕವನದ ಸಾಲು ನನ್ನನ್ನೇ ಅಣಕಿಸುವ ಕಾಲ ಮುಗಿದಿದೆಯೋ?ಅಥವಾ ಕವನದ ಸೆರೆಯಲಿ ಬಂಧಿಯಾಗಿ ನಾನೇ ಕರಗಿ ಹೋಗಲೋ?ಮಾಧವನ ಕೊಳಲ ನಾದಕೆ ಅದೆಲ್ಲಿಯೋ ಇರುವ ರಾಧೆಯ ಮನ ಮಿಡುಯುತ್ತಿರುವಂತೆ,ರಾಧೆಯ ಮನದೊಳಗಿನ ಭಾವವೇ ಮಾಧವನ ಕೊಳಲ ನಾದಕ್ಕೆ ಜೀವ ತುಂಬುವಂತೆ,ಭಾವನೆಗಳ ಈ ಲೋಕದ ಸೃಷ್ಟಿ ನಮಗೇ ಗೊತ್ತಿಲ್ಲದೆ ನಾವೇ ಸೃಷ್ಟಿಸಿಕೊಂಡಿದ್ದೋ?ಬರೆದ ಸಾಲುಗಳು ನನ್ನನ್ನು ಮೀರಿದ್ದು,ನಿನ್ನೊಳಗೆ ಲೀನವಾದಾಗ ಎಲ್ಲವನ್ನೂ ಮೀರಿ ಸೃಷ್ಟಿಯಾಗಿದ್ದು.ಸ್ವರದೊಳಗಿನ ಭಾವ ತರಂಗ ನೀನು.

ಹನಿಯೊಂದು ಆ ಎಲೆಯ ಜೊತೆ ಕಾದಾಡುತ್ತಿತ್ತು.. ಅವರಿಬ್ಬರಲ್ಲಿ ಕೊನೆಗೆ ಗೆದ್ದವರಾರು??ಗೊತ್ತಿಲ್ಲ.. ಆದರೆ ನಾನಂತೂ ಸೋತಿದ್ದೆ ಬಿಡದೇ ಸುರಿಯುತ್ತಿದ್ದ ಮಳೆಯ ನೋಡುತ್ತಾ,ನೀನೀರದ ಆ ಕ್ಷಣವೂ ಸುಂದರ ಎನ್ನಿಸುವಂತೆ ಮಾಡಿದ್ದ ಆ ನೆನಪಿಗೆ ಸೋತಿದ್ದೆ. ಆ ಹಸಿರಾದ ಎಲೆಯನ್ನು ಮಳೆಹನಿ ಸೋಲಿಸುತ್ತಿದೆಯೋ ಅಥವಾ ಮಳೆಹನೀಯನ್ನೇ ಎಲೆ ಸೋಲಿಸುತ್ತಿದೆಯೋ ನಾನಂತೂ ಅರಿಯೇ…ಆದರೆ ನನ್ನನ್ನ ಸೋಲಿಸಿದ್ದು ನಿನ್ನ ನೆನಪು,ನಿನ್ನ ನಗು,ನಿನ್ನ ಆ ನೋಟ..ಬಾಳಲಿ ಪಡೆದುದು ಏನೋ ಅರಿಯದೆ ಕಳೆದುದು ಏನೋ ಕಾಣದ ಕೈಗಳ ಸ್ಪರ್ಶ ಮುಂದೆ ತರುವುದು ಎನೋ…ನಾ ಅರಿಯೇ ಆದರೆ….ನನ್ನ ಬೆರಳುಗಳು ನಿನ್ನ ಬೆರಳುಗಳ ಮಧ್ಯೆ ಬಂಧಿಯಾದಾಗ ಸ್ಪರ್ಶವನ್ನ ಮೀರಿದ ಅನುಭವವೊಂದಾಗಿತ್ತು..ಆ ಸಂಜೆಯ ಸೃಷ್ಟಿ ಕೇವಲ ನಮ್ಮಿಬ್ಬರಿಗಾಗಿ ಮಾತ್ರ ಎಂಬಂತಿತ್ತು..ಇಳಿಯುತ್ತಿದ್ದ ಸೂರ್ಯ ನಾಳೆಯ ಸಂಜೆಗೂ ಅವನನ್ನು ಬೀಳ್ಕೊಡಲು ನಮ್ಮಿಬ್ಬರನ್ನ ಆಹ್ವಾನಿಸಿದಂತಿತ್ತು..ಇಡೀ ದಿನ ಹಾರಾಡಿ ಆಹಾರ ಸಂಗ್ರಹಿಸಿ  ಮರಳಿ ಮನೆಗೆ ತೆರಳುತ್ತಿದ್ದ ಹಕ್ಕಿಗಳಿಗೆ ಅದ್ಯಾವುದೋ ಕನಸು ನಮ್ಮಿಬ್ಬರ ನೋಡಿ ಸೃಷ್ಟಿಯಾದಂತಿತ್ತು,ಆ ತೀರದ ಮರಳು ಅಲೆಯನ್ನು ಮತ್ತೆ ಮತ್ತೆ ಬಯಸಿದಂತಿತ್ತು… ತೂರಿಬಂದ ಗಾಳಿ ಮತ್ತೆ ಮತ್ತೆ ಸೋಕಲಿ ನಮ್ಮಿಬ್ಬರನ್ನು…ಕಾದ ಭೂಮಿಯನು ತಣಿಸಲು ಭರದ ತಯಾರಿ ನಡುಸುತ್ತಿರುವ ಮಳೆ ಅದೇಕೋ ಆಪ್ತವಾಗುತ್ತಿದೆ…ಅಂದು ಪಯಣಿಸಿದ್ದೆ ಅದೇ ಜಾಗದಲ್ಲಿ ಒಂಟಿಯಾಗಿ ಆದರೆ ಆಗ ಅದೇ ಸಂಜೆಯಲಿ ನಿನ್ನ ನೆನಪು ಜೊತೆಯಾಗಿತ್ತು,ಮಾತಿರಲಿಲ್ಲ ಆದರೆ ನೆನಪುಗಳಲ್ಲಿ ನೀನಿದ್ದೆ ಜೊತೆಗೆ ನಾನಿದ್ದೆ…

“ಮಾಧವ ನುಡಿಸಿದ ನಾದವ,ತೀರದಲಿ ಒಂಟಿಯಾಗಿ,

ರಾಧೆಯಿದ್ದಳು ಮಾಧವನ ಉಸಿರಲಿ ನಿರಂತರವಾಗಿ.

ರಾಗವ ನುಡಿಸುತ ಮಾಧವನಾದ ರಾಧೇಯ,

ರಾಧೆಯ ಮನಸದು ಮಾಧವನೊಡಲು,ರಾಗದೊಳಗಿನ ಜೀವವು.”

ನಾ ಬರೆದ ಈ ಸಾಲುಗಳನ್ನು ಅಂದು ಆ ತೀರದಲಿ ಒಂಟಿಯಾಗಿ ಹಾಡುತ್ತಿದ್ದೆ.ಒಂಟಿಯಿರುವಾಗಲೂ ಜೊತೆಗಿದ್ದೆ ಪ್ರಸ್ತುತವ ಮೀರಿದ ನೆನಪಾಗಿ,ಹಾಗಾಗಿಯೇ ಇದು ಎಲ್ಲವನ್ನೂ ಮೀರಿದ ಬಂಧ..
..ಅಂದು ಮಾಡಿದ ನಿವೇದನೆ ನೆನಪಾಗುತಿದೆ,ಇಂದು ಬರೆದ ಅದೇ ನಿವೇದನೆಯ ಕವನ ನನ್ನನ್ನೂ ಮೀರಿ ಆವರಿಸಿದೆ.ನಿನ್ನ ಕಣ್ಣಲ್ಲಿ ನನ್ನ ಬಿಂಬ ನೋಡುವ ತವಕ,ನಿನ್ನೆದರು ಕೂತಷ್ಟೂ ಹೊತ್ತು ನನ್ನ ಮರೆತಿದ್ದೆ ಆದರೆ ಧ್ಯಾನಿಯಾಗಿದ್ದೆ ನಿನ್ನ ಆ ನೋಟದಲಿ ಲೀನವಾಗಿ…ಆ ತೀರದಲಿ ಅದೆಷ್ಟು ದೂರ ಚಲಿಸಿದೆವು?ಗೊತ್ತಿಲ್ಲ ಅರಿಯುವ ಪ್ರಯತ್ನವನ್ನೂ ಮಾಡುವುದು ಬೇಡ..ನನ್ನ ಬೆರಳುಗಳ ಮಧ್ಯ ನಿನ್ನ ಬೆರಳುಗಳು,ನಮ್ಮಿಬ್ಬರ ನೋಟಗಳಲಿ ನಾವಿಬ್ಬರೇ ಬಂಧಿ,ಭಾವನೆ ನನ್ನೊಳಗೆ ಜಿನುಗಿ ನಿನ್ನ ಆವರಿಸಿದಂತಿತ್ತು,ನಿನ್ನ ಆ ನಗು ಆದ್ಯವುದೋ ಹಿತವಾದ ಸೋಲಿಗೆ ನನ್ನ ದೂಡಿದಂತಿತ್ತು…

“ ಹೆಜ್ಜೆ ಮೂಡದ ಹಾದಿಯಾಲಿ ಭಾವ ತೀರ ಯಾನ,

ಎರಡು ಜೀವಗಳು  ಸಂಧಿಸಿದೆ ನೆನಪಿನಲಿ ಎಲ್ಲವನೂ ಮೀರಿ.

ಸಂಜೆಯ ಹನಿಮಳೆಗೆ ಸೋತು ಕರಗಿತ್ತು ಭೂಮಿ,

ಎದೆಗೆ ಬಿದ್ದ ನಿನ್ನ ನೋಟ ಮರೆಸಿ ಮೀರಿಸಿತು ಪ್ರಸ್ತುತವ “

ನಿನ್ನ ಕಣ್ಣಂಚಿನ ನೀರು ನಿನ್ನ ಗೆಲುವಿನಿಂದಲೇ ಬರಲಿ…ನೀ ಬಯಸಿದ ಕಾಲದ ಸೃಷ್ಟಿ ನಿನ್ನ ಸಾಧನೆಯಿಂದಲೇ ಬರುವಂತಾಗಲಿ ..ಬರುವ ಕಾಲವದು ನಮಗಿಬ್ಬರಿಗೂ ಸಹಕರಿಸಲಿ.. ನಿನ್ನ ಕನಸುಗಳಲ್ಲಿ ನಂಗೊಂದು ಸ್ಥಾನ ಮೀಸಲಿಡು,ಬೈದುಬಿಡಬೇಡ ಇಲ್ಲೊಂಚೂರು ಸ್ವಾರ್ಥಿ ನಾನು..ಕಾಲವಾಡಿದ ಆಟದ ಎದುರು ಇಷ್ಟು ಕಾಲ ಬರಿಯ ನೆನಪುಗಳೊಂದಿಗೆ ಬದುಕಿದೆವು, ಕನಸುಗಳ ಮೀರಿ…ಮಾತು ಮೀರಿದ್ದು ನೋಟ…ಆ ಭಾವಗಳ ಸೃಷ್ಟಿ ನಿನ್ನೋಲವುಗಳಿಂದ…ಆವರಿಸು ನನ್ನನ್ನು ನಿರಂತರವಾಗಿ ನನ್ನೊಳಗಿನ ಸವಿಯಾದ ನೆನಪುಗಳ ಮೀರಿ…ಪ್ರತಿ ಕ್ಷಣವೂ ಅದು ನಮ್ಮಿಬ್ಬರದಾಗಲಿ… ಭಾವಗಳ ಸೃಷ್ಟಿ ಲೋಕವನ್ನೂ ಮೀರಿ ನಮ್ಮಿಬ್ಬರಿಗೆ ಮಾತ್ರ ಸೀಮಿತವಾಗಲಿ…

“ ನಿನ್ನ ನೋಟವದು ಎಲ್ಲವನ್ನೂ ಮೀರಿದ್ದು

ಬರೆದ ಸಾಲುಗಳ ಭಾವವನ್ನೂ..

ಅಂತರಂಗದ ಮಾತುಕತೆಗೆ ಮುನ್ನುಡಿಯ ಬರೆದಿದ್ದು

ನೀನು ನನ್ನೆದುರಿರುವ ಪ್ರಸ್ತುತವು….”

ಜೊತೆಗಿರು ನಾದದೊಳಗಿನ ಭಾವವಾಗೋಣ,ಕನಸನ್ನು ಮೀರಿ ಚಂದದ ಪ್ರಸ್ತುತವಾಗೋಣ,ನೀನೇ ಚಾಚಿ ಹಿಡಿದ ಬೆರಳನ್ನು ಸಡಿಲಗೊಳಿಸಬೇಡ..ಬರೆದ ಸಾಲುಗಳೆಲ್ಲ ಬಿಡದೇ ಕಾಡುವ ಸಮಯದಲಿ ನಿರಂತರವಾಗಿ ಜೊತೆಗಿರು..ಕಾಲದ ಜೊತೆಗೆ ನಮ್ಮಿಬ್ಬರ ಪಯಣ ನಿರಂತರ ಮುಂದುವರೆಯಲಿ..”

 – ಪ್ರಸನ್ನ ಹೆಗಡೆ

Categories: ಹರಿತ ಲೇಖನಿ

Tags:

Leave A Reply

Your email address will not be published.