ನಮ್ಮ ಕಾಳಜಿಯ ಜೊತೆ ಇರಲಿ ಸಾಮಾಜಿಕ ಕಳಕಳಿ

        ಸಾಮಾಜಿಕ ಕಳಕಳಿ ಎಂದರೆ ಹಾಗೆ, ಹೀಗೆ ಎಂದು ಸ್ಟೇಜ್ ಮೇಲಿದ್ದ ವ್ಯಕ್ತಿ ಪುಂಖಾನು ಪುಂಖವಾಗಿ ಹೇಳುತ್ತಲೇ ಇದ್ದರು. ಕೆಳಗೆ ಕುಳಿತ ನಮಗೆಲ್ಲ ದೇಹದಲ್ಲಿ ಕರೆಂಟ್ ಹರಿದ ಅನುಭವ. ಅಂದು ನಾವು ಸಾಮಾಜದ ಬಗೆಗಿನ ಕಾಳಜಿಯ ವಿಚಾರದಲ್ಲಿ ಪಣ ತೊಟ್ಟು ನಿಂತಿದ್ದೆವು. ಅವರು ಸ್ಟೇಜ್ ಇಳಿದು ಬಂದಾಕ್ಷಣ ಅವರಲ್ಲಿ ಹೋಗಿ ಆಟೋಗ್ರಾಫ್ ಪಡೆದು, ಅವರಿಗೊಂದು ಚಾಕಲೇಟ್ ನೀಡಿ ಕಳುಹಿಸಿದೆವು. ಅವರು ಕಾರ್ ಹತ್ತಿ ಕುಳಿತರು. ಕಾರ್ ಮುಂದೆ ಸಾಗಿತ್ತು. ಮುಂದೆ ಹೋಗುತ್ತಿದ್ದಂತೆ ಅವರ ಕಾರಿನ ಕಿಟಕಿಯಂದ ಚಾಕಲೇಟ್ ರ್ಯಾಪರೊಂದು ಹಾರಿ ಬಂದು ರಸ್ತೆಯ ಮಧ್ಯದಲ್ಲಿ ಅನಾಥವಾಗಿ ಬಿದ್ದಿತ್ತು.

     ಮೊನ್ನೆ ನನ್ನ ಮಿತ್ರನೊಬ್ಬನ ಯಶೋಗಾತೆ ಕೇಳಿ ಹೆಮ್ಮೆ ಎನಿಸಿತ್ತು. ಮಿತ್ರ ಬೆಂಗಳೂರ ಗಜಿ,ಬಿಜಿ ಟ್ರಾಫಿಕ್ ಮಧ್ಯದಲ್ಲಿ ನಿಂತಾಗ, ಪಕ್ಕದಲ್ಲಿ ಡಾಕ್ಟರ್ ಒಬ್ಬಳು ರಿಕ್ಷಾದವನಲ್ಲಿ ಕೇಳುತ್ತಿದ್ದಳಂತೆ. ‘ಒಂದು ಅರ್ಜೆಂಟ್ ಆಪರೇಶನ್ ಮಾಡುವುದಿದೆ ನಾನು ಇನ್ನು ಹತ್ತು ನಿಮಿಷದಲ್ಲಿ ನನ್ನ ಆಸ್ಪತ್ರೆ ಸೇರಬೇಕು ಸಾಧ್ಯವಾ?’ ಇದನ್ನು ಕೇಳಿದಾತ ‘ಈ ಟ್ರಾಫಿಕ್‍ನಿಂದ ತಪ್ಪಿಸಿಕೊಂಡು ಅಲ್ಲಿ ಹೋಗುವತನಕ ಮುಗಿಯಿತು, ಅವನು ಹೋದ ಅಂತಲೇ ತಿಳ್ಕೋಳಿ’ ಎಂದನಂತೆ. ಆಗ ನನ್ನ ಮಿತ್ರ ‘ಇಲ್ಲೆ ಇರಿ ಮ್ಯಾಡಮ್ ಒಂದು ನಿಮಿಷ’ ಎಂದು ಹೇಳಿದವನೇ ಬೈಕ್ ಅಲ್ಲಿಯೇ ನಿಲ್ಲಿಸಿ ಟ್ರಾಫಿಕ್ ಪೋಲೀಸರ ಹತ್ತಿರ ಮಾತನಾಡಿ ಟ್ರಾಫಿಕ್ ಕ್ಲಿಯರ್ ಮಾಡಿಸಿ ಡಾಕ್ಟ್ರಮ್ಮನಿಗೆ ಹೋಗಲು ಅನುವು ಮಾಡಿ ಕೊಟ್ಟನಂತೆ. ಇದು ನಿಜವಾದ ಸಾಮಾಜಿಕ ಕಳಕಳಿ.
ಸಾಮಾಜಿಕ ಕಳಕಳಿ ಎಂಬುದು ತಾಸುಗೆಟ್ಟಲೆ ಭಾಷಣ ಮಾಡುವುದರಿಂದಲೋ, ಅದರ ಬಗೆಗಿನ ಪುಸ್ತಕ ಓದುವುದರಿಂದಲೋ ಬರಲಾರದು. ನಮ್ಮೊಳಗೆ ಸಮಾಜದದ ಬಗೆಗೆ ಪ್ರೀತಿ ಇದ್ದಾಗ, ಸಮಾಜದ ಬಗ್ಗೆ ನಿಜವಾದ ಕಾಳಜಿ ಇದ್ದಾಗ ಮಾತ್ರ ಅದು ಸಾಧ್ಯ.

ಸಾಮಾಜಿಕ ಕಳಕಳಿ ಮೂಡಲು ಓದಿದವರೇ ಆಗಬೇಕೆಂದಿಲ್ಲ!
ಸಾಮಾಜಿಕ ಕಳಕಳಿ ಮೂಡಲು ಓದಿದವರೇ ಆಗಬೇಕೆಂದಿಲ್ಲ. ಅನಕ್ಷರಸ್ಥನಾದರೂ ಅವರಲ್ಲಿ ಸಮಾಜಕ್ಕೆ ಒಳ್ಳೆಯದನ್ನು ಮಾಡಬೇಕೆಂಬ ಅರಿವಿದ್ದರೆ ಸಾಕು. ಕಸವನ್ನು ಕಸದ ಬುಟ್ಟಿಗೇ ಹಾಕುವುದು, ಬ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡದೇ ಇರುವುದು, ಬಸ್‍ನಲ್ಲಿ ಹಿರಿಕರಿಗೆ ಸೀಟ್ ಬಿಟ್ಟು ಕೊಡುವುದು, ಸರ್ಕಾರಿ ಆಸ್ತಿಗಳ ಸಂರಕ್ಷಣೆ, ಯಾರಿಗೋ ಅಪಘಾತವಾಗಿ ರಕ್ತ ಬೇಕಿರುತ್ತದೆ ಅವರಿಗೆ ರಕ್ತ ನೀಡುವುದು ಹೀಗೆಯೆ ಪಟ್ಟಿ ಮಾಡುತ್ತಾ ಹೋದರೆ ಬಹಳವೇ ಸಿಗುತ್ತವೆ. ಆದರೆ ನಮ್ಮ ಸ್ವಾರ್ಥ ಮರೆತು ಕೆಲಸ ಮಾಡಿದರೆ ಯಶಸ್ಸು ಸಾಧ್ಯ.

ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ

ಎಲ್ಲರಲ್ಲೂ ಸಾಮಾಜಿಕ ಕಳಕಳಿಯ ಮನೋಭಾವನೆ ಇದೆ ಆದರೆ ಅದನ್ನು ಕಾರ್ಯರೂಪಕ್ಕೆ ತರುತ್ತಿಲ್ಲವಷ್ಟೇ!
ನಾವು ಅದೆಷ್ಟೋ ಬಾರಿ ಸಾಮಾಜಿಕ ಕಾಳಜಿಯ ಬಗೆಗೆ ಯೋಚಿಸಿರುತ್ತೇವೆ, ಅಂತೆಯೇ ತಪ್ಪುಗಳನ್ನು ಬದಲಾಯಿಸಲು ರೂಪು ರೇಷೆಗಳನ್ನು ಸಿದ್ಧ ಪಡಿಸಿರುತ್ತೇವೆ, ಆದರೆ ಅದನ್ನು ಕಾರ್ಯ ರೂಪಕ್ಕೆ ತರುವಲ್ಲಿ ಮಾತ್ರ ಎಡವುತ್ತೇವೆ. ಯಾವುದಾದದರೂ ಸಮಾಜ ಹಿತೈಷಿ ಕೆಲಸ ಮಾಡಲು ಹೊರಟಾಗ ನಮ್ಮ ಮಿತ್ರರು ಏನಾದರೂ ಅಂದುಕೊಂಡು ಬಿಟ್ಟರೆ?, ಉಳಿದವರು ಏನೆಂದು ಕೊಂಡುಬಿಡುತ್ತಾರೆನೋ ಈ ರೀತಿ ಮನೋಭಾವನೆಗಳು ಸಾಮಾಜಿಕ ಕಳಕಳಿಗೆ ಕುಂದುತರುತ್ತವೆ.
ಬೇರೆಯವರ ಮಾತಿಗೆ ಹೇಳಿ ಡೋಂಟ್‍ಕೇರ್
ನೀವು ಏನನ್ನಾದರೂ ಸಮಾಜಕ್ಕೆ ಒಳಿತು ಮಾಡ ಹೊರಟರೆ ಬೇರೆಯರ ಮಾತಿಗೆ ಸೊಪ್ಪು ಹಾಕದೇ ನಿಮಗೆ ಯಾವುದು ಸರಿ ಅನ್ನಿಸಿತೋ ಅದನ್ನು ಮಾಡುತ್ತಾ ಹೋಗಿ. ಮಿತ್ರರು ಅದನ್ನು ನೋಡಿ ಹೀಯಾಳಿಸುತ್ತಾರೆ ಎಂತಾದರೆ ಹಿಯಾಳಿಸಲಿ ಬಿಡಿ. ಅವರ ಗಹಗಹಿಕೆಯ ನಗುವಿಗೆ ನಿಮ್ಮದೊಂದು ಚಿಕ್ಕ ನಗುವಿತ್ತು ಕಾರ್ಯಾರಂಭ ಮಾಡಿ. ನಂತರ ನಿಮ್ಮ ಮಿತ್ರರೂ ನಿಮಗೆ ಹೆಗಲು ನೀಡುತ್ತಾರೆ.
ಸಾಮಾಜಿಕ ಕಳಕಳಿ ಮೈಗೂಡಿಸಿಕೊಳ್ಳುವುದು ಸ್ವಲ್ಪ ಕಷ್ಟ, ಆದರೆ ಅಸಾಧ್ಯವಲ್ಲ
ಕೆಲವು ಕೆಲಸಗಳು ಮಾಡುವುದು ಕಷ್ಟವೆನ್ನಿಸುತ್ತದೆಯಾದರೂ ಅದು ಮೈಗೂಡಿದಾಗ ಅಸಾಧ್ಯವೆನ್ನಿಸುವುದಿಲ್ಲ. ಉದಾಹರಣೆಗೆ ನೀವು ಚಾಕಲೇಟ್ ತಿಂದ ನಂತರ ಅದನ್ನು ಕಸದ ಬುಟ್ಟಿಗೆ ಹಾಕಲು ಅಲ್ಲೆಲ್ಲಿಯೋ ಕಸದ ಬುಟ್ಟಿ ಹುಡುಕುವಿರಿ. ಆದರೆ ಕಸದ ಬುಟ್ಟಿ ಇರುವುದಿಲ್ಲ, ಹೀಗಿರುವಾಗ ಅದನ್ನು ಎತ್ತಿ ಬ್ಯಾಗನಲ್ಲಿಯೋ ಅಥವಾ ಕಿಸೆಯಲ್ಲಿಯೋ ಇಟ್ಟುಕೊಂಡು ಕಸದ ಬುಟ್ಟಿ ಕಂಡಾಗ ಅದನ್ನು ತೆಗೆದು ಹಾಕಬೇಕು. ಇದು ಸ್ವಲ್ಪ ಕಷ್ಟವೇ, ಆದರೆ ಅದನ್ನು ಮೈಗೂಡಿಸಿಕೊಂಡಾಗ ಇದು ಅಸಾಧ್ಯವಲ್ಲ.
ನಾವು ಮೊದಲು ಬದಲಾಗೋಣ, ಸಮಾಜದಲ್ಲಿರುವವರು ನಮ್ಮನ್ನು ನೋಡಿ ಬದಲಾಗುತ್ತಾರೆ
ಯಾರೋ ಕಸವನ್ನು ಕಂಡ, ಕಂಡಲ್ಲಿ ಬಿಸಾಡಿದರೆ ಅವರೆದುರು ನಿಂತು ವಾದ ಮಾಡಿ ಬಾಯಿ ಸೋಲಿಸಿ ಕೊಳ್ಳುವ ಬದಲು ಸುಮ್ಮನೆ ಏನು ಹೇಳದೇನೆಯೆ ಅವರೆದುರೇ ಕಸವನ್ನು ತೆಗೆದು ಕಸದ ಬುಟ್ಟಿಗೆ ಹಾಕಿದರೆ ನಂತರ ಅವರು ಮುಂದೆ ಆ ತಪ್ಪು ಮಾಡಲಾರರು ಎಂಬುದು ನನ್ನ ಅಭಿಪ್ರಾಯ. ಇನ್ನು ನಾನು ಲಂಚ ಮುಟ್ಟುವುದಿಲ್ಲ, ಪಡೆಯುವುದೂ ಇಲ್ಲ ಎಂಬ ಗಟ್ಟಿ ಮನಸ್ಸು ಮಾಡಿರೆ ನಿಮ್ಮನ್ನು ನೋಡಿ ನಾಲ್ಕು ಜನ ಕಲಿಯುತ್ತಾರೆ. ನೀವು ಬದಲಾದಂತೆ ಸಮಾಜದಲ್ಲಿರುವವರೂ ನಿಮ್ಮ ಬದಲಾವಣೆಯಿಂದ ಬದಲಾಗುತ್ತಾರೆ.
ಸಮಾಜವನ್ನು ಬೆಳೆಸಲಾಗದಿದ್ದರೂ ತೊಂದರೆಯಿಲ್ಲ ವಿನಾಶ ಮಾಡಬೇಡಿ.
ಕೆಲವರಿಗೆ ಒಂದಷ್ಟು ವಿಕೃತ ಸಂತೋಷವಿರುತ್ತದೆ. ಬಸ್‍ನ ಸೀಟ್ ಕೀಳುವುದು, ತಮ್ಮ ಗುರಿ ನೋಡಲು ಬೀದಿ ದೀಪಕ್ಕೆ ಕಲ್ಲು ಎಸೆಯುವುದು, ಯಾರಾದರು ಅಪರಿಚಿತರು ದಾರಿ ಕೇಳಿದಾಗ ಸುಳ್ಳು ದಾರಿ ಹೇಳಿ ಖುಷಿ ಪಡುವುದು, ಬಸ್‍ಸ್ಟಾಪ್‍ಗಳ ಗೋಡೆಗಳಮೇಲೆ ಬರೆಯುವುದು ಹೀಗೆಯೆ ಹಲವಷ್ಟು. ಇದರಿಂದ ಅವರಿಗೆ ಚಿಕ್ಕಾಸೂ ಪ್ರಯೋಜನವಿಲ್ಲ. ಇಂತವರು ಸಮಾಜದ ಏಳ್ಗೆಗೆ ಶ್ರಮಿಸದಿದ್ದರೂ ತೊಂದರೆ ಇಲ್ಲ ಆದರೆ ನಾಶಕ್ಕೆ ಮಾತ್ರ ಬುನಾದಿ ಹಾಕಬೇಡಿ. ಏಕೆಂದರೆ ನಿಮ್ಮನ್ನು ನೋಡಿ ಕಲಿಯುವವರು ಬಹಳ ಮಂದಿ ಇರುತ್ತಾರೆ.
ಸಮಾಜವನ್ನು ಕಟ್ಟಿ ಬೆಳೆಸುವ ಜವಾಬ್ದಾರಿ ನಮ್ಮದು. ನಮಗೆ ಆಶ್ರಯವಿತ್ತ ಈ ಸಮಾಜದ ಬಗೆಗೆ ಎಲ್ಲರೂ ಒಂದು ಸ್ವಲ್ಪ ಕಾಳಜಿ ಇತ್ತರೂ ಸಾಕು. ಎಲ್ಲ ಪ್ರಾಣಿಗಳೂ ಅವರ ಪಾಡಿಗೆ ಅವಿದ್ದು ಬಿಡುತ್ತವೆ. ಆದರೆ ನಾವು ಮಾನವರು, ಬುದ್ಧಿಜೀವಿಗಳು. ನಾವು ಸ್ವಲ್ಪವಾದರೂ ಕಾಳಳಜಿ ವಹಿಸಿ ಸಮಾಜವನ್ನು ಯಶಸಿನತ್ತ ಕೊಂಡೊಯ್ಯಲು ಇಂದೇ ಪಣ ತೊಡೋಣ. ಸ್ವಚ್ಛ ಭಾರತ್, 2020 ಕನಸಿನ ಭಾರತವನ್ನು ನನಸಾಗಿಸೋಣ.

-ರಾಜೇಶ್ ದುಗ್ಗುಮನೆ

Categories: ಹರಿತ ಲೇಖನಿ

Tags:

2 Comments

Leave A Reply

Your email address will not be published.