ಓ… ನೀರೆ.. ನೀ ಬಾರೆ..!

ಮನಸು ಹಿಡಿತ ತಪ್ಪಿದಾಗ ಶಾಂತತೆಯನ್ನು ಅರಸಲು ನಾನು ಹೊರಟಿದ್ದು , ಕುಳಿತದ್ದು ಕೆರೆ ದಂಡೆಯ ಮುಂದೆ. ಸುಂದರ ಪರಿಸರದ ಮುಂದೆ ನೈಸರ್ಗಿಕ ಅಂದವನ್ನು ಸವಿಯುತ್ತಾ ಕುಳಿತಿರಲು, ಮನಸ್ಸಿನ ತೊಳಲಾಟ, ಹೊಯ್ದಾಟಗಳನ್ನು ಮರೆಸಿ ಹೊಸ ಉನ್ಮೀಲತೆಯ ಭಾವವನ್ನು ಕೊಡುತ್ತದೆ.
ಬಟ್ಟೆ ತೊಳೆಯುವ ಹೆಂಗಸರು, ಈಜುವ ಹುಡುಗರು, ದನ ಕರುಗಳನ್ನು ತೊಳೆಯುವ ರೈತರು, ಮೀನು ಹಿಡಿಯುವ ಯುವಕರು, ಕಲ್ಲುಗಳನ್ನು ಬೀಸುತ್ತಾ ಏಕ ಚಿತ್ತಸ್ಥರಾಗಿ ಕುಳಿತುಕೊಳ್ಳುವ ನನ್ನಂತವರು, ಅಲ್ಲಿ ಈಜುವ ಬಾತು ಕೋಳಿಗಳು ಮೀನುಗಳು… ಇತ್ಯಾದಿ ಕೆರೆಯ ಸುತ್ತ ನಡೆಯುವ ಕ್ರಿಯೆಗಳು.
ಇವರೆಲ್ಲರೂ ತಮ್ಮ ಕೆಲಸದಲ್ಲಿ ತೊಡಗಿಕೊಂಡಿದ್ದಾಗ ನನ್ನ ಆಲೋಚನಾ ಲಹರಿ ಬೇರೆಡೆ ತಿರುಗಿತು. ಕೆರೆಯ ಸೌಂದರ್ಯ ಅವರ್ಣನೀಯವಾದದ್ದು. ಹಿಂದೆ ನೋಡಿದರೆ ಸೂರ್ಯಾಸ್ತ, ಮುಂದೆ ನೋಡೆದರೆ ಸೂರ್ಯೋದಯ, ಗಳಿಗೆಗಳಿಗೆಗೂ ಕೆರೆ ತನ್ನ ಬಣ್ಣ ಬದಲಿಸುತ್ತದೆ. ಸೂರ್ಯೋದಯಕ್ಕೆ ಮುನ್ನ ಚಿನ್ನದ ಬಣ್ಣ, ನಂತರ ಬೆಳ್ಳಿ ತಗಡು ಕಂಡಂತೆ ಕಾಣುತ್ತದೆ. ಅಕ್ಕಪಕ್ಕದ ಕಾನನದ ಹಸಿರು ಗಿಡಗಳ ಪ್ರತಿಬಿಂಬ, ಸೂರ್ಯನೇ ಕೆರೆಯ ವದನಕ್ಕೆ ಕುಂಕುಮದ ಬೊಟ್ಟು, ಕೆರೆಗೆ ಪ್ರಕೃತಿಯೇ ಹಸಿರು ಸೀರೆಯನ್ನುಡುಸಿ ಬಳೆಯನ್ನು ತೊಡಿಸಿದಂತೆ ಕಾಣುತ್ತದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬಗ್ಗಿ ಕೆರೆಯಲ್ಲಿ ಮುಖ ನೋಡಿಕೊಂಡಾಗ ಕನ್ನಡಿಯಂತೆ ಪ್ರತಿಫಲಿಸುವ ಮುಖ, ಮರ, ಗಿಡಗಳ ಹಕ್ಕಿಗಳ ಚಿತ್ರಣಗಳಿಂದ ನೈಸರ್ಗಿಕ ಜಗತ್ತಿನ ವಿಸ್ಮಯತೆಯನ್ನು, ನಿಗೂಢತೆಯನ್ನು ತೋರಿಸುತ್ತದೆ.
ಕೆರೆ ನಿಂತ ನೀರಾಗಿರುತ್ತದೆ. ಕುಡಿಯಲು ಅಯೋಗ್ಯ. ಬಟ್ಟೆ ತೊಳೆದ ನೀರು, ಮನುಷ್ಯರ, ದನಗಳ ಮೈ ಸ್ನಾನದ ಕೊಳಕು ಅಸಹನೀಯವಾಗಿರುತ್ತದೆ. ದಂಡೆಗೆ ಮಾಡಿರುವ ಮಲವಿಸರ್ಜನೆ ದಾರಿಹೋಕರು, ಪ್ರವಾಸಿಗರು ಎಸೆಯುವ ಕಸಗಳಿಂದ ಕೆರೆಯ ಮೈ ಕೊಳಕಾಗಿ ಸುಕ್ಕುಗಟ್ಟಿದೆ. ಸೌಂದರ್ಯ (ಎಣ್ಣೆ ತರಹದ ಜಿಡ್ಡಿನ ನೀರಿಗೆಗಳು) ಮಾಸಿದೆ. ಕನ್ನಡಿಯಂತಿದ್ದ ಕೆರೆಯಲ್ಲಿ ಪ್ರತಿಬಿಂಬ ಕಾಣದಾಗಿದೆ. ನನ್ನ ಅಂತರಾಳದ ಕೂಗು ಕೇಳುವವರು, ಕಣ್ಣೀರು ಒರೆಸುವವರು ಯಾರಿಲ್ಲ ಎಂದು ಕೆರೆಯು ಮನಸ್ಸಿನಲ್ಲಿಯೇ ಅಳಲಾರಂಭಿಸಿದೆ. ಇದನ್ನೆಲ್ಲ ಮೀರಿ ಕೆರೆಯು ಯಾರನ್ನು ಬೈಯುತ್ತಿಲ್ಲ, ದೂಷಿಸುತ್ತಿಲ್ಲ. ಎಲ್ಲವನ್ನು ಹೊಟ್ಟೆಗೆ ಹಾಕಿಕೊಂಡು ಒಳಗೊಳಗೆ ನುಂಗಿ ಕೊರಗುತ್ತಿದ್ದಾಳೆ.
ಹಲವಾರು ದಶಕಗಳಿಂದ ನೀರಿಗಾಗಿ ಕಿತ್ತಾಟಗಳು ನಡೆಯುತ್ತಲೇ ಇವೆ. ಬರ ಪ್ರದೇಶಗಳಿಗೆ ಕುಡಿಯುವ ನೀರಿನ, ಹಾಗು ಕೃಷಿಗಾಗಿ ನೀರು ಹರಿಸುವ ಹಲವಾರು ಯೋಜನೆಗಳನ್ನು ತಂದಿದ್ದಾಗಿದೆ. ಆದರೆ ಇವೆಲ್ಲ ದೊಡ್ಡ ಮೊತ್ತದ ಯೋಜನೆಗಳು. ಈ ಯೋಜನೆಗಳಿಂದ ಹಣ ವ್ಯಯಿಸುವ, ಪರೋಕ್ಷವಾಗಿ ನಿಧಿ ಬಾಕರ ಹೊಟ್ಟೆಗೆ ಹೋಗುವುದನ್ನು ತಪ್ಪಿಸಬೇಕು. ಎಲ್ಲ ಹಣವು ನಮ್ಮದೇ ನಾವೇ ಕಟ್ಟಿದ ತೆರಿಗೆಯ ಹಣ. ಅನ್ಯಾಯವಾಗಿ ಇನ್ನೊಬ್ಬರ ಸ್ವೇಚ್ಛೇಗೆ ಬಲಿಯಾಗಬಾರದು.
ಬರ ಪ್ರದೇಶಗಳಲ್ಲಿ ಪರ್ಯಾಯ ಜಲ ಸಂಪನ್ಮೂಲಗಳನ್ನು ಕಂಡುಕೊಳ್ಳುವ ಪರಿಹಾರ ಅಥವಾ ಕ್ರಮಗಳನ್ನು ಕೈಗೊಳ್ಳಬೇಕು. ಭಾರತದಲ್ಲಿ ರಾಜರು, ಪುರಾತನ ಕಾಲದಲ್ಲಿ ಕೊರೆಸಿದ ಎಷ್ಟೋ ಕೆರೆಗಳು ಮತ್ತು ಭಾವಿಗಳ ತಂತ್ರಜ್ಞಾನವನ್ನು ತಿರುವಿ ಹಾಕಿದರೆ ಅರ್ಥವಾಗುತ್ತದೆ. ಇಂದಿಗೂ ಶತಮಾನಗಳಷ್ಟು ಹಳೆಯ ಕೆರೆಗಳು ಎಷ್ಟೋ ಗ್ರಾಮಗಳಿಗೆ, ಭೂಮಿಗೆ ನೀರುಣಿಸುತ್ತಿವೆ. ಆದರೆ ಆಧುನಿಕ ಕಳಪೆ ಕಾಮಗಾರಿಯಿಂದ ಅಂತರ್ಜಲದ ಮಟ್ಟ ಹೆಚ್ಚಿಸುವ ಯಾವುದೇ ಪರ್ಯಾಯ ವಿಧಾನಗಳನ್ನು ಕಾಣಲು ಸಾಧ್ಯವಿಲ್ಲ. ಅಲ್ಲದೇ ವರ್ಷದಿಂದ ವರ್ಷಕ್ಕೆ ಮಾನವನ ಸ್ವಾರ್ಥದಿಂದ ಮಳೆಯ ಪ್ರಮಾಣವೂ ಇಳಿಯುತ್ತಿದೆ. ಹಾಗಾಗಿ ಮಳೆಯ ಪ್ರಮಾಣ ಹಾಗೂ ಅಂತರ್ಜಲದ ಮಟ್ಟ ಏರಿಕೆ ಯಾಗುವಂತಹ, ತಂತ್ರಗಳನ್ನು ಗಿಡ ನೆಡುವಂತಹ ಉತ್ತಮ ಕ್ರಮಗಳನ್ನು ಕೈಗೊಳ್ಳಬೇಕು. ಆದರೆ ಇಂದಿನ ಕೆರೆಗಳು ವರ್ಷಪೂರ್ತಿ ನೀರಿಲ್ಲದೇ ಒಣಗಿ ಭೂಮಿ ಬಾಯ್ಬಿಟ್ಟಿದೆ.

ಸುಷ್ಮಾ ಉಪ್ಪಿನ್ ಇಸಳೂರ
ಪತ್ರಿಕೋದ್ಯಮ ವಿಭಾಗ
ಪ್ರಥಮ ಎಂ.ಸಿ.ಜೆ
ಎಸ್.ಡಿ.ಎಂ ಕಾಲೇಜು. ಉಜಿರೆ.

Categories: ಹರಿತ ಲೇಖನಿ

Tags:

Leave A Reply

Your email address will not be published.